ತಮಿಳುನಾಡಿನ ಕುನೂರ್ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನೀಲಗಿರಿ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಅಲ್ಲಿದ್ದ ಸ್ಥಳೀಯ ನಿವಾಸಿಗಳೂ ಕೂಡ ಗಂಭೀರ ಗಾಯಗೊಂಡಿದ್ದಾರೆ. ಇಂದು ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು ಎಸ್ಟೇಟ್ ಇರುವ ಪ್ರದೇಶದಲ್ಲಿ. ಹಾಗಾಗಿ ಅಲ್ಲಿ ಕೆಲವು ಮನೆಗಳೂ ಇದ್ದವು. ಸದ್ಯ ಮೃತದೇಹಗಳ ಪತ್ತೆ ಕಾರ್ಯ ನಡೆಯುತ್ತಿದೆ. ಇನ್ನು ಹೆಲಿಕಾಪ್ಟರ್ ಪತನವಾಗುತ್ತಿದ್ದಂತೆ ಅತ್ಯಂತ ದೊಡ್ಡ ಶಬ್ದ ಕೇಳಿತು ಎಂದು ಸ್ಥಳೀಯರು ಹೇಳಿದ್ದಾರೆ. ಹೊತ್ತಿ ಉರಿದ ಬೆಂಕಿಯನ್ನು ಆರಿಸಲು ಕೂಡ ಅವರು ಪ್ರಯತ್ನಪಟ್ಟಿದ್ದಾರೆ.
ಭಾರತದ ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ತಮ್ಮ ಪತ್ನಿ ಹಾಗೂ ಇತರ ಸೇನಾ ಅಧಿಕಾರಿಗಳೊಟ್ಟಿಗೆ ದೆಹಲಿಯಿಂದ ತಮಿಳುನಾಡಿನ ಸುಲೂರ್ನ ವೆಲ್ಲಿಂಗ್ಟನ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಇದಾಗಿತ್ತು. ಸದ್ಯ ಬಂದಿರುವ ಮಾಹಿತಿಯ ಪ್ರಕಾರ, ದುರಂತದಲ್ಲಿ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಕೂಡ ಮೃತಪಟ್ಟಿದ್ದಾರೆ. ಮೂವರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದೇ ಹೇಳಲಾಗುತ್ತಿದ್ದರೂ ಅವರು ಯಾರೆಂಬ ನಿಖರ ಮಾಹಿತಿ ಇಲ್ಲ. ಬಿಪಿನ್ ರಾವತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಇನ್ನು ತಮಿಳುನಾಡಿನ ಅರಣ್ಯ ಸಚಿವ ರಾಮಚಂದ್ರನ್ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸೇನಾ ಹೆಲಿಕಾಪ್ಟರ್ನಲ್ಲಿ 16 ಜನರಿದ್ದರು ಎಂದು ನನಗೆ ಮಾಹಿತಿ ಬಂದಿದೆ. ಈ ಹೆಲಿಕಾಪ್ಟರ್ ಮನೆಗಳಿದ್ದ ಜಾಗದಲ್ಲೇ ಪತನಗೊಂಡಿದ್ದರಿಂದ ಇಲ್ಲಿನ ಜನರೂ ಅಪಾಯಕ್ಕೀಡಾಗಿದ್ದಾರೆ ಎಂದಿದ್ದಾರೆ. ಹಾಗೇ, ಗಾಯಗೊಂಡವರಿಗೆ ವೈದ್ಯಕೀಯ ಸೇವೆಯನ್ನು ಸರಿಯಾಗಿ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದಾರೆ. ಐಎಎಫ್ ಮುಖ್ಯಸ್ಥ ವಿವೇಕ್ ಚೌಧರಿ ಕೂಡ ಸ್ಥಳಕ್ಕೆ ತೆರಳುತ್ತಿದ್ದಾರೆ.
ಬೆಳಗ್ಗೆ 9ಕ್ಕೇ ದೆಹಲಿ ಬಿಟ್ಟಿದ್ದರು..
ತಮಿಳುನಾಡಿನ ಕೊಯಮತ್ತೂರಿನ ವೆಲ್ಲಿಂಗ್ಟನ್ನಲ್ಲಿ ಇಂದು ಮಧ್ಯಾಹ್ನ 2.45ಕ್ಕೆ ಸಿಡಿಎಸ್ ಬಿಪಿನ್ ರಾವತ್ ಅವರ ಉಪನ್ಯಾಸ ಇತ್ತು. ಅದರೊಂದಿಗೆ ಇನ್ನೂ ಕೆಲವು ಸೇನಾ ಕೆಲಸ ಇದ್ದುದರಿಂದ ಪತ್ನಿ ಹಾಗೂ ಇತರ ಸೇನಾಧಿಕಾರಿಗಳೊಂದಿಗೆ ಬೆಳಗ್ಗೆ 9 ಗಂಟೆಗೆ ವಿಶೇಷ ವಿಮಾನದಲ್ಲಿ ತೆರಳಿದ್ದರು. ಈ ವಿಮಾನ 11.35ಕ್ಕೆ ಸುಲೂರಿನಲ್ಲಿ ಲ್ಯಾಂಡ್ ಆಗಿತ್ತು. ನಂತರ 11.45ರ ಹೊತ್ತಿಗೆ ವೆಲ್ಲಿಂಗ್ಟನ್ಗೆ ಸೇನಾ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣ ಮಾಡಿದ್ದರು. ಆದರೆ ಈ ಹೆಲಿಕಾಪ್ಟರ್ 12.20ರ ಹೊತ್ತಿಗೆ ಕಟ್ಟೇರಿ ಎಂಬ ಗ್ರಾಮದ ಬಳಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿದೇಶಿ ತಂಡಗಳ ಪರ ಮಿಂಚುತ್ತಿರುವ ಭಾರತ ಮೂಲದ ಸ್ಪಿನ್ನರ್ಗಳು ಇವರೆ ನೋಡಿ..!