ಅಸ್ಸಾಂ ಸಂರಕ್ಷಿತ ಅರಣ್ಯದಲ್ಲಿ ರಸ್ತೆ ಕಾಮಗಾರಿ ನಡೆಸಿದ ಮಿಜೋರಾಂ !; ಮತ್ತೆ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಮೊದಲು ಎಚ್ಚೆತ್ತುಕೊಂಡ ಪೊಲೀಸ್​

| Updated By: Lakshmi Hegde

Updated on: Nov 23, 2021 | 3:37 PM

ರಸ್ತೆ ನಿರ್ಮಾಣ ಕಾಮಗಾರಿ ಶುರುವಾಗಿರುವ ಬಗ್ಗೆ ಫೋಟೋ, ವಿಡಿಯೋಗಳನ್ನು ನೋಡಿದ್ದೇವೆ. ಮಿಜೋರಾಂನ ಸ್ಥಳೀಯ ಎಸ್​ಪಿಯೊಟ್ಟಿಗೆ ಮಾತುಕತೆ ನಡೆಸಿದ್ದೇನೆ ಎಂದು ಹೈಲಕಂಡಿ ಎಸ್​ಪಿ ತಿಳಿಸಿದ್ದಾರೆ.

ಅಸ್ಸಾಂ ಸಂರಕ್ಷಿತ ಅರಣ್ಯದಲ್ಲಿ ರಸ್ತೆ ಕಾಮಗಾರಿ ನಡೆಸಿದ ಮಿಜೋರಾಂ !; ಮತ್ತೆ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಮೊದಲು ಎಚ್ಚೆತ್ತುಕೊಂಡ ಪೊಲೀಸ್​
ರಸ್ತೆ ಕಾಮಗಾರಿ ತಡೆಯಲು ಹೋದ ಮಿಜೋರಾಂ ಪೊಲೀಸರು
Follow us on

ಕೆಲವು ತಿಂಗಳುಗಳ ಹಿಂದೆ ಅಸ್ಸಾಂ ಮತ್ತು ಮಿಜೋರಾಂ ಗಡಿ ಸಂಘರ್ಷವೆಂಬುದು ಹೊತ್ತಿ ಉರಿದಿತ್ತು.  ಹಿಂಸಾಚಾರದಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತರಾಗಿದ್ದರು. ಅದಾದ ಬಳಿಕ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿ, ಅಂತರ್ ರಾಜ್ಯ ಗಡಿ ವಿವಾದವನ್ನು ಬಗೆಹರಿಸಿತ್ತು. ಹಾಗಿದ್ದಾಗ್ಯೂ ಕೂಡ ಈಗ ಮಿಜೋರಾಂ ಅಸ್ಸಾಂ ನ ಮೀಸಲು ಅರಣ್ಯದೊಳಗೆ 3.5 ಕಿಮೀ ದೂರದ ರಸ್ತೆ ನಿರ್ಮಾಣ ಮಾಡಿದೆ ಎಂದು ಹೇಳಲಾಗಿದೆ. ಅಸ್ಸಾಂನ ಹೈಲಕಂಡಿಯಲ್ಲಿ ಡ್ರೋಣ್​ ಸರ್ವೇ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ಮತ್ತು ಮಿಜೋರಾಂ ಗಡಿ 164.6 ಕಿಮೀಗಳಷ್ಟಿದೆ. ಇಲ್ಲಿನ ವಿವಾದ ಅತ್ಯಂತ ಹಳೇಯದ್ದರು. ಆದರೆ ಇತ್ತೀಚೆಗೆ ಅಂದರೆ ಜುಲೈನಲ್ಲಿ  ಮತ್ತೆ ಗಡಿ ವಿವಾದ ಭುಗಿಲೆದ್ದಿತ್ತು. ಅಸ್ಸಾಂ ಪೊಲೀಸರು ಹಾಕಿದ್ದ ಶಿಬಿರ ತಮ್ಮ ಪ್ರದೇಶದ್ದು ಎಂದು ಮಿಜೋರಾಂ ಕ್ಯಾತೆ ತೆಗೆದಿತ್ತು. 

ಇದೀಗ ಮಿಜೋರಾಂ ಕೇಂದ್ರ ಸರ್ಕಾರದ ಸಲಹೆಯನ್ನೂ ಪರಿಗಣಿಸದೆ ಅಸ್ಸಾಂ ಭಾಗಕ್ಕೆ ಕಾಲಿಟ್ಟಿದೆ. ಅಸ್ಸಾಂಗೆ ಸೇರಿದ ಅರಣ್ಯಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿ ಮುಂದುವರಿಯುತ್ತಲೇ ಇದೆ. ಅಂದರೆ ತನ್ನ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ರಸ್ತೆಯನ್ನು ಅಸ್ಸಾಂನ ಭೂಪ್ರದೇಶಕ್ಕೂ ವಿಸ್ತರಿಸಿದೆ ಎಂದು ಹೈಲಕಂಡಿ ವಿಭಾಗೀಯ ಅರಣ್ಯಾಧಿಕಾರಿ ಜಯಂತ್​ ದೇಖಾ ತಿಳಿಸಿದ್ದಾರೆ. ಹಾಗೇ, ಕೇಂದ್ರದ ಸಲಹೆಯನ್ನು ಉಲ್ಲಂಘಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸ್ಸಾಂ ಗಡಿಯೊಳಗೆ ಅವರು ಕಾಲಿಟ್ಟಿದ್ದಾರೆ. ನಮ್ಮ ಅರಣ್ಯ ಇಲಾಖೆಯ ಮೂರ್ನಾಲ್ಕು ಮಂದಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆವು. ಆದರೆ ಮಿಜೋರಾಂನ ಜನರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ ಸುಮ್ಮನೆ ಹಿಂದಿರುಗಿದ್ದೇವೆ ಎಂದೂ ಹೇಳಿದ್ದಾರೆ.

ಇದೀಗ ಮಿಜೋರಾಂ ರಸ್ತೆ ನಿರ್ಮಾಣ ಮಾಡುತ್ತಿರುವ ಪ್ರದೇಶ ಸಂಪೂರ್ಣವಾಗಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಅಂತರ್​ ರಾಜ್ಯ ಗಡಿ ಬಳಿಯೇ ಇದೆ.  ನಮ್ಮ ಸಿಬ್ಬಂದಿ ಬೋಟ್​ಗಳ ಮೂಲಕ ಅಲ್ಲಿಗೆ ಹೋಗಲು ಒಂದು ತಾಸು ತೆಗೆದುಕೊಂಡರು. ಕೆಲವು ಫೋಟೋ, ವಿಡಿಯೋಗಳನ್ನು ಚಿತ್ರೀಕರಣ ಮಾಡಿ ತಂದಿದ್ದಾರೆ. ಅದು ಸಾಕ್ಷಿಗೆ ಇರಲಿ ಎಂದೇ ಹಾಗೆ ಮಾಡಿದ್ದಾರೆ ಎಂದು ಜಯಂತ್​ ದೇಖಾ ತಿಳಿಸಿದ್ದಾರೆ. ಈ ಅರಣ್ಯವನ್ನು ಅಸ್ಸಾಂ ತುಂಬ ನಾಜೂಕಾಗಿ ಕಾಪಾಡಿಕೊಂಡು ಬಂದಿದೆ. ಆದರೆ ಮಿಜೋರಾಂ ಈಗ ಇಲ್ಲಿ ಕೆಲಸ ಶುರು ಮಾಡಿ, ಅರಣ್ಯ ನಾಶ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ.

ಇಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಶುರುವಾಗಿರುವ ಬಗ್ಗೆ ಫೋಟೋ, ವಿಡಿಯೋಗಳನ್ನು ನೋಡಿದ್ದೇವೆ. ಹಾಗೇ, ಮಿಜೋರಾಂನ ಸ್ಥಳೀಯ ಎಸ್​ಪಿಯೊಟ್ಟಿಗೆ ಮಾತುಕತೆ ನಡೆಸಿದ್ದೇನೆ.  ಅವರೂ ಕೂಡ ಕೆಲಸ ಸ್ಥಗಿತಗೊಳಿಸಲು ಸೂಚನೆ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೈಲಕಂಡಿ ಎಸ್​ಪಿ ಗೌರವ್​ ಉಪಾಧ್ಯಾಯ ತಿಳಿಸಿದ್ದಾರೆ.  ಹಾಗೇ, ರಸ್ತೆ ಕಾರ್ಯ ನಡೆಯುತ್ತಿರುವ ಸ್ಥಳದ ಸಮೀಪ ಇರುವ ಮಿಜೋರಾಂನ ಕಲಾಶಿಬ್​ ಜಿಲ್ಲೆಯ ಎಸ್​ಪಿ ವನ್ಲಾಲ್ಫಾಕ ರಾಲ್ಟೆ, ನಮಗೆ ಅಸ್ಸಾಂ ಎಸ್​ಪಿ ಹೇಳಿದ ತಕ್ಷಣ ಕ್ರಮಕ್ಕೆ ಮುಂದಾಗಿದ್ದೇವೆ. ಅಲ್ಲಿ ರಸ್ತೆ ರಿಪೇರಿ ಕಾರ್ಯ ಮಾಡಲಾಗುತ್ತಿತ್ತು. ಕೂಡಲೇ ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದೇವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಜಾಗದ ವಿಷಯಕ್ಕೆ ಗಲಾಟೆ ಮಾಡಿ ಕಾಲೇಜಿಗೆ ಬೀಗ; ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ರೀ ಓಪನ್