ಭಾರತದ ಘನತೆ ಹೆಚ್ಚಿಸಿದ ಮುತ್ಸದ್ದಿ: ಮೋದಿಯವರ 25 ವರ್ಷಗಳ ಆಡಳಿತ ಮೈಲಿಗಲ್ಲು ಕೊಂಡಾಡಿದ ಜಾಗತಿಕ ಗಣ್ಯರು

ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಭಾರತದ ಪ್ರಧಾನಿ ಪಟ್ಟದವರೆಗೆ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲಿಗೆ ಜಗತ್ತಿನಾದ್ಯಂತದ ಪ್ರಮುಖ ನಾಯಕರು ಶುಭ ಹಾರೈಸಿದ್ದಾರೆ. ಜಪಾನ್, ಬೆಲ್ಜಿಯಂ, ಡೊಮಿನಿಕಾ, ನೈಜೀರಿಯಾ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಮೋದಿಯವರ ಅಭಿವೃದ್ಧಿ ಮಾದರಿ, ಜಾಗತಿಕ ನಾಯಕತ್ವ ಹಾಗೂ ಭಾರತದ ಘನತೆಯನ್ನು ಹೆಚ್ಚಿಸಿದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಘನತೆ ಹೆಚ್ಚಿಸಿದ ಮುತ್ಸದ್ದಿ: ಮೋದಿಯವರ 25 ವರ್ಷಗಳ ಆಡಳಿತ ಮೈಲಿಗಲ್ಲು ಕೊಂಡಾಡಿದ ಜಾಗತಿಕ ಗಣ್ಯರು
ನರೇಂದ್ರ ಮೋದಿ-ಬಾರ್ಟ್ ಡಿ ವೆವರ್
Image Credit source: ANI

Updated on: Oct 07, 2026 | 1:33 PM

ನವದೆಹಲಿ, ಅಕ್ಟೋಬರ್ 07: ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಸಾಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಬಳಿಕ 2014ರಿಂದ ಸತತವಾಗಿ ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ಮೋದಿಯವರ 25 ವರ್ಷಗಳ ಸುದೀರ್ಘ ನಾಯಕತ್ವವನ್ನು ಜಗತ್ತಿನ ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದು, ಹೃತ್ಪೂರ್ವಕ ಶುಭ ಹಾರೈಸಿದ್ದಾರೆ.

ಯಾವ ನಾಯಕರು ಏನಂದರು? ಪ್ರಮುಖ ಸಂದೇಶಗಳ ವಿವರ

ಅಸಾಧಾರಣ ರಾಜಕೀಯ ನಾಯಕತ್ವ: ಜಪಾನ್ ಪ್ರಧಾನಿ ಸನೇ ತಕೈಚಿ

2001ರಿಂದ ಆರಂಭವಾದ ಮೋದಿಯವರ ಸುದೀರ್ಘ ಅಧಿಕಾರಾವಧಿಯು ಭಾರತದ ಸಮಗ್ರ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ರಂಗದಲ್ಲಿ ದೇಶದ ಪ್ರತಿಷ್ಠೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಒಬ್ಬ ಸಹ ರಾಜಕಾರಣಿಯಾಗಿ ಅವರ ಈ ಸಾಧನೆಗೆ ನನ್ನ ಅಭಿನಂದನೆ ಎಂದಿದ್ದಾರೆ.

ದ್ವಿಪಕ್ಷೀಯ ಬಾಂಧವ್ಯ

ಕಳೆದ ಜುಲೈನಲ್ಲಿ ತಮಗೆ ನೀಡಲಾದ ಆತ್ಮೀಯ ಆತಿಥ್ಯ, ಭಾರತೀಯ ಆಹಾರ ಮತ್ತು ಸಂಗೀತ ಸಂಸ್ಕೃತಿಯ ಸವಿಯನ್ನು ಸ್ಮರಿಸಿದ ಅವರು, ಮುಂದಿನ ವರ್ಷ ಜಪಾನ್-ಭಾರತ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷಗಳು ತುಂಬಲಿವೆ. ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಗುರಿ ಸಾಧನೆಗೆ ಮೋದಿಯವರ ಜೊತೆಗೂಡಿ ಕೆಲಸ ಮುಂದುವರಿಸುತ್ತೇವೆ ಎಂದರು.

ಗುಜರಾತ್‌ನಿಂದ ನವದೆಹಲಿಯವರೆಗೆ ನಿರಂತರ ಸೇವೆ:ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್

ಗುಜರಾತ್‌ನಿಂದ ನವದೆಹಲಿಯವರೆಗೆ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಕಾಲ ನಿರಂತರ ನಾಯಕತ್ವ ನೀಡಿದ ಪ್ರಧಾನಿ ಮೋದಿಯವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇತ್ತೀಚಿನ ಭಾರತ ಭೇಟಿಯ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಈ ಪಾಲುದಾರಿಕೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿದ್ದೇನೆ.

ಡೊಮಿನಿಕಾ ಕಾಮನ್‌ವೆಲ್ತ್ ಪ್ರಧಾನಿ:ರೂಸ್ವೆಲ್ಟ್ ಸ್ಕೆರಿಟ್
ಉದಾರತೆ ಮತ್ತು ಸ್ನೇಹಕ್ಕೆ ಕೃತಜ್ಞತೆ:

ಪ್ರಧಾನಿ ಮೋದಿಯವರನ್ನು ‘ನನ್ನ ಆಪ್ತ ಸ್ನೇಹಿತ’ ಎಂದು ಬಣ್ಣಿಸಿದ ಡೊಮಿನಿಕಾ ಪ್ರಧಾನಿ, “ಗುಜರಾತ್‌ನಲ್ಲಿ ಆರಂಭವಾಗಿ ಇಂದು ಇಡೀ ಭಾರತವನ್ನು ಮುನ್ನಡೆಸುತ್ತಿರುವ ನಿಮ್ಮ 25 ವರ್ಷಗಳ ಸುದೀರ್ಘ ಜನಸೇವೆಯ ಪಯಣ ಶ್ಲಾಘನೀಯ. ಡೊಮಿನಿಕಾ ದೇಶದ ಮೇಲೆ ನೀವು ತೋರಿದ ಪ್ರೀತಿ, ಸ್ನೇಹ ಮತ್ತು ನೀಡಿದ ನೆರವಿಗೆ ಧನ್ಯವಾದಗಳು. ನಿಮ್ಮ ಆರೋಗ್ಯ, ಶಕ್ತಿ ಮತ್ತು ಯಶಸ್ಸು ನಿರಂತರವಾಗಿರಲಿ” ಎಂದು ಹಾರೈಸಿದರು.

ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು
ಗ್ಲೋಬಲ್ ಸೌತ್ ಧ್ವನಿ:

ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರು ಅಧಿಕೃತ ಸಂದೇಶ ರವಾನಿಸಿದ್ದು, ಗುಜರಾತ್ ಹಾಗೂ ಭಾರತ ಗಣರಾಜ್ಯದ ಮುಖ್ಯಸ್ಥರಾಗಿ ಮೋದಿ ತೋರಿದ ಸುಸ್ಥಿರ ನಾಯಕತ್ವ, ಆರ್ಥಿಕ ಸುಧಾರಣೆಗಳು ಹಾಗೂ ಜಾಗತಿಕ ವೇದಿಕೆಗಳಲ್ಲಿ ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ ರಾಷ್ಟ್ರಗಳು) ಹಿತಾಸಕ್ತಿ ಪರವಾಗಿ ನಿಂತಿದ್ದನ್ನು ಶ್ಲಾಘಿಸಿದರು.

ಮೋದಿಯವರ 25 ವರ್ಷಗಳ ಮೈಲಿಗಲ್ಲಿನ ಹಿನ್ನೆಲೆ
ಗುಜರಾತ್ ಸಿಎಂ (2001 – 2014): 2001ರ ಭುಜ್ ಭೂಕಂಪದ ಬಿಕ್ಕಟ್ಟಿನ ಸಮಯದಲ್ಲಿ ಗುಜರಾತ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೋದಿ, ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ ‘ಗುಜರಾತ್ ಅಭಿವೃದ್ಧಿ ಮಾದರಿ’ಯನ್ನು ದೇಶಕ್ಕೆ ಪರಿಚಯಿಸಿದರು. ಭಾರತದ ಪ್ರಧಾನಿ (2014 ರಿಂದ ಇಂದಿನವರೆಗೆ): 2014, 2019 ಹಾಗೂ 2024ರ ಲೋಕಸಭಾ ಚುನಾವಣೆಗಳಲ್ಲಿ ಮುನ್ನಡೆಸಿ ಸತತ ಮೂರು ಬಾರಿ ಪ್ರಧಾನಿಯಾದ ದಾಖಲೆ ಬರೆದಿದ್ದಾರೆ.

ಮತ್ತಷ್ಟು ಓದಿ:
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ

ಜಾಗತಿಕ ನಾಯಕತ್ವ: ಜಿ-20 ಅಧ್ಯಕ್ಷತೆ, ಕ್ವಾಡ್ (QUAD) ಒಕ್ಕೂಟ, ಹಾಗೂ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ (ISA) ಮೂಲಕ ಭಾರತವನ್ನು ಜಾಗತಿಕ ರಾಜತಾಂತ್ರಿಕತೆಯ ಕೇಂದ್ರಬಿಂದುವಾಗಿಸಿದ ಹೆಗ್ಗಳಿಕೆ ಇವರ ನಾಯಕತ್ವಕ್ಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us