ಭಾರತದಲ್ಲಿ ನಡೆದ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ ಕೆಲ ಸಂತೋಷದ ಸಂಗತಿಗಳ ಜೊತೆಗೆ ಅಘಾತಕಾರಿ ಅಂಶಗಳೂ ಇವೆ. ಅರ್ಧಕ್ಕಿಂತ ಹೆಚ್ಚು ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಇದೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಐದು ವರ್ಷದೊಳಗಿನ ಮಕ್ಕಳ ಪೈಕಿ ಶೇ 67ರಷ್ಟು ಮಕ್ಕಳು ರಕ್ತಹೀನತೆ ಅಥವಾ ಅನಿಮೀಯದಿಂದ ಬಳಲುತ್ತಿದ್ದಾರೆ. ಹದಿನಾಲ್ಕು ರಾಜ್ಯಗಳ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರಲ್ಲಿ ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಆರು ತಿಂಗಳಿಂದ ಐದು ವರ್ಷ ವಯಸ್ಸಿನ ಮಕ್ಕಳ ಪೈಕಿ ಶೇ 67ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಕೇಂದ್ರ ಸರ್ಕಾರವು ಸರ್ವೆಯ ಅಂಕಿಅಂಶಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. 2015-16 ರಲ್ಲಿ ನಡೆಸಿದ ಕೊನೆಯ ಸಮೀಕ್ಷೆಯಲ್ಲಿ ಶೇ 58.6 ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದರು. ಈಗ ಈ ಪ್ರಮಾಣವು ಶೇಕಡಾ 67ಕ್ಕೆ ಏರಿಕೆಯಾಗಿರುವುದು ಕಂಡುಬಂದಿದೆ. ಕಳೆದ ಸಮೀಕ್ಷೆಗೆ ಹೋಲಿಸಿದರೆ 15ರಿಂದ 49 ವರ್ಷ ಮತ್ತು 15ರಿಂದ 19 ವರ್ಷ ವಯಸ್ಸಿನ ಮಹಿಳೆಯರು ಮತ್ತು ಪುರುಷರು ಹೆಚ್ಚು ರಕ್ತಹೀನತೆ ಹೊಂದಿದ್ದಾರೆ. 15ರಿಂದ 49 ವರ್ಷ ವಯೋಮಾನದ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಕರಣಗಳು ಹೆಚ್ಚಾಗಿವೆ. ಈ ವಯೋಮಾನದವರಲ್ಲಿ ಶೇ 57ರಷ್ಟು ಮಹಿಳೆಯರು ಹಾಗೂ ಶೇ 25ರಷ್ಟು ಪುರುಷರಿದ್ದಾರೆ.
ಕಬ್ಬಿಣದ ಅಂಶವಿರುವ ಪೊಲಿಕ್ ಆಸಿಡ್ ಮಾತ್ರೆಗಳನ್ನು ಹೆಚ್ಚಿನ ಸಂಖ್ಯೆಯ ಗೃಹಿಣಿಯರಿಗೆ ವಿತರಿಸಿದ್ದರೂ ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗುತ್ತಿರುವ ಕಳವಳದ ಸಂಗತಿ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
15ರಿಂದ 49 ವರ್ಷ ವಯೋಮಾನದ ಮಹಿಳೆಯರ ಪೈಕಿ ಹಿಂದಿನ ಸಮೀಕ್ಷೆಯಲ್ಲಿ ಶೇ 58ರಷ್ಟು ಮಹಿಳೆಯರು ಬ್ಯಾಂಕ್ ಖಾತೆ, ಉಳಿತಾಯ ಖಾತೆ ಹೊಂದಿ ತಾವೇ ನಿರ್ವಹಿಸುತ್ತಿದ್ದರು. ಈಗ ಸ್ವತಃ ಬ್ಯಾಂಕ್ ಅಥವಾ ಉಳಿತಾಯ ಖಾತೆಯನ್ನು ಹೊಂದಿರುವವರ ಸಂಖ್ಯೆ ಶೇ 78.6ಕ್ಕೆ ಏರಿಕೆಯಾಗಿದೆ. 2015-16ರಲ್ಲಿ ಪ್ರತಿ ಮಹಿಳೆ 2.2 ಮಕ್ಕಳನ್ನು ಹೆರುತ್ತಿದ್ದರು. ಈಗ ಇದು 2ಕ್ಕೆ ಇಳಿದಿದೆ. ಈ ಪ್ರಮಾಣವು ಚಂಡೀಗಡದಲ್ಲಿ ಶೇ 1.4, ಉತ್ತರ ಪ್ರದೇಶದಲ್ಲಿ ಶೇ 2.4 ಇದೆ. ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಉತ್ತರ ಪ್ರದೇಶವನ್ನು ಹೊರತುಪಡಿಸಿ ಎಲ್ಲ ರಾಜ್ಯಗಳು 2.1ರ ಫಲವತ್ತತೆಯ ಮಟ್ಟ ಸಾಧಿಸಿವೆ.
ಅಖಿಲ ಭಾರತ ಮಟ್ಟದಲ್ಲಿ ತಮ್ಮ ವಯಸ್ಸಿಗಿಂತಲೂ ಕಡಿಮೆ ಎತ್ತರ ಹೊಂದಿರುವ ಮಕ್ಕಳ ಸಂಖ್ಯೆ ಶೇ 38ರಿಂದ ಶೇ 36ಕ್ಕೆ ಇಳಿದಿದೆ. ಕಡಿಮೆ ತೂಕ ಹೊಂದಿರುವ ಮಕ್ಕಳ ಪ್ರಮಾಣವು ಶೇ 36ರಿಂದ ಶೇ 32ಕ್ಕೆ ಕಡಿಮೆಯಾಗಿದೆ. ಈ ಸೂಚಕಗಳಿಗೆ ಸಂಬಂಧಿಸಿದಂತೆ ತೀವ್ರ ಬದಲಾವಣೆಗಳು ಅಲ್ಪಾವಧಿಯಲ್ಲಿ ಅಸಂಭವವಾಗಿರುವುದರಿಂದ ಬದಲಾವಣೆಯು ಗಮನಾರ್ಹವಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ. ಅಖಿಲ ಭಾರತ ಮಟ್ಟದಲ್ಲಿ ಸಾಂಸ್ಥಿಕ ಜನನಗಳು ಶೇ 79ರಿಂದ 89ರಷ್ಟು ಹೆಚ್ಚಾಗಿದೆ. ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಸಾಂಸ್ಥಿಕ ಜನನ ಪ್ರಮಾಣವು ಶೇ 100ರಷ್ಟು ಕಂಡುಬಂದಿದೆ. ಅನೇಕ ರಾಜ್ಯಗಳಲ್ಲಿ, ವಿಶೇಷವಾಗಿ ಖಾಸಗಿ ಆರೋಗ್ಯ ಸೌಲಭ್ಯಗಳಲ್ಲಿ ಸಿ-ವಿಭಾಗದ ವಿತರಣೆಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
12-23 ತಿಂಗಳ ವಯಸ್ಸಿನ ಮಕ್ಕಳಲ್ಲಿ ಸಂಪೂರ್ಣ ರೋಗನಿರೋಧಕ ಶಕ್ತಿಯು ಅಖಿಲ ಭಾರತ ಮಟ್ಟದಲ್ಲಿ ಶೇ 62ರಿಂದ ಶೇ 76ರ ಸುಧಾರಣೆ ದಾಖಲಿಸಿದೆ. 14 ರಾಜ್ಯಗಳ ಪೈಕಿ 11 ರಾಜ್ಯಗಳು 12ರಿಂದ 23ತಿಂಗಳ ವಯಸ್ಸಿನ ನಾಲ್ಕನೇ ಮೂರರಷ್ಟು ಮಕ್ಕಳಿಗೆ ಪ್ರತಿರಕ್ಷಣೆಯನ್ನು ನೀಡಿವೆ. ಒಡಿಶಾದಲ್ಲಿ ಈ ಸಂಖ್ಯೆಯು ಅತಿ ಹೆಚ್ಚು ಅಂದರೆ ಶೇ 90ರಷ್ಟು ಇದೆ.
ಸಮೀಕ್ಷೆಯ 2ನೇ ಹಂತದಲ್ಲಿ ಅರುಣಾಚಲ ಪ್ರದೇಶ, ಚಂಡೀಗಡ, ಛತ್ತೀಸಗಡ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿ, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಖಂಡ ರಾಜ್ಯಗಳಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ದೇಶದ 707 ಜಿಲ್ಲೆಗಳ ಸುಮಾರು 600,000 ಲಕ್ಷ ಮಾದರಿ ಕುಟುಂಬಗಳಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು. 724,115 ಮಹಿಳೆಯರು ಮತ್ತು 101,839 ಪುರುಷರನ್ನು ಒಳಗೊಂಡಿದೆ. ಹಂತ-Iರಲ್ಲಿ ಒಳಗೊಂಡಿರುವ 22 ರಾಜ್ಯಗಳಿಗೆ ಸಂಬಂಧಿಸಿದಂತೆ ಎನ್ಎಫ್ಎಚ್ಎಸ್-5ನ ಸಂಶೋಧನೆಗಳನ್ನು ಡಿಸೆಂಬರ್ 2020ರಲ್ಲಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಸಚಿವರ ನಡುವೆ ವಾಕ್ಸಮರ: ಆರೋಗ್ಯ ಇಲಾಖೆ ಯೋಜನೆಗಳ ಮಂಜೂರಾತಿ ಬಗ್ಗೆ ಕಾವೇರಿದ ಚರ್ಚೆ
ಇದನ್ನೂ ಓದಿ: Weight Loss: ಚಳಿಗಾಲದಲ್ಲಿ ಆರೋಗ್ಯಕರ ತೂಕ ನಷ್ಟಕ್ಕೆ ಸೇವಿಸಬಹುದಾದ ಆಹಾರ ಪದಾರ್ಥಗಳಿವು
Published On - 9:39 pm, Thu, 25 November 21