AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ರಾಜಕೀಯ ಮಹತ್ವಾಕಾಂಕ್ಷೆಗಾಗಿ ಅಲ್ಲ, ದೇಶ ಸೇವೆಯೆಂಬ ಮಿಷನ್‌ಗಾಗಿ ಬಂದವನು: 25 ವರ್ಷಗಳ ಆಡಳಿತ ಪಯಣ ಸ್ಮರಿಸಿದ ಪ್ರಧಾನಿ ಮೋದಿ

We Will Doi It: ಪ್ರಧಾನಿ ಮೋದಿ ತಮ್ಮ 25 ವರ್ಷಗಳ ಆಡಳಿತ ಪಯಣ ಸ್ಮರಿಸಿದ್ದು, ಇದು ರಾಜಕೀಯ ಮಹತ್ವಾಕಾಂಕ್ಷೆಯಲ್ಲ, ದೇಶಸೇವೆಯ ಮಿಷನ್ ಎಂದಿದ್ದಾರೆ. ಸವಾಲುಗಳಿಂದ ಪಾಠ ಕಲಿತು, "ಕರ್ಮವೇ ಧರ್ಮ" ತತ್ವದಿಂದ ಪ್ರೇರಿತರಾಗಿ ನಿಸ್ವಾರ್ಥ ಸೇವೆಯನ್ನು ಮುಂದುವರೆಸಿದ್ದಾರೆ. ಕೋಟ್ಯಂತರ ಕಾರ್ಯಕರ್ತರ ಸಹಯೋಗದೊಂದಿಗೆ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ, ಸಂವಿಧಾನ ಹಾಗೂ ಜನಾದೇಶಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಾನು ರಾಜಕೀಯ ಮಹತ್ವಾಕಾಂಕ್ಷೆಗಾಗಿ ಅಲ್ಲ, ದೇಶ ಸೇವೆಯೆಂಬ ಮಿಷನ್‌ಗಾಗಿ ಬಂದವನು: 25 ವರ್ಷಗಳ ಆಡಳಿತ ಪಯಣ ಸ್ಮರಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
ನಯನಾ ರಾಜೀವ್
|

Updated on:Oct 07, 2026 | 11:16 AM

Share

ನವದೆಹಲಿ, ಅಕ್ಟೋಬರ್ 07: ‘‘ನಾನು ರಾಜಕೀಯ ಮಹತ್ವಾಕಾಂಕ್ಷೆಗಾಗಿ ಬದುಕುವ ವ್ಯಕ್ತಿಯಲ್ಲ, ದೇಶಸೇವೆಯ ಮಿಷನ್‌ಗಾಗಿ ಬಂದವನು ನನಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ದೇಶಕ್ಕಾಗಿ ನಿಸ್ವಾರ್ಥ ಸೇವೆಯೇ ನನ್ನ ಜೀವನದ ಏಕೈಕ ಧ್ಯೇಯವಾಗಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ನುಡಿದಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ‘ವಿಕಸಿತ ಭಾರತ ಸಂಕಲ್ಪ ಸಭೆ’ಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳನ್ನು ಪೂರೈಸಿದ ತಮ್ಮ ಸುದೀರ್ಘ ರಾಜಕೀಯ ಪಯಣದ ಅನುಭವಗಳನ್ನು ಹಂಚಿಕೊಂಡರು.

ಭುಜ್ ಭೂಕಂಪ, ಕೋವಿಡ್‌ನಿಂದ ಹಿಡಿದು ಮಾಧ್ಯಮಗಳವರೆಗೆ: ಪಾಠ ಕಲಿಸಿದ ಸವಾಲುಗಳು

2001ರ ಭುಜ್ ಭೂಕಂಪದ ಸಂದಿಗ್ಧ ಪರಿಸ್ಥಿತಿಯಿಂದ ಹಿಡಿದು ಜಾಗತಿಕ ಕೋವಿಡ್ ಬಿಕ್ಕಟ್ಟು, ಮಾಧ್ಯಮಗಳ ಕಟು ವಿಮರ್ಶೆಗಳವರೆಗೆ ಎದುರಾದ ಪ್ರತಿಯೊಂದು ಸವಾಲುಗಳೂ ತಮಗೆ ಆಡಳಿತದ ಪಾಠಗಳನ್ನು ಕಲಿಸಿವೆ ಎಂದು ಮೋದಿ ಸ್ಮರಿಸಿದರು. ವಿಮರ್ಶಕರಿಂದ ಹಿಡಿದು ರಾಜಕೀಯ ವಿರೋಧಿಗಳವರೆಗೆ ಪ್ರತಿಯೊಬ್ಬರೂ ನನಗೆ ಹೊಸ ವಿಷಯಗಳನ್ನು ಕಲಿಸಿದ್ದಾರೆ. ‘ಕರ್ಮವೇ ಧರ್ಮ’ ಮತ್ತು ಭಗವದ್ಗೀತೆಯ ‘ಕರ್ಮಣ್ಯೇವಾಧಿಕಾರಸ್ತೇ’ ಮಂತ್ರವೇ ನನ್ನ ಕೆಲಸಕ್ಕೆ ಸದಾ ಪ್ರೇರಣೆ ಎಂದರು.

ನಾನು ಒಬ್ಬಂಟಿಯಲ್ಲ, ಕೋಟಿ ಕೋಟಿ ಕಾರ್ಯಕರ್ತರಿದ್ದಾರೆ

ರಾಷ್ಟ್ರದ ಸೇವೆ ಮಾಡುತ್ತಾ ನಾನು ಎಂದಿಗೂ ಒಬ್ಬಂಟಿ ಎಂದು ಭಾವಿಸಿಲ್ಲ. ಕೋಟ್ಯಂತರ ಸ್ವಯಂಸೇವಕರು ಮತ್ತು ಕಾರ್ಯಕರ್ತರ ನಿಸ್ವಾರ್ಥ ಶ್ರಮ ನನ್ನೊಂದಿಗಿದೆ. ಮಾನವತೆಯ ಹಾಗೂ ನೊಂದವರ ಸೇವೆ ಮಾಡುವುದೇ ನಮ್ಮ ಪ್ರಮುಖ ಧರ್ಮ ಎಂದರು.

ನೆನಪಿಗಾಗಿ ಅಲ್ಲ, ಹೊಸ ಸಂಕಲ್ಪದ ದಿನ: ವಿ ವಿಲ್ ಡೂ ಇಟ್

“ಈ ದಿನ ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವುದಕ್ಕಷ್ಟೇ ಸೀಮಿತವಲ್ಲ. ಬದಲಿಗೆ ಹೊಸ ದಿಕ್ಕಿನತ್ತ ಸಂಕಲ್ಪ ತೊಡುವ ದಿನ. ನಾವು ಏನು ಹೇಳುತ್ತೇವೋ ಅದನ್ನು ಮಾಡಿ ತೋರಿಸುತ್ತೇವೆ (ವಿ ವಿಲ್ ಡೂ ಇಟ್). ಕೆಂಪುಕೋಟೆಯಿಂದ ನೀಡಿದ ಸಂದೇಶದಂತೆ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉತ್ಸಾಹ ನಮ್ಮಲ್ಲಿದೆ.”

ಮತ್ತಷ್ಟು ಓದಿ: ಸಿಎಂ ಗದ್ದುಗೆಯಿಂದ ಪಿಎಂ ಪೀಠಕ್ಕೆ: ನರೇಂದ್ರ ಮೋದಿಯವರ ಅಧಿಕಾರದ ರಜತ ಮಹೋತ್ಸವ

2047ರ ಗುರಿ – ವಿಕಸಿತ ಭಾರತ

ಆತ್ಮನಿರ್ಭರ ಭಾರತ, ಜಾಗತಿಕ ಉತ್ಪಾದನಾ ಹಬ್ , ಒಲಿಂಪಿಕ್ಸ್ ಆತಿಥ್ಯ ಹಾಗೂ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತವನ್ನು ಮುಂಚೂಣಿಗೆ ತರುವ ಆತ್ಮವಿಶ್ವಾಸ ದೇಶದಲ್ಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಜನಾದೇಶ ಹಾಗೂ ಸಂವಿಧಾನಕ್ಕೆ ನಮನ:

2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣವನ್ನು ಸ್ಮರಿಸಿದ ಮೋದಿ, “ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನಿರಂತರವಾಗಿ ಆಶೀರ್ವದಿಸಿದ ಜನತೆಗೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ತಲೆಬಾಗಿ ನಮಿಸುತ್ತೇನೆ” ಎಂದು ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇಶಸೇವೆಗೆ ಮತ್ತಷ್ಟು ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಪೋಸ್ಟ್

ನನ್ನನ್ನು ಕೆಡವಿದವರು, ಮತ್ತೆ ಎದ್ದು ನಿಲ್ಲಲು ಕಲಿಸಿದರು

ನನ್ನನ್ನು ಕೆಡವಿದವರು ಮತ್ತೆ ಎದ್ದು ನಿಲ್ಲಲು ಕಲಿಸಿದ್ದಾರೆ. ನನ್ನನ್ನು ಗೆಲ್ಲುವಂತೆ ಮಾಡಿದ ಪ್ರತಿಯೊಬ್ಬರಿಗೂ ವಿನಮ್ರನಾಗಿರುತ್ತೇನೆ. ನನ್ನನ್ನು ವಿರೋಧಿಸಿದವರೇ, ಪ್ರಜಾಪ್ರಭುತ್ವದ ಶಕ್ತಿಯನ್ನು ನನಗೆ ವಿವರಿಸಿದ್ದಾರೆ, ಪ್ರತಿಯೊಂದು ಬಿಕ್ಕಟ್ಟು ನನ್ನ ತಾಳ್ಮೆಯ ಪರೀಕ್ಷೆಯಾಗಿತ್ತು, ಪ್ರತಿಯೊಂದು ಯಶಸ್ಸು ನನ್ನ ಜವಾಬ್ದಾರಿಯನ್ನು ವಿಸ್ತರಿಸಿತು ಮತ್ತು ಪ್ರತಿಯೊಂದು ಸಾಧನೆಯು ದೊಡ್ಡ ಗುರಿಗಳತ್ತ ಸಾಗಲು ನನಗೆ ಧೈರ್ಯ ಮತ್ತು ಉತ್ಸಾಹವನ್ನು ನೀಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

ನಿತಿನ್ ನಬಿನ್ ಶ್ಲಾಘನೆ:

ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, “ಪ್ರಧಾನಿ ಮೋದಿಯವರು ಶೌಚಾಲಯ ನಿರ್ಮಾಣದಿಂದ ಉಜ್ವಲ ಯೋಜನೆವರೆಗೆ ಕೋಟ್ಯಂತರ ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡಿದ್ದಾರೆ. 16 ಕೋಟಿ ‘ಲಖ್‌ಪತಿ ದೀದಿ’ಗಳನ್ನು ರೂಪಿಸುವ ಮೂಲಕ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದಾರೆ” ಎಂದು ಬಣ್ಣಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:07 am, Wed, 7 October 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More