
ನವದೆಹಲಿ, ಅಕ್ಟೋಬರ್ 5: ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಪರಿಷ್ಕೃತ ‘ಫಾರ್ಮ್ 6’ಗೆ ಸುಪ್ರೀಂ ಕೋರ್ಟ್ ಯಾವುದೇ ಅನುಮೋದನೆ ನೀಡಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಇಂದು ಸ್ಪಷ್ಟಪಡಿಸಿದ್ದಾರೆ. “ನಾವು ಯಾವುದೇ ಪರಿಷ್ಕೃತ ಫಾರ್ಮ್ 6ಗೆ ಅನುಮೋದನೆ ನೀಡಿಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ. ಪ್ರಕರಣದ ದಾಖಲೆಗಳನ್ನು ಸಲ್ಲಿಕೆ ಮಾಡಿದಾಗ ಇದನ್ನು ಯಾರು ಬದಲಾಯಿಸಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ” ಎಂದು ಸಿಜೆಐ ಸೂರ್ಯ ಕಾಂತ್ ನೇತೃತ್ವದ ಪೀಠ ಹೇಳಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಬೇಕು ಹಾಗೂ ಚುನಾವಣಾ ಆಯೋಗದ ಉಳಿದ ಇಬ್ಬರು ಆಯುಕ್ತರ ಅನುಮೋದನೆಯಿಲ್ಲದೆ ಆಯೋಗ ಕೈಗೊಂಡಿರುವ ನಿರ್ಧಾರಗಳನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಾತುಗಳನ್ನು ಹೇಳಿದೆ.
Supreme Court made it clear that it had not approved any modified version of Form 6, used for enrolling new voters in electoral rolls during the Special Intensive Revision (SIR). Chief Justice of India Surya Kant made the observation while hearing a plea seeking suspension and prosecution of Chief Election Commissioner Gyanesh Kumar.
“Any modified Form 6 has not been approved by us. Let’s be clear. When the record is produced, we would like to see who has modified,” CJI Surya Kant observed during the hearing.
— ANI (@ANI) October 5, 2026
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಥವಾ ವಿವರಗಳನ್ನು ಪರಿಷ್ಕರಿಸಲು ಬಳಸಲಾಗುವ ‘ಫಾರ್ಮ್ 6’ ರ ಪರಿಷ್ಕೃತ ರೂಪಕ್ಕೆ ನ್ಯಾಯಾಲಯದ ಸಮ್ಮತಿ ಇದೆ ಎಂದು ಚುನಾವಣಾ ಆಯೋಗವು ವಾದಿಸಿತ್ತು. ಆದರೆ, ಸಿಜೆಐ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಕುರಿತು ಯಾವುದೇ ಅಂತಿಮ ಅನುಮೋದನೆ ನೀಡಿಲ್ಲ ಎಂದು ವಿಚಾರಣೆ ವೇಳೆ ಸ್ಪಷ್ಟಪಡಿಸಿತು. ಮತದಾರರ ಹಕ್ಕುಗಳು ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅತ್ಯಗತ್ಯ. ಚುನಾವಣಾ ಆಯೋಗವು ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ನೆಪದಲ್ಲಿ ನ್ಯಾಯಾಲಯದ ಆದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ವಿಚಾರಣೆ ವೇಳೆ ಗಮನಿಸಲಾಯಿತು.
ಇದನ್ನೂ ಓದಿ: ಸಿಬಿಎಸ್‌ಇ ತ್ರಿಭಾಷಾ ನೀತಿಯಿಂದ 6ನೇ ತರಗತಿ ವಿದ್ಯಾರ್ಥಿಗಳಿಗೂ ವಿನಾಯಿತಿ ನೀಡಿ; ಸುಪ್ರೀಂ ಕೋರ್ಟ್ ಆದೇಶ
ವಿವಾದಕ್ಕೆ ಮುಖ್ಯ ಕಾರಣವೇನು?:
ಇತ್ತೀಚೆಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫಾರ್ಮ್ 6ರಲ್ಲಿ ಮಾಡಲಾದ ಬದಲಾವಣೆಗಳಿಗೆ ಚುನಾವಣಾ ಆಯೋಗದ ಇಬ್ಬರು ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅರ್ಜಿಯ ನಮೂನೆಯಲ್ಲಿ ಯಾವುದೇ ಅಧಿಕೃತ ತಿದ್ದುಪಡಿ ಮಾಡದಿದ್ದರೂ, ಮೊದಲ ಬಾರಿಗೆ ಚುನಾವಣಾ ಆಯೋಗವು ತನ್ನ ಆನ್‌ಲೈನ್ ‘ಫಾರ್ಮ್ 6’ ನಮೂನೆಯಲ್ಲಿ ಹೊಸ ವಿಭಾಗವೊಂದನ್ನು ಸೇರ್ಪಡೆಗೊಳಿಸಿತ್ತು. ಇದರಲ್ಲಿ ಅರ್ಜಿದಾರರ ಪೋಷಕರು ಕಳೆದ ಬಾರಿಯ ಎಸ್ಐಆರ್ನಲ್ಲಿ ಹೊಂದಿದ್ದ ಸ್ಥಿತಿಗತಿಯ ವಿವರಗಳನ್ನು ಕೇಳಲಾಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಎಸ್‌ಐಆರ್ ಹಗ್ಗಜಗ್ಗಾಟ ತೀವ್ರ: ಎಫ್‌ಐಆರ್ ಖಂಡಿಸಿ ನಾಳೆ ಬಳ್ಳಾರಿ ಠಾಣೆಗಳಿಗೆ ಮುತ್ತಿಗೆ ಹಾಕಲು ಬಿಜೆಪಿ ಕರೆ!
ಆದರೆ, ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ತನ್ನ ECINET ಅಪ್ಲಿಕೇಶನ್ ಪೋರ್ಟಲ್‌ನಲ್ಲಿದ್ದ ಈ ಹೆಚ್ಚುವರಿ ಘೋಷಣಾಪತ್ರವನ್ನು ಚುನಾವಣಾ ಆಯೋಗವು ಹಿಂತೆಗೆದುಕೊಂಡಿದೆ. “ಎಸ್‌ಐಆರ್ ಅಲ್ಲದ ಅವಧಿಯಲ್ಲಿ 1960ರ ನಿಯಮಾವಳಿಗಳ ಪ್ರಕಾರ ಅನ್ವಯವಾಗುವ ಫಾರ್ಮ್‌ಗಳನ್ನು ಮಾತ್ರ ಬಳಸಲಾಗುತ್ತದೆ” ಎಂದು ಆಯೋಗವು ಸೆಪ್ಟೆಂಬರ್ 26ರಂದು ಪ್ರಕಟಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ