ಮಣಿಪುರದ ಕಾಂಗ್ಪೋಕ್ಪಿಯಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಐಆರ್‌ಬಿ ಯೋಧ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಬಲಿಯಾದವರನ್ನು ಲೀಮಾಖೋಂಗ್ ಮಿಷನ್ ವೆಂಗ್ ಗ್ರಾಮದ ಐಆರ್‌ಬಿ ಜವಾನ್ ಹೆನ್ಮಿನ್ಲೆನ್ ವೈಫೇಯ್ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ಹುಂಖೋ ಕುಕಿ ಗ್ರಾಮದ ತಂಗ್ಮಿನ್ಲುನ್ ಹ್ಯಾಂಗ್ಸಿಂಗ್ ಎಂದು ಗುರುತಿಸಲಾಗಿದೆ.
ಹರಾಥೆಲ್ ಮತ್ತು ಕೊಬ್ಶಾ ಗ್ರಾಮಗಳ ನಡುವೆ ಮಾರಣಾಂತಿಕ ದಾಳಿ ಸಂಭವಿಸಿದೆ. ಐಆರ್‌ಬಿ ಸಿಬ್ಬಂದಿ ಇದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯ ಸಮಯದಲ್ಲಿ ಹೆನ್ಮಿನ್ಲೆನ್ ವೈಫೇಯ್ ಮತ್ತು ತಂಗ್ಮಿನ್ಲುನ್ ಹ್ಯಾಂಗ್ಸಿಂಗ್ ಇಬ್ಬರೂ ಗಾಯಗೊಂಡರು.
ಹೆಚ್ಚುವರಿ ಪಡೆಗಳನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಬಂಧಿಸಲು ಸಮಗ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 19 ರ ಮಣಿಪುರ ಹೈಕೋರ್ಟ್ನ ನಿರ್ದೇಶನದ ನಂತರ, ರಾಜ್ಯದ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿಸುವುದರ ವಿರುದ್ಧ ಪ್ರತಿಭಟನೆ ಶುರುವಾಗಿತ್ತು.
ರಾಜ್ಯದ ಬುಡಕಟ್ಟು ಸಂಸ್ಥೆಯಾದ ಮಣಿಪುರದ ಅಖಿಲ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು(ATSUM) ಮೇ 3 ರಂದು ಆಯೋಜಿಸಿದ್ದ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ ನಂತರ ಮೊದಲು ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು.
ಮತ್ತಷ್ಟು ಓದಿ: Manipur Violence: ಮಣಿಪುರ ಹಿಂಸಾಚಾರ ವಿಚಾರ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ
ಈ ನಡೆಯು ರಾಜ್ಯದಲ್ಲಿ ಮೈಥಿ ಸಮುದಾಯ ಮತ್ತು ಗುಡ್ಡಗಾಡು ಬುಡಕಟ್ಟುಗಳ ನಡುವಿನ ಹಳೆಯ ಜನಾಂಗೀಯ ದ್ವೇಷವನ್ನು ಕೆಣಕಿದಂತಾಗಿದೆ.
ಹೆಚ್ಚಿನ ರಕ್ಷಣೆಗಾಗಿ ತಮ್ಮನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂದು ಮೈಥಿಗಳು ಬಹುಕಾಲದಿಂದ ಬೇಡಿಕೆಯಿಟ್ಟಿದ್ದರೆ, ರಾಜ್ಯದ ಬುಡಕಟ್ಟು ಜನಾಂಗದವರು, ವಿಶೇಷವಾಗಿ ನಾಗಾಗಳು ಮತ್ತು ಕುಕಿಗಳು – ಇದನ್ನು ವಿರೋಧಿಸಿದ್ದಾರೆ. ಮೈಥಿಗಳನ್ನು ಎಸ್ಟಿ ಪಟ್ಟಿಗೆ ಸೇರಿಸಿದರೆ ಇದು ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತದೆ ಎಂದು ಬುಡಕಟ್ಟು ಜನಾಂಗದವರು ಹೇಳುತ್ತಾರೆ.