ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು

Love : ‘ಬೇಸರವೇನೂ ಆಗಲಿಲ್ಲ ಸತ್ಯಕ್ಕೂ. ತನ್ನವಳನ್ನು ಇಷ್ಟು ಪ್ರೇಮಿಸುವ ಗಂಡಂದಿರು ನನ್ನ ದೃಷ್ಟಿಯಲ್ಲಿ ಎತ್ತರಕ್ಕೇರುತ್ತಾರೆ. ಸಣ್ಣಗೆ ಅಸೂಯೆಯಾದರೂ ಅಭಿಮಾನದಿಂದ ನಿಮ್ಮನ್ನೇ ನೋಡುತ್ತಿದ್ದವಳ ಕಣ್ಣಿಗೆ ಕಂಡಿದ್ದು ತುಳುಕುತ್ತಿದ್ದ ಅಭಿಮಾನ. ಒಲುಮೆ!.’ ನಂದಿನಿ ಹೆದ್ದುರ್ಗ

ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು
ಫೋಟೋ : ಕೃಷ್ಣ ದೇವಾಂಗಮಠ
Follow us
ಶ್ರೀದೇವಿ ಕಳಸದ
|

Updated on: Feb 15, 2022 | 7:04 PM

ಋತುವಿಲಾಸಿನಿ | Rutuvilaasini : ದಾನ ಅಪಾತ್ರವಾಗಬಾರದು ಅಂತಾರಲ್ಲ ಹಾಗೆಯೇ ಪ್ರೇಮವೂ ತಾನೇ? ವಜ್ರಾಸನಕ್ಕೆ ಕೂತು ಮುಂದಕ್ಕೆ ಬಗ್ಗಿ ಇಷ್ಟು ಹೊತ್ತಾದರೂ ಏನೂ ಅನಿಸುತ್ತಿಲ್ಲ. ಜೀವ ಸ್ಪಂದಿಸುವ ಸ್ಥಿತಿಯನ್ನೇ ಕಳೆದುಕೊಂಡಿರಬಹುದೇ? ಉಹು… ಹಾಗಿಲ್ಲ. ಎದೆಯೊಳಗೆ ಬೆಳಕು ತುಂಬಿಕೊಂಡು ನಿಮ್ಮ ಕುರಿತೇ ಯೋಚಿಸುತ್ತೇನೆ. ಬಗ್ಗಿದವಳ ಕಣ್ಣಮುಂದೆ ದೇಹವೆಲ್ಲ ಪ್ರೇಮದ ಪ್ರಭೆಯಿಂದ ಬೆಳಗುತ್ತಿರುವ ನೀವು ಮೂಡುತ್ತೀರಾ. ಹುಬ್ಬು ತೀಡಬೇಕೆನ್ನುವ ನನ್ನ ಮರುಳು ಇದ್ದಕ್ಕಿದ್ದಂತೆ ಉದ್ದೀಪನಗೊಳ್ಳುತ್ತದೆ. ಛಿಲ್ಲನೇ ಒಳಗೊಂದು ಪ್ರೇಮದ ಹಾರ್ಮೋನು ಚಿಮ್ಮಿದ ಅನುಭವ. ಹೀಗೆ ಅಚಾನಕ್ಕು ತುಂಬಿಕೊಳ್ಳುವ ಖುಷಿಯನ್ನು ಅಕ್ಷರಕ್ಕೆ ಇಳಿಸಲಾಗದು. ಯಾರು ಏನು ಯಾಕೆ ಹೇಗೆ ಸಾಧುವಾ ಸಾಧ್ಯವಾ ಪಾತ್ರವಾ ಅಪಾತ್ರವಾ… ಈ ಎಲ್ಲಾ ಪ್ರಶ್ನೆಗಳೂ ಉಕ್ಕಿಬಂದ ನೆರೆಯಲ್ಲಿ ಕೊಚ್ಚಿ ಹೋಗುತ್ತವೆ ಎಂದಿನಂತೆ. ನಂದಿನಿ ಹೆದ್ದುರ್ಗ, ಕವಿ, ಲೇಖಕಿ (Nandini Heddurga)

*

(ಋತು 1)

ವಜ್ರಾಸನದಲ್ಲಿ ಕುಳಿತು ಮುಂದಕ್ಕೆ ಬಾಗಿದ್ದೇನೆ. ಯಾಕೆ ಹೀಗೆ ಕೂತಿದ್ದೇನೆ… ಗೊತ್ತಾಗ್ತಿಲ್ಲ.

ಬೆಳಿಗ್ಗೆ ಎದ್ದಾಗಿನಿಂದ ಈ ಘಳಿಗೆಯವರಿಗೆ ನಮ್ಮ ನಡುವೆ ಬದಲಾದ ಮೆಸೇಜುಗಳು ಒಳಗೊಂದು ಝಂಝಾವಾತವನ್ನೇ ಸೃಷ್ಟಿಸಿದ ಹೊತ್ತಿನಲ್ಲಿ ಮೆದುಳು ಮತ್ತು ಹೃದಯ ಎರಡೂ ತ್ರಾಣ ಕಳೆದುಕೊಂಡಿವೆ. ಸುತ್ತೆಲ್ಲ ಚೈತ್ರ ಹೊರಳಿಕೊಳ್ಳುವ ಹೊತ್ತಿನಲ್ಲಿ ನಾನೇ ಮಾಗಿಯನ್ನು ಒತ್ತಾಯಿಸಿ ಕರೆದಂತೆ ಅನಿಸ್ತಿದೆ. ಮರುಜನ್ಮದ ನಂಬಿಕೆ ನಿಮಗಿಲ್ಲ.

ಆದರೆ ನಾನು…?

ನನ್ನ ಇಂದಿನ ಕರ್ಮಗಳು ನಾಳೆಯನ್ನು ರೂಪಿಸುತ್ತವೆ ಎನ್ನುವ ನಂಬಿಕೆ ಇರುವವಳು. ನಿಮ್ಮ ಪ್ರೇಮದ ಕುಟುಂಬಕ್ಕೆ ನನ್ನಿಂದಾಗಿ ದ್ರೋಹ ಆಗ್ತಿದೆ. ಇಡಿಯಾಗಿ ಅಲ್ಲಿ ಸಲ್ಲಬೇಕಾದವರು ನೀವು… ಬಿಡಿಬಿಡಿಯಾಗಿ ನಾನು ನಿಲ್ಲಿಸಿಕೊಳ್ಳುತ್ತಿದ್ದೇನೆ. ಇದು ‘ನನ್ನ ನಾಳೆಗಳ ಮೇಲೆ ಪರಿಣಾಮ ಬೀರಬಲ್ಲದೆ?’ ಹೀಗೊಂದು ಯೋಚನೆ ಮೊನ್ನೆಯಿಂದಲೂ ನನ್ನ ಕೊರೆಯುತ್ತಿದೆ. ಬಯಸಿ ಬಯಸಿ ಭೆಟ್ಟಿ ಆಗುತ್ತೇವೆ. ಎಷ್ಟೋ ಲೆಕ್ಕಾಚಾರಗಳ ನಂತರ ಅದೊಂದು ದಿವ್ಯ ಸಮಯ ನಮಗೆ. ಒಟ್ಟಿಗೆ ಊಟ ಮಾಡುವುದು ನನ್ನಿಷ್ಟದ ಸಂಗತಿ.

ಮೊನ್ನೆಯಾದದ್ದೂ ಅದೇ. ಕಾರಣ ಪೋಣಿಸಿ ಮನೆಯಿಂದ ಹೊರಬಂದವಳು ನಿಮ್ಮ ಜೊತೆಯಾಗಿದ್ದೆ. ಹುಡುಕಿ ಹುಡುಕಿ ಊಟ ಮಾಡಬೇಕಾದ ಸ್ಥಳ ನಿಗದಿಯಾಯಿತು. ಇಬ್ಬರ ತಟ್ಟೆಯಲ್ಲೂ ಬಡಿಸಿಕೊಂಡ ಬಯಕೆಗಳಿದ್ದವು. ಲೋಕದ ಕಣ್ಣು ತಪ್ಪಿಸಿ ನನಗೊಂದು ಕೈತುತ್ತು ದಕ್ಕಬಹುದೆಂಬ ನಿರೀಕ್ಷೆಯಲ್ಲಿ ನಾನಿನ್ನೂ ಊಟ ಆರಂಭಿಸಿರಲಿಲ್ಲ. ಯಾವುದೋ ಲೋಕಾಭಿರಾಮದ ವಾಕ್ಯ ಮಾತಾಡಿ ಮುಗಿದ ಮೇಲೆ ನೀವು ಬದಿಯಲ್ಲಿದ್ದ ಫೋನ್ ಕೈಗೆತ್ತಿಕೊಂಡಿರಿ.

ಕರೆ ಹೋಗಿದ್ದು ಮತ್ತದೆ ಕುಟುಂಬಕ್ಕೆ…

ಊಟ ಮಾಡಿದ್ಯಾ ಕೇಳಲಿಕ್ಕೆ. ಬೇಸರವೇನೂ ಆಗಲಿಲ್ಲ ಸತ್ಯಕ್ಕೂ. ತನ್ನವಳನ್ನು ಇಷ್ಟು ಪ್ರೇಮಿಸುವ ಗಂಡಂದಿರು ನನ್ನ ದೃಷ್ಟಿಯಲ್ಲಿ ಎತ್ತರಕ್ಕೇರುತ್ತಾರೆ. ಸಣ್ಣಗೆ ಅಸೂಯೆಯಾದರೂ ಅಭಿಮಾನದಿಂದ ನಿಮ್ಮನ್ನೇ ನೋಡುತ್ತಿದ್ದವಳ ಕಣ್ಣಿಗೆ ಕಂಡಿದ್ದು ತುಳುಕುತ್ತಿದ್ದ ಅಭಿಮಾನ. ಒಲುಮೆ! ಸಣ್ಣನೆಯ ಅಸೂಯೆಯ ಕಿಡಿಗೆ ನಿಮ್ಮ ಇನ್ನೂ ತಗ್ಗಿದ ಧ್ವನಿ ಅರ್ಘ್ಯ ಸುರಿಯಿತು. ನೋವು ಧಗಧಗಿಸುವುದಕ್ಕೆ ಹೆಚ್ಚು ಕಾಲ ಬೇಕಾಗುವುದಿಲ್ಲ ನನಗೆ. ಅಸಹಾಯಕತೆಯಲ್ಲಿ ಸುತ್ತೂ ನೋಡಿದೆ. ರಜಾದಿನದ ಸಂಭ್ರಮ ತುಂಬಿದೆ ಇಡೀ ಹೋಟೆಲಿನಲ್ಲಿ. ಎಳೆಯ ಗಂಡ ಹೆಂಡತಿ, ನಡುವಯದ ಮಕ್ಕಳೊಂದಿಗರು, ಅಜ್ಜ ಅಜ್ಜಿ ಸಮೇತ ಬಂದವರು. ಅಂಜಿಕೆಯಿಲ್ಲದೆ ಯಾರೋ ನೋಡಿಯಾರೆಂಬ ದಿಗಿಲಿಲ್ಲದೆ ತುತ್ತು ಕೊಡುತ್ತಿರುವವರು, ಮೆಚ್ಚಿಕೊಂಡವನ ಜೊತೆಗೆ ಬಟ್ಟಲು ಹಂಚಿಕೊಳ್ಳುತ್ತಿರುವವರು. ರುಚಿಯ ಜೊತೆಗೆ ಒಲುಮೆಯನ್ನೂ ಇಳಿಸಿಕೊಳ್ಳುವವರು. ದೃಷ್ಟಿ ಮಂಜಾಗುವ ಮುನ್ನ ಕಣ್ಣತುದಿಗೆ ಕಿರುಬೆರಳು ತಾಗಿಸಿಕೊಂಡು ಕೆಳಕ್ಕೆ ಮಿಡಿದೆ. ಅನಾಥ ಕಣ್ಣೀರಿನ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿ ಅಡಿಯಲ್ಲಿ ಸತ್ತು ಹೋಯಿತು.

ನಂದಿನಿಯವರ ಈ ಬರಹವನ್ನೂ ಓದಿ : Rain : ‘ಬಿತ್ತೊಂದು ಹನಿ, ಉಲಿದಂತೆ ಅವನ ಧ್ವನಿ ರೊಯ್ಯರೊಯ್ಯನೆ ಪಾರಿವಾಳದ ದಾರಿ’

Rutuvilaasini column by Kannada Poet Writer Nandini Heddurga skvd

ಫೋಟೋ : ಕೃಷ್ಣ ದೇವಾಂಗಮಠ

ಅಷ್ಟರಲ್ಲಿ ನಿಮ್ಮ ಮಾತು ಮುಗಿದು ನನ್ನೇ ನೋಡಿದಿರಿ. ‘ಕರ್ತವ್ಯ’ ಎಂದ ಮಾತಿನಲ್ಲಿ ಸಮರ್ಥನೆ ಅಂಶ ಹುಡುಕಹೋಗಿ ನಿರಾಶಳಾದೆ. ‘ಮುಂದಿನ ವಾರ ಇಲ್ಲಿಗೆ ಬರೋಣಾ ಅಂದಳು.ಇಡೀ ನಗರದ ಯಾವ ಹೋಟೆಲ್ ಕೂಡ ಬಿಟ್ಟಿಲ್ಲ.’ ಧ್ವನಿಯಲ್ಲಿ ಅಭಿಮಾನ ತುಳುಕಿಸುತ್ತ ಹೇಳಿದ ಮಾತಿಗಿಂತಲೂ ಮುಂದಿನ ನಡೆಯ ಬಗ್ಗೆ ನನ್ನ ಜೀವ ಕಾತರಿಸುತ್ತಿತ್ತು. ಸುದೀರ್ಘ ಮಾತು ಮುಗಿಯುವವರೆಗೂ ಎದುರು ತಟ್ಟೆಯಿಂದ ಒಂದೂ ತುತ್ತು ಬಾಯಿಗಿಡದೇ ಕಾಯುತ್ತಿದ್ದೆ. ಪರಿಚಿತರು ಇಲ್ಲೆಲ್ಲೂ ಕಾಣ್ತಿಲ್ಲ ಎನ್ನುವುದನ್ನು ಧೃಡಪಡಿಸಿಕೊಳ್ಳುವುದರಲ್ಲೂ ನಿರತಳಾಗಿದ್ದೆ. ಜೊತೆಗೊಂದು ಮರುಳು ಯೋಚನೆಯೂ ಇತ್ತು. ನನ್ನಂತೆ ಕದ್ದು ಮುಚ್ಚಿ ಬಂದವರು ಇಲ್ಲಿ ಯಾರಾದರೂ ಇರಬಹುದೇ? ಬಹುತೇಕ ರಾಜಾರೋಷಿನವರೇ ಇಲ್ಲಿ ತುಂಬಿದ್ದರು. ‘ಅವಳಿಗೆ ಇಲ್ಲಿದ್ದೀನಿ ಅಂತ ಹೇಳಬೇಕಲ್ವಾ’ ನಾನು ಹು ಅನ್ನುವುದಾ ಉಹು ಅನ್ನುವುದಾ ಎನ್ನುವಷ್ಟರಲ್ಲಿ ನೀವು ಊಟ ಆರಂಭಿಸಿದ್ದಿರಿ. ನೀವು ಕೊಡುವ ಕೈತುತ್ತೇ ನನ್ನ ಈ ಹೊತ್ತಿನ ಮೊದಲ ತುತ್ತಾಗಬೇಕು ಎನ್ನುವ ನನ್ನ ನಿರೀಕ್ಷೆ ಬಣ್ಣ ಕಳೆದುಕೊಂಡಿತು. ಈಗಲೂ ಅದನ್ನೇ ಯೋಚಿಸ್ತಿದ್ದೇನೆ. ಇಲ್ಲಿ ನಾನು ಯಾರು? ಏನಾಗಬೇಕು ನಿಮಗೆ? ಏನೋ ಕೊರತೆಯಿದ್ದರೆ ಅಲ್ಲಿಗೊಂದು ಒರತೆಯಾಗಿ ನಾನು ನಿಲ್ಲುವುದು ಸರಿ. ಆದರೆ ಅಲ್ಲಿರುವುದು ಸದಾ ಚಿಮ್ಮುವ ಸೆಲೆ.

ದಾನ ಅಪಾತ್ರವಾಗಬಾರದು ಅಂತಾರಲ್ಲ ಹಾಗೆಯೇ ಪ್ರೇಮವೂ ತಾನೇ? ವಜ್ರಾಸನಕ್ಕೆ ಕೂತು ಮುಂದಕ್ಕೆ ಬಗ್ಗಿ ಇಷ್ಟು ಹೊತ್ತಾದರೂ ಏನೂ ಅನಿಸುತ್ತಿಲ್ಲ. ಜೀವ ಸ್ಪಂದಿಸುವ ಸ್ಥಿತಿಯನ್ನೇ ಕಳೆದುಕೊಂಡಿರಬಹುದೇ? ಉಹು… ಹಾಗಿಲ್ಲ. ಎದೆಯೊಳಗೆ ಬೆಳಕು ತುಂಬಿಕೊಂಡು ನಿಮ್ಮ ಕುರಿತೇ ಯೋಚಿಸುತ್ತೇನೆ. ಬಗ್ಗಿದವಳ ಕಣ್ಣಮುಂದೆ ದೇಹವೆಲ್ಲ ಪ್ರೇಮದ ಪ್ರಭೆಯಿಂದ ಬೆಳಗುತ್ತಿರುವ ನೀವು ಮೂಡುತ್ತೀರಾ. ಹುಬ್ಬು ತೀಡಬೇಕೆನ್ನುವ ನನ್ನ ಮರುಳು ಇದ್ದಕ್ಕಿದ್ದಂತೆ ಉದ್ದೀಪನಗೊಳ್ಳುತ್ತದೆ. ಛಿಲ್ಲನೇ ಒಳಗೊಂದು ಪ್ರೇಮದ ಹಾರ್ಮೋನು ಚಿಮ್ಮಿದ ಅನುಭವ. ಹೀಗೆ ಅಚಾನಕ್ಕು ತುಂಬಿಕೊಳ್ಳುವ ಖುಷಿಯನ್ನು ಅಕ್ಷರಕ್ಕೆ ಇಳಿಸಲಾಗದು. ಯಾರು ಏನು ಯಾಕೆ ಹೇಗೆ ಸಾಧುವಾ ಸಾಧ್ಯವಾ ಪಾತ್ರವಾ ಅಪಾತ್ರವಾ… ಈ ಎಲ್ಲಾ ಪ್ರಶ್ನೆಗಳೂ ಉಕ್ಕಿಬಂದ ನೆರೆಯಲ್ಲಿ ಕೊಚ್ಚಿ ಹೋಗುತ್ತವೆ ಎಂದಿನಂತೆ.

ನಾವು ಪ್ರೇಮದ ಮಾತುಗಳನ್ನು ಆಡಿಕೊಳ್ಳುವಾಗೆಲ್ಲ ಒಳಗೊಳಗೇ ಭಯವಾಗುವುದು ಇದ್ದೇ ಇದೆ. ನಟಿಸುತ್ತಿರಬಹುದಾ ನೀವು? ತೀವ್ರವಾದ ಈ ಘಳಿಗೆ ಕನಸಾ? ‘ಒಂದು ಜವಬ್ದಾರಿ ಇದೆ … ನಮಗಿಬ್ಬರಿಗೂ. ನಿನ್ನ ಹಠದ ಜೊತೆಗೆ ಸಂದೇಹದ ಜೊತೆಗೆ ನಿನ್ನ ತೀವ್ರ ಪ್ರೇಮ ಎಲ್ಲಿಯೂ ಕಳೆದುಹೋಗದಂತೆ ನೋಡಿಕೊಳ್ಳಬೇಕಾದ ಜವಬ್ದಾರಿ ನನ್ನದಾದರೆ, ನನ್ನ ಕರ್ತವ್ಯ ಇತಿಮಿತಿ ಕುಟುಂಬ ಇದೆಲ್ಲದರ ನಡುವೆಯೂ ನಾನು ನಿನ್ನನ್ನೇ ಧ್ಯಾನಿಸುತ್ತಿದ್ದೇನೆ ಎನ್ನುವ ಸತ್ಯ ನಿನಗೆ ಅರಿವಾಗಿ ಜೀವ ಮೆದುವಾಗಿಯೇ ಇರಿಸಿಕೊಳ್ಳಬೇಕಾದ್ದು ನಿನ್ನ ಜವಾಬ್ದಾರಿ. ಮತ್ತೂ ಮುಂದುವರೆಯುತ್ತದೆ.

ಆಲಿಕೆಯ ಮರುಳು ಹಿಡಿದವಳು ನಾನು… ಮತ್ತೇನೂ ಮಾಡಲಾಗದೆ ಕಿವಿಯ ಜೊತೆಗೆ ಹೃದಯವೂ ಆಲಿಸಲು ಕಲಿತಿರುವುದನ್ನು ದಾಖಲಿಸಬೇಕೆನಿಸುತ್ತದೆ.

(ಮುಂದಿನ ಋತು : 1.3.2022) * ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com

* ‘ಋತುವಿಲಾಸಿನಿ’ಯ ಆಶಯ ಓದಿ : ಋತುವಿಲಾಸಿನಿ; ‘ಇನ್ನಷ್ಟು ನೋವು, ಕಾವು ಹೊಳೆಯಿಸಬೇಕಿದೆ’ ಇಂದಿನಿಂದ ಕವಿ ನಂದಿನಿ ಹೆದ್ದುರ್ಗ ಅಂಕಣ ಆರಂಭ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ