
ಮುಂಬೈ, ಸೆಪ್ಟೆಂಬರ್ 30: ಮುಂಬೈನ ಜನಪ್ರಿಯ ಹೋಟೆಲ್ ಒಂದರಲ್ಲಿ ಗ್ರಾಹಕರು ಆರ್ಡರ್ ಮಾಡಿದ ದೋಸೆಯಲ್ಲಿ ಸಣ್ಣ ಇಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ತ್ವರಿತ ಕ್ರಮ ಕೈಗೊಂಡು ಸಂಬಂಧಪಟ್ಟ ಹೋಟೆಲ್ನ ಪರವಾನಗಿಯನ್ನು ಅಮಾನತುಗೊಳಿಸಿದೆ.
ಮುಂಬೈನ ಬೊರಿವಲಿ ಪಶ್ಚಿಮ ಭಾಗದಲ್ಲಿರುವ ‘ರಾಧಾಕೃಷ್ಣ ಹೋಟೆಲ್’ಗೆ ಅಮಿತ್ ತ್ರಿವೇದಿ ಎಂಬುವವರು ತಮ್ಮ ಮಗ ಮತ್ತು ಇಬ್ಬರು ಸಹೋದರರೊಂದಿಗೆ ದಕ್ಷಿಣ ಭಾರತದ ಉಪಾಹಾರ ಸೇವಿಸಲು ತೆರಳಿದ್ದರು. ಅವರು ‘ಮಸಾಲ ದೋಸೆ’ ಆರ್ಡರ್ ಮಾಡಿ, ಒಂದೆರಡು ತುತ್ತು ತಿಂದ ನಂತರ ದೋಸೆಯೊಳಗೆ ಸಣ್ಣ ಇಲಿ ಇರುವುದನ್ನು ಗಮನಿಸಿದ್ದಾರೆ.
ಈ ಅಸಹ್ಯಕರ ದೃಶ್ಯವನ್ನು ಕಂಡ ತಕ್ಷಣ ಅವರು ತೀವ್ರ ಆಘಾತಕ್ಕೊಳಗಾಗಿ ಸ್ಥಳದಲ್ಲೇ ನಿರಂತರವಾಗಿ ವಾಂತಿ ಮಾಡಿಕೊಂಡಿದ್ದಾರೆ. ನಂತರ ತ್ರಿವೇದಿ ಅವರು ಬೊರಿವಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಈ ದೂರಿನ ವಿವರಗಳನ್ನು ಆಹಾರ ಸುರಕ್ಷತಾ ಇಲಾಖೆಗೆ (FDA) ಹಸ್ತಾಂತರಿಸಿದರು.
ಪೋಸ್ಟ್
ಹೋಟೆಲ್ ಪರವಾನಗಿ ರದ್ದು
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಫ್ಡಿಎ ಅಧಿಕಾರಿಗಳ ತಂಡ ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಡುಗೆ ಕೋಣೆಯಲ್ಲಿ ನೈರ್ಮಲ್ಯದ ಗಂಭೀರ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ರಾಧಾಕೃಷ್ಣ ಹೋಟೆಲ್ನ ವ್ಯಾಪಾರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ.
ಮತ್ತಷ್ಟು ಓದಿ:
ಮುಚ್ಚುವ ಹಂತದಲ್ಲಿದ್ದ ಹೋಟೆಲ್ ಅದೃಷ್ಟ ಬದಲಿಸಿದ ಅನುಷ್ಕಾ-ವಿರಾಟ್ ನೀಡಿದ ಆರ್ಡರ್; ಈಗ ಕೋಟಿಯ ಒಡೆಯ
ಕಟ್ಟುನಿಟ್ಟಿನ ಕಾರ್ಯಾಚರಣೆ: ಮಹಾರಾಷ್ಟ್ರದ ಎಫ್ಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ಅವರು ತಮ್ಮ ಕಟ್ಟುನಿಟ್ಟಾದ ಮತ್ತು ನೇರ ನಿಲುವುಗಳಿಗೆ ಹೆಸರುವಾಸಿ. ಅವರು ಅಧಿಕಾರ ವಹಿಸಿಕೊಂಡ ನಂತರ ರಾಜ್ಯಾದ್ಯಂತ ರೆಸ್ಟೋರೆಂಟ್ಗಳು, ಬೇಕರಿಗಳು, ಡೈರಿಗಳು ಮತ್ತು ಐಸ್ಕ್ರೀಮ್ ಘಟಕಗಳ ಮೇಲೆ ಅನಿರೀಕ್ಷಿತ ದಾಳಿಗಳನ್ನು ತೀವ್ರಗೊಳಿಸಿದ್ದಾರೆ. ನಕಲಿ ಪನ್ನೀರ್, ಕೃತಕ ಹಾಲು ಮತ್ತು ಮರುಬಳಕೆಯ ಎಣ್ಣೆ ಮಾರಾಟಗಾರರ ವಿರುದ್ಧ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ದಂಡದ ನಿಯಮಗಳು: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ, ಆಹಾರ ಪದಾರ್ಥಗಳಲ್ಲಿ ಇಲಿ, ಜಿರಳೆ ಅಥವಾ ಯಾವುದೇ ವಿಷಕಾರಿ ಕೀಟಗಳು ಕಂಡುಬಂದರೆ ಅಂತಹ ಸಂಸ್ಥೆಗಳ ಪರವಾನಗಿ ರದ್ದುಪಡಿಸುವುದರ ಜೊತೆಗೆ 5 ಲಕ್ಷ ರೂ.ವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕಠಿಣ ಕಾನೂನಿನಲ್ಲಿ ಅವಕಾಶವಿದೆ.
ಹೈಕೋರ್ಟ್ ಪರಿಶೀಲನೆ: ಎಫ್ಡಿಎ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳಿಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಕೆಲವು ಪ್ರಕರಣಗಳಲ್ಲಿ ನಿಯಮಾನುಸಾರ ನೋಟಿಸ್ ನೀಡದೆ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿಸಲಾಗುತ್ತಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಎಫ್ಡಿಎಗೆ ಕಾನೂನು ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿತ್ತು. ಆದಾಗ್ಯೂ, ಹಬ್ಬದ ಋತುವಿನಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಇಲಾಖೆಯು ತಪಾಸಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ