ದೆಹಲಿ: ಕೊರೊನಾ ಹೆಮ್ಮಾರಿಯನ್ನು ತಡೆಗಟ್ಟಲು ದೇಶಾದ್ಯಂತ ಮೇ 31ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಎಷ್ಟೇ ಬಿಗಿಯಾದ ಕ್ರಮಗಳನ್ನು ಕೈಗೊಂಡರೂ ಮಹಾಮಾರಿ ಹರಡುತ್ತಲೇ ಇದೆ. ಹಾಗಾಗಿ 4ನೇ ಹಂತದ ಲಾಕ್ಡೌನ್ ವಿಸ್ತರಿಸಿ ಇದೀಗ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಶಾಲಾ-ಕಾಲೇಜು ಬಂದ್:
ಲಾಕ್ಡೌನ್ ಮುಗಿಯುವವರೆಗೂ ಶಾಲಾ-ಕಾಲೇಜು ತೆರೆಯುವಂತಿಲ್ಲ. ಮೆಟ್ರೋ ಸಂಚಾರ ಸಹ ಇರುವುದಿಲ್ಲ. ಹೋಟೆಲ್ ಮತ್ತು ರೆಸ್ಟೋರೆಂಟ್, ಚಿತ್ರಮಂದಿರಗಳು, ಮಾಲ್ ಬಂದ್. ವಿಮಾನಯಾನ ಸಂಚಾರಕ್ಕೂ ಸಹ ನಿರ್ಬಂಧ ವಿಧಿಸಲಾಗಿದೆ.
ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಸಂಚಾರಕ್ಕೆ ನಿರ್ಬಂಧ:
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಂಟೇನ್ಮೆಂಟ್ ಜೋನ್ಗಳಲ್ಲಿ ಕಠಿಣ ನಿಯಮಗಳು ಜಾರಿಗೊಳಿಸಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. 10 ವರ್ಷದೊಳಗಿನವರು ಮನೆಯಿಂದ ಹೊರಬರುವಂತಿಲ್ಲ. 60 ವರ್ಷ ಮೇಲ್ಪಟ್ಟವರೂ ಕೂಡ ಮನೆಯಲ್ಲೇ ಇರಬೇಕು. ಮನೆ ಮನೆಗಳಲ್ಲಿ ಆರೋಗ್ಯ ಸರ್ವೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಆರೋಗ್ಯ ಸೇತು ಌಪ್ ಬಳಸುವುದು ಕಡ್ಡಾಯಗೊಳಿಸಲಾಗಿದೆ. ಅಗತ್ಯವಸ್ತು ಸಾಗಣೆ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ:
ವಾಹನಗಳಲ್ಲಿ ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, ರಾಜ್ಯದೊಳಗೆ ಸಾರಿಗೆ ವ್ಯವಸ್ಥೆ ಬಗ್ಗೆ ಆಯಾ ರಾಜ್ಯ ಸರ್ಕಾರಗಳೇ ತೀರ್ಮಾನ ಕೈಗೊಳ್ಳಬಹುದು. ಗೂಡ್ಸ್, ಕಾರ್ಗೋ ಟ್ರಕ್ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದೆ.
ಜಿಲ್ಲಾಡಳಿತವೇ ಅಂತಿಮ ನಿರ್ಧಾರ:
ರೆಡ್, ಆರೆಂಜ್, ಗ್ರೀನ್ ಬಗ್ಗೆ ಜಿಲ್ಲಾಡಳಿತ ನಿರ್ಧಾರ ಮಾಡಬೇಕು. ಕಂಟೇನ್ಮೆಂಟ್ ಜೋನ್ಗಳಲ್ಲಿ ಚಟುವಟಿಕೆ ಬಗ್ಗೆ ನಿರ್ಧರಿಸಬೇಕು. ಬಫರ್ಜೋನ್ ವ್ಯಾಪ್ತಿ ಬಗ್ಗೆಯೂ ಜಿಲ್ಲಾಡಳಿತವೇ ಅಂತಿಮ ನಿರ್ಧಾರ ಕೈಗೊಳ್ಳಬಹುದು. ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.
ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ:
ಮದುವೆ ಸಮಾರಂಭಕ್ಕೆ 50 ಜನರ ಪಾಲ್ಗೊಳ್ಳಲು ಅವಕಾಶ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದ್ರೆ ನಿರ್ದಾಕ್ಷಿಣ್ಯ ಕ್ರಮ:
ಧಾರ್ಮಿಕ ಸಭೆ, ಸಾರ್ವಜನಿಕ ಸಭೆ, ಸಮಾರಂಭಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಗುಟ್ಕಾ, ಪಾನ್ ಮಸಾಲಾ ಜಗಿಯುವುದಕ್ಕೆ ನಿರ್ಬಂಧ. ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತೆ. ಸಾರ್ವಜನಿಕ ಸ್ಥಳ, ಸಾರ್ವಜನಿಕ ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಂಚಾರಕ್ಕೆ ನಿರ್ಬಂಧವಿಲ್ಲ. ವೈದ್ಯರಿಗೆ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶವಿರುತ್ತೆ. ವೈದ್ಯರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಬಹುದು.
Published On - 7:01 pm, Sun, 17 May 20