ಜಮ್ಮು, ಫೆ.20: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಕ್ಕೂ ಹೆಚ್ಚು ಹೊಸ ಸರ್ಕಾರಿ ನೇಮಕಾತಿ ಆದೇಶಗಳನ್ನು ವಿತರಿಸಿದ್ದಾರೆ. ಮೋದಿ ಅವರು ಇಂದು ಜಮ್ಮುವಿಗೆ ಭೇಟಿ ನೀಡಿದ್ದು, ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಪ್ರಧಾನಿ ಚಾಲನೆ ನೀಡಿದ ಯೋಜನೆಗಳಿಗೆ ಅವರು ಕೂಡ ಸಾಕ್ಷಿಯಾಗಿದರು. ಮೋದಿ ಅವರು ‘ವಿಕಸಿತ್ ಭಾರತ್ ವಿಕಸಿತ್ ಜಮ್ಮು’ ಎಂಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರೊಂದಿದೆ ಸಂವಾದ ನಡೆಸಲಿದ್ದಾರೆ.
ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯನ್ನು ಭಾರತ ಇಡುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರು ಸುಮಾರು 13,375 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಎಸ್‌ಇಆರ್ ತಿರುಪತಿ, ಐಐಐಟಿಡಿಎಂ ಕರ್ನೂಲ್‌ನ ಶಾಶ್ವತ ಕ್ಯಾಂಪಸ್‌ಗಳನ್ನು ದೇಶಕ್ಕೆ ನೀಡಿದ್ದಾರೆ.
ಇದರ ಜತೆಗೆ ಮೋದಿ ಕಾನ್ಪುರದಲ್ಲಿ ಸುಧಾರಿತ ತಂತ್ರಜ್ಞಾನಗಳ ಪ್ರವರ್ತಕ ಕೌಶಲ್ಯ ತರಬೇತಿ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಅನ್ನು ಅವರು ಉದ್ಘಾಟಿಸಲಿದ್ದಾರೆ. ಐಐಟಿ ಜಮ್ಮು, ಎನ್‌ಐಟಿ ದೆಹಲಿ, ಐಐಟಿ ಖರಗ್‌ಪುರ, ಎನ್‌ಐಟಿ ದುರ್ಗಾಪುರ, ಐಐಎಸ್‌ಇಆರ್‌ನಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್‌ಗಳು, ಶೈಕ್ಷಣಿಕ ಬ್ಲಾಕ್‌ಗಳು, ಆಡಳಿತಾತ್ಮಕ ಕಟ್ಟಡಗಳು, ಗ್ರಂಥಾಲಯಗಳು, ಸಭಾಂಗಣಗಳಲ್ಲಿ ಸುಧಾರಿತ ಮೂಲಸೌಕರ್ಯಗಳನ್ನು ನೀಡಲಿದ್ದಾರೆ.
ಬೆಹ್ರಾಂಪುರ, ಎನ್‌ಐಟಿ ಅರುಣಾಚಲ ಪ್ರದೇಶ, ಐಐಐಟಿ ಲಕ್ನೋ, ಐಐಟಿ ಬಾಂಬೆ, ಐಐಟಿ ದೆಹಲಿ, ಮತ್ತು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಇಲ್ಲಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿದ್ದಾರೆ. ಇದೀಗ ಇದಕ್ಕೆ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ಮೋದಿಯವರು ಯೋಜನೆಗಳನ್ನು ನೀಡಿದ್ದಾರೆ. ಸಿಂಧು ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು IIIT ರಾಯಚೂರಿನ ಶಾಶ್ವತ ಕ್ಯಾಂಪಸ್ ನಿರ್ಮಾಣ, ಐಐಟಿ ಬಾಂಬೆಯಲ್ಲಿ ಶೈಕ್ಷಣಿಕ ಬ್ಲಾಕ್, ಹಾಸ್ಟೆಲ್, ಫ್ಯಾಕಲ್ಟಿ ಕ್ವಾರ್ಟರ್ ಇತ್ಯಾದಿಗಳ ನಿರ್ಮಾಣ, IIT ಗಾಂಧಿನಗರದಲ್ಲಿ ಹಾಸ್ಟೆಲ್ ಮತ್ತು ಸ್ಟಾಫ್ ಕ್ವಾರ್ಟರ್ಸ್ ನಿರ್ಮಾಣ, BHU ನಲ್ಲಿ ಗರ್ಲ್ಸ್ ಹಾಸ್ಟೆಲ್ ನಿರ್ಮಾಣ ಮಾಡಲಿದ್ದಾರೆ.
ಇದನ್ನೂ ಓದಿ: ಕಲ್ಕಿ ಧಾಮ್ ಶಂಕುಸ್ಥಾಪನೆ, ಇದು ನನಗೆ ಸಿಕ್ಕ ಸೌಭಾಗ್ಯ ಎಂದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಯನ್ನು ವಿಜಯಪುರ (ಸಾಂಬಾ) ಹಾಗೂ ಜಮ್ಮುವಿನಲ್ಲಿ ಉದ್ಘಾಟಿಸಲಿದ್ದಾರೆ. ಫೆಬ್ರುವರಿ 2019ರಲ್ಲಿ ಪ್ರಧಾನಮಂತ್ರಿಯವರಿಂದ ಈ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ಕೇಂದ್ರ ಯೋಜನೆಗಳನ್ನು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿಯಲ್ಲಿ ನಡೆಸಲಾಗುತ್ತಿದೆ.
ಈಗಾಗಲೇ 1660 ಕೋಟಿಗೂ ಅಧಿಕ ವೆಚ್ಚದಲ್ಲಿ 227 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಆಸ್ಪತ್ರೆಯು 720 ಹಾಸಿಗೆಗಳು, 125 ಸೀಟುಗಳ ವೈದ್ಯಕೀಯ ಕಾಲೇಜು, 60 ಸೀಟುಗಳ ನರ್ಸಿಂಗ್ ಕಾಲೇಜು, 30 ಹಾಸಿಗೆಗಳ ಆಯುಷ್ ಬ್ಲಾಕ್, ಬೋಧಕರಿಗೆ ವಸತಿ ಮತ್ತು ವಸತಿ ಸೌಕರ್ಯಗಳಂತಹ ಸೌಲಭ್ಯಗಳನ್ನು ಹೊಂದಿದೆ. ಸಿಬ್ಬಂದಿ, ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಸತಿ, ರಾತ್ರಿ ಆಶ್ರಯ, ಅತಿಥಿ ಗೃಹ, ಆಡಿಟೋರಿಯಂ, ಶಾಪಿಂಗ್ ಕಾಂಪ್ಲೆಕ್ಸ್ಗಳನ್ನು ನೀಡಲಾಗಿದೆ.
ಜಮ್ಮು ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ಕಟ್ಟಡಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 40,000 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಟರ್ಮಿನಲ್ ಕಟ್ಟಡವು ಸುಮಾರು 2000 ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ಹೊಸ ಟರ್ಮಿನಲ್ ಕಟ್ಟಡವು ಪರಿಸರ ಸ್ನೇಹಿಯಾಗಿದ್ದು, ಇದನ್ನು ಸ್ಥಳೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ರೀತಿಯಲ್ಲಿ ನಿರ್ಮಿಸಲಾಗುವುದು. ಇದು ವಾಯು ಸಂಪರ್ಕವನ್ನು ಬಲಪಡಿಸುತ್ತದೆ, ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸುತ್ತದೆ. ಮತ್ತು ಈ ಪ್ರದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ರೈಲು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಬನಿಹಾಲ್-ಖಾರಿ-ಸುಂಬರ್-ಸಂಗಲ್ದನ್ (48 ಕಿಮೀ) ಮತ್ತು ಹೊಸದಾಗಿ ವಿದ್ಯುದ್ದೀಕರಿಸಿದ ಬಾರಾಮುಲ್ಲಾ-ಶ್ರಿಂಗಾರ್-ಬನಿಹಾಲ್-ಸಂಗಲ್ದಾನ್ ವಿಭಾಗ (185.66 ಕಿಮೀ) ನಡುವಿನ ಹೊಸ ರೈಲು ಮಾರ್ಗಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಕಣಿವೆ ರಾಜ್ಯದಲ್ಲಿ ಮೊದಲ ಎಲೆಕ್ಟ್ರಿಕ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಭಾರತದ ಅತಿ ಉದ್ದದ ಸಾರಿಗೆ ಸುರಂಗ T-50 (12.77 ಕಿಮೀ) ಖಾರಿ-ಸುಂಬರ್ ನಡುವಿನ ನಿರ್ಮಾಣವಾಗಲಿದೆ. ಇದು ರೈಲು ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತದೆ. ಇದು ಕೂಡ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಕಾರ್ಯಕ್ರಮದ ಸಮಯದಲ್ಲಿ, ಜಮ್ಮುವನ್ನು ಕತ್ರಾಕ್ಕೆ ಸಂಪರ್ಕಿಸುವ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ((44.22 ಕಿಮೀ) ಹಾಗೂ ಶ್ರೀನಗರ ರಿಂಗ್ ರಸ್ತೆಯ ಚತುಷ್ಪಥ ಯೋಜನೆ, NH-01 ರ 161 ಕಿಮೀ ಉದ್ದದ ಶ್ರೀನಗರ-ಬಾರಾಮುಲ್ಲಾ-ಉರಿ ರಾಷ್ಟ್ರೀಯ ರಸ್ತೆ , NH-444 ನಲ್ಲಿ ಕುಲ್ಗಾಮ್ ಬೈಪಾಸ್ ಮತ್ತು ಪುಲ್ವಾಮಾ ಬೈಪಾಸ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಜಮ್ಮುವಿನಲ್ಲಿ ಸಿಯುಎಫ್ (ಸಾಮಾನ್ಯ ಬಳಕೆದಾರ ಸೌಲಭ್ಯ) ಪೆಟ್ರೋಲಿಯಂ ಡಿಪೋವನ್ನು ಅಭಿವೃದ್ಧಿಪಡಿಸುವ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದಾರೆ. ಅತ್ಯಾಧುನಿಕ ಸಂಪೂರ್ಣ ಸ್ವಯಂಚಾಲಿತ ಡಿಪೋ ಸುಮಾರು 677 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು, ಇದು ಮೋಟಾರ್ ಸ್ಪಿರಿಟ್ (MS), ಹೈಸ್ಪೀಡ್ ಡೀಸೆಲ್ (HSD), ಸುಪೀರಿಯರ್ ಸೀಮೆಎಣ್ಣೆ (SKO) ಸಂಗ್ರಹಿಸಲು ಸುಮಾರು 100000 KL ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಏವಿಯೇಷನ್ ಟರ್ಬೈನ್ ಇಂಧನ (ATF), ಎಥೆನಾಲ್, ಬಯೋ ಡೀಸೆಲ್ ಮತ್ತು ಚಳಿಗಾಲದ ದರ್ಜೆಯ HSD (ಹೈಸ್ಪೀಡ್ ಡೀಸೆಲ್) ಕೂಡ ಇಲ್ಲಿ ನಿರ್ಮಾಣವಾಗಲಿದೆ.
ಜಮ್ಮು ಮತ್ತು ಕಾಶ್ಮೀರದಾದ್ಯಂತ ನಾಗರಿಕ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ 3150 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Tue, 20 February 24