ಎಥನಾಲ್ ಮಿಶ್ರಿತ ಪೆಟ್ರೋಲ್​ ಕುರಿತ ತಪ್ಪು ಕಲ್ಪನೆಗಳಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ

ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಕೆಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇ20 ಬಳಕೆಯಿಂದ ವಾಹನ ಎಂಜಿನ್‌ಗಳಿಗೆ ಹಾನಿಯಾಗುತ್ತದೆ ಎಂದು ನಡೆಯುತ್ತಿರುವ ಅಭಿಯಾನವನ್ನು ತಳ್ಳಿಹಾಕಿರುವ ಸರ್ಕಾರ ಕೋಟ್ಯಂತರ ವಾಹನಗಳಿಂದ ವೈಜ್ಞಾನಿಕ ಪುರಾವೆಗಳು ಮತ್ತು ಡೇಟಾವನ್ನು ಪರಿಶೀಲಿಸಿದ ನಂತರವೇ ಇ20 ಬಳಕೆಯಿಂದ ವಾಹನ ಎಂಜಿನ್‌ಗಳಿಗೆ ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಲಾಗಿದೆ ಎಂದು ಹೇಳಿದೆ.

ಎಥನಾಲ್ ಮಿಶ್ರಿತ ಪೆಟ್ರೋಲ್​ ಕುರಿತ ತಪ್ಪು ಕಲ್ಪನೆಗಳಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ
Etanol
Image Credit source: TV9

Updated on: Jul 30, 2026 | 10:58 PM

ನವದೆಹಲಿ, ಜುಲೈ 30: ಇ-20 (E20) ಇಂಧನ ಕುರಿತು ಹಬ್ಬಿರುವ ದಾರಿ ತಪ್ಪಿಸುವ ವರದಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಎಥನಾಲ್ ಮಿಶ್ರಿತ ಪೆಟ್ರೋಲ್ (Ethanol Blended Petrol) ಬಳಕೆಯಿಂದ ವಾಹನಗಳಿಗೆ ಹಾನಿಯಾಗುತ್ತದೆ ಎಂಬ ವದಂತಿಗಳು ಹಾಗೂ ದಾರಿ ತಪ್ಪಿಸುವ ಪ್ರಚಾರಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸುದೀರ್ಘ ಸ್ಪಷ್ಟೀಕರಣವನ್ನು ನೀಡಿದೆ. ಇ-20 ಇಂಧನ ಯೋಜನೆಯು ವೈಜ್ಞಾನಿಕ ತಪಾಸಣೆ, ತಾಂತ್ರಿಕ ಪರೀಕ್ಷೆಗಳು, ವಾಹನ ತಯಾರಕರ ಆಲೋಚನೆಗಳು ಹಾಗೂ ಕಠಿಣ ಪ್ರಯೋಗಗಳ ಆಧಾರದ ಮೇಲೆಯೇ ಜಾರಿಗೆ ಬಂದಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹಂತ ಹಂತವಾಗಿ ಹೆಚ್ಚಿದ ಎಥನಾಲ್ ಮಿಶ್ರಣ ಪ್ರಮಾಣ:

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಪ್ರಕ್ರಿಯೆಯು ಏಕಾಏಕಿ ನಡೆದಿದ್ದಲ್ಲ, ಬದಲಾಗಿ ಹಂತ ಹಂತವಾಗಿ ಜಾರಿಗೆ ತರಲಾಗಿದೆ. 2013-14ರಲ್ಲಿ ಸರಾಸರಿ ಮಿಶ್ರಣ ಪ್ರಮಾಣ 1.53ರಷ್ಟಿತ್ತು. ಇದೀಗ 2025-26 ವೇಳೆ ಮಿಶ್ರಣದ ಪ್ರಮಾಣ ಶೇ. 20ಕ್ಕೆ ತಲುಪಿದೆ ಎಂದು ಹೇಳಿದೆ.

ಎಂಜಿನ್ ಹಾನಿಗೆ ಯಾವುದೇ ಆಧಾರವಿಲ್ಲ:

2023ಕ್ಕಿಂತ ಮೊದಲು ತಯಾರಾದ ವಾಹನಗಳಿಗೆ E20 ಪೆಟ್ರೋಲ್‌ನಿಂದ ತೊಂದರೆಯಾಗುತ್ತದೆ ಎಂಬ ಆರೋಪವನ್ನು ಸಚಿವಾಲಯ ತಳ್ಳಿಹಾಕಿದೆ. ದೇಶದಲ್ಲಿ ಕಳೆದ ಮೂರೂವರೆ ವರ್ಷಗಳಿಂದ E15ಗಿಂತ ಹೆಚ್ಚಿನ ಮಿಶ್ರಿತ ಇಂಧನ ಹಾಗೂ ಕಳೆದ ಎರಡೂವರೆ ವರ್ಷಗಳಿಂದ E19-E20 ಇಂಧನ ಚಲಾವಣೆಯಲ್ಲಿದೆ. ದೇಶಾದ್ಯಂತ ಪ್ರತಿದಿನ ಸುಮಾರು 8 ಕೋಟಿ ವಾಹನಗಳು ಇಂಧನ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಅವುಗಳಲ್ಲಿ ಶೇ. 80ಕ್ಕೂ ಹೆಚ್ಚು ಪೆಟ್ರೋಲ್ ವಾಹನಗಳಾಗಿವೆ. ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದಿಂದಾಗಿ ವಾಹನಗಳ ಎಂಜಿನ್ ಕೆಟ್ಟುಹೋದ ಅಥವಾ ಬ್ರೇಕ್‌ಡೌನ್ ಆದ ಯಾವುದೇ ದೃಢಪಟ್ಟ ಪ್ರಕರಣಗಳು ಕಂಡುಬಂದಿಲ್ಲ. ಒಂದು ವೇಳೆ ಸಿಸ್ಟಮಿಕ್ ತೊಂದರೆ ಇದ್ದಿದ್ದರೆ ಲಕ್ಷಾಂತರ ವಾರಂಟಿ ಕ್ಲೈಮ್‌ಗಳು ದಾಖಲಾಗುತ್ತಿದ್ದವು, ಆದರೆ ಅಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ

ವಾಹನ ತಯಾರಿಕಾ ಸಂಸ್ಥೆಗಳ (OEMs) ಸೇವಾ ವರದಿ:

ಮಾರುತಿ ಸುಜುಕಿ 2025-26ನೇ ಹಣಕಾಸು ವರ್ಷದಲ್ಲಿ 2.84 ಕೋಟಿ ವಾಹನಗಳ ಸರ್ವಿಸಿಂಗ್ ಮಾಡಿದ್ದು, ಅದರಲ್ಲಿ ಮೂಲತಃ E20 ಸರ್ಟಿಫೈಡ್ ಇಲ್ಲದ 1.5 ಕೋಟಿಗೂ ಹೆಚ್ಚು ಹಳೆಯ ವಾಹನಗಳಿದ್ದವು. ಇವುಗಳಲ್ಲಿ ಎಥನಾಲ್‌ನಿಂದಾಗಿ ಯಾವುದೇ ತುಕ್ಕು ಹಿಡಿಯುವಿಕೆ ಅಥವಾ ಎಂಜಿನ್ ಕಾಂಪೊನೆಂಟ್‌ ಹಾಳಾದ ಉದಾಹರಣೆಗಳು ಕಂಡುಬಂದಿಲ್ಲ. ‘ಹೀರೋ ಮೋಟೋಕಾರ್ಪ್’ ಕೂಡ ಇಂತಹ ಯಾವುದೇ ಸಮಸ್ಯೆಯನ್ನು ವರದಿ ಮಾಡಿಲ್ಲ. ಎಲ್ಲಾ ವಾಹನ ತಯಾರಕ ಸಂಸ್ಥೆಗಳು E20 ಇಂಧನ ಬಳಸುವ ವಾಹನಗಳ ವಾರಂಟಿ ಬದ್ಧತೆಗಳನ್ನು ಎಂದಿನಂತೆ ಮುಂದುವರಿಸಿವೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

30 ಕೋಟಿ ವಾಹನಗಳು ನಿರುಪಯೋಗಿ ಎಂಬುದು ಸುಳ್ಳು ಆರೋಪ:

E20 ಇಂಧನದಿಂದಾಗಿ ದೇಶದ ಸುಮಾರು 30 ಕೋಟಿ ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ನಿರುಪಯೋಗಿಯಾಗುತ್ತವೆ ಎಂಬ ವದಂತಿಯನ್ನು ಸರ್ಕಾರ ತಳ್ಳಿಹಾಕಿದೆ. ಪ್ರಸ್ತುತ ದೇಶದಲ್ಲಿ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು E15 ಹಾಗೂ E20 ಇಂಧನದಲ್ಲಿ ಸುರಕ್ಷಿತವಾಗಿ ಚಲಿಸುತ್ತಿವೆ ಎಂದು ತಿಳಿಸಿದೆ.

ಜುಲೈ 4ರಂದು ಕೇಂದ್ರ ಪೆಟ್ರೋಲಿಯಂ, ಭಾರಿ ಕೈಗಾರಿಕೆಗಳು ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದವು. ‘ಟೊಯೋಟಾ ಕಿರ್ಲೋಸ್ಕರ್’, ‘ಮಾರುತಿ ಸುಜುಕಿ’, ‘ಹೀರೋ ಮೋಟೋಕಾರ್ಪ್’, ‘ಹ್ಯುಂಡೈ’, ‘ಟಿವಿಎಸ್’ ಮತ್ತು ‘ಬಾಜಾಜ್ ಆಟೋ’ ಸಂಸ್ಥೆಗಳು E20 ಜಾರಿಯನ್ನು ಸಂಪೂರ್ಣವಾಗಿ ಬೆಂಬಲಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Thu, 30 July 26

Loading...
Unable to load recommendations.
Follow Us