ಮುಚ್ಚುವ ಹಂತದಲ್ಲಿದ್ದ ಹೋಟೆಲ್ ಅದೃಷ್ಟ ಬದಲಿಸಿದ ಅನುಷ್ಕಾ-ವಿರಾಟ್ ನೀಡಿದ ಆರ್ಡರ್; ಈಗ ಕೋಟಿಯ ಒಡೆಯ
18 ಲಕ್ಷ ರೂಪಾಯಿ ಸಾಲದಲ್ಲಿದ್ದು ಬಾಗಿಲು ಮುಚ್ಚುವ ಸ್ಥಿತಿಯಲ್ಲಿದ್ದ ಮುಂಬೈನ 'ದೆಹಲಿ ಸೇ' ಹೋಟೆಲ್, ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಒಂದು ಆರ್ಡರ್‌ನಿಂದ ದಿಢೀರ್ ಬೆಳಕಿಗೆ ಬಂದಿದೆ. ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ವೈರಲ್ ಆದ ಈ ಹೋಟೆಲ್, ಇಂದು 4 ಶಾಖೆಗಳೊಂದಿಗೆ ತಿಂಗಳಿಗೆ ₹2 ಕೋಟಿ ವಹಿವಾಟು ನಡೆಸುತ್ತಿದೆ.

18 ಲಕ್ಷ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿ, ವ್ಯಾಪಾರವಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿಯಲ್ಲಿದ್ದ ಮುಂಬೈನ ಸಣ್ಣ ಹೋಟೆಲೊಂದು ಇಂದು ನಾಲ್ಕು ಶಾಖೆಗಳನ್ನು ಹೊಂದಿರುವ ಬಹುದೊಡ್ಡ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಒಂದು ಆರ್ಡರ್ ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್ ಈ ಹೋಟೆಲ್‌ನ ಭವಿಷ್ಯವನ್ನೇ ಬದಲಾಯಿಸಿದೆ.
ಏನಿದು ರೋಚಕ ಕಥೆ?
ಮುಂಬೈನ ಚೆಂಬೂರ್‌ನಲ್ಲಿ ‘ದೆಹಲಿ ಸೇ’ ಎಂಬ ಹೆಸರಿನ 250 ಚದರ ಅಡಿಯ ಸಣ್ಣ ಹೋಟೆಲನ್ನು ಜಸ್ಪಾಲ್ ಸಿಂಗ್ ಖಾಲ್ಸಾ ಮತ್ತು ಮಹಿಂದರ್ ಸಿಂಗ್ ಖಾಲ್ಸಾ ಎಂಬ ಸಹೋದರರು 2021ರ ಅಕ್ಟೋಬರ್‌ನಲ್ಲಿ ಆರಂಭಿಸಿದ್ದರು. ಆರಂಭದಲ್ಲಿ ಕೇವಲ 3 ಟೇಬಲ್ ಮತ್ತು 9 ಸೀಟುಗಳಿದ್ದ ಈ ಹೋಟೆಲ್‌ನಲ್ಲಿ ದೆಹಲಿ ಶೈಲಿಯ ಚೋಲೆ ಭಟೂರೆ ಮಾರಾಟ ಮಾಡಲಾಗುತ್ತಿತ್ತು. ಆದರೆ, 2022ರ ಜನವರಿಯಿಂದ ವ್ಯಾಪಾರ ಸಂಪೂರ್ಣ ಕುಸಿದು, ಸುಮಾರು 18 ಲಕ್ಷ ರೂಪಾಯಿ ಸಾಲವಾಗಿತ್ತು. ಹೋಟೆಲ್ ಬಾಡಿಗೆ ಹಾಗೂ ಕಿರಾಣಿ ಬಾಕಿ ತೀರಿಸಿ ಸೆಪ್ಟೆಂಬರ್‌ನಲ್ಲಿ ಹೋಟೆಲ್ ಮುಚ್ಚಲು ಮಾಲೀಕರು ನಿರ್ಧರಿಸಿದ್ದರು.
ತಿರುವು ನೀಡಿದ ಕಾಮಿಡಿಯನ್ ಅಭಿನವ್ ಉಪಮನ್ಯು ಪೋಸ್ಟ್
ಸೆಪ್ಟೆಂಬರ್ 2022 ರಲ್ಲಿ ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅಭಿಷೇಕ್ ಉಪಮನ್ಯು ಈ ಹೋಟೆಲ್‌ಗೆ ಭೇಟಿ ನೀಡಿ ಚೋಲೆ ಭಟೂರೆ ಸವಿದಿದ್ದರು. ಅವರಿಗೆ ಈ ಖಾದ್ಯ ತುಂಬಾ ಇಷ್ಟವಾಗಿ, “ಇಲ್ಲಿ ಅತ್ಯುತ್ತಮ ಚೋಲೆ ಭಟೂರೆ ಸಿಗುತ್ತದೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡರು. ಆರಂಭದಲ್ಲಿ ಸಹೋದರರಿಗೆ ಅಭಿಷೇಕ್ ಯಾರೆಂದೇ ತಿಳಿದಿರಲಿಲ್ಲ. ಆದರೆ ಈ ಪೋಸ್ಟ್ ನೋಡಿ ಗ್ರಾಹಕರ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು.
ವಿರಾಟ್ ಕೊಹ್ಲಿ ಮನೆಗೆ ಆರ್ಡರ್ ಮತ್ತು ಗೊಂದಲ
ಮುಂಬೈನಲ್ಲಿ ದೆಹಲಿ ಶೈಲಿಯ ‘ಚೋಲೆ ಭಟೂರೆ’ಗಾಗಿ ಹುಡುಕಾಡುತ್ತಿದ್ದ ನಟಿ ಅನುಷ್ಕಾ ಶರ್ಮಾ ಅವರಿಗೆ ಅಭಿಷೇಕ್ ಅವರ ಪೋಸ್ಟ್ ತಲುಪಿತು. ಕೂಡಲೇ ಅನುಷ್ಕಾ ಅವರ ಮನೆಯಿಂದ ‘ದೆಹಲಿ ಸೇ’ ಹೋಟೆಲ್‌ಗೆ ಕರೆ ಮಾಡಿ, ಜುಹುದಲ್ಲಿರುವ ತಮ್ಮ ಮನೆಗೆ 2 ಪ್ಲೇಟ್ ಚೋಲೆ ಭಟೂರೆ ಡೆಲಿವರಿ ಮಾಡಲು ಕೋರಲಾಯಿತು.
ಆಗ ಎರಡು ಪ್ಲೇಟ್ ಚೋಲೆ ಭಟೂರೆ ಬೆಲೆ ಕೇವಲ 240 ರೂಪಾಯಿ. ಆದರೆ ಚೆಂಬೂರ್‌ನಿಂದ ಜುಹುಗೆ ಪ್ರಯಾಣದ ವೆಚ್ಚವೇ 400 ರೂಪಾಯಿ ಆಗುತ್ತಿತ್ತು. ಅಲ್ಲದೆ, ಕರೆ ಮಾಡಿದ ಮಹಿಳೆ ಮುಂಗಡ ಹಣ ಪಾವತಿಸಲು ಬ್ಯಾಂಕ್ ವಿವರಗಳನ್ನು ಕೇಳಿದಾಗ, ಮಾಲೀಕ ಜಸ್ಪಾಲ್ ಅವರು ಯಾರೋ ತಮ್ಮನ್ನು ವಂಚಿಸಲು ಅಥವಾ ಖಾತೆ ಹ್ಯಾಕ್ ಮಾಡಲು ಸೈಬರ್ ಕ್ರೈಮ್ ಯತ್ನಿಸುತ್ತಿದ್ದಾರೆಂದು ಭಾವಿಸಿದ್ದರು. “ನನ್ನ ಖಾತೆಯಲ್ಲಿ ಹಣವೇ ಇಲ್ಲ, ಹ್ಯಾಕ್ ಮಾಡಿದರೂ ಏನು ಸಿಗುವುದಿಲ್ಲ” ಎಂದು ಅವರ ಸಹೋದರ ಧೈರ್ಯ ಹೇಳಿದ ಮೇಲಷ್ಟೇ ಬ್ಯಾಂಕ್ ವಿವರ ನೀಡಿದ್ದರು.
ಸುಮಾರು 10 ದಿನಗಳ ಕಾಲ ಈ ಕರೆಗಳ ಗೊಂದಲ ಮುಂದುವರಿದು, ಜಸ್ಪಾಲ್ ಕೊಂಚ ಕೋಪಗೊಂಡಾಗ, ಕರೆ ಮಾಡಿದ ಸಿಬ್ಬಂದಿ “ನಾವು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮನೆಯಿಂದ ಮಾತನಾಡುತ್ತಿದ್ದೇವೆ” ಎಂದು ವಿಷಯ ತಿಳಿಸಿದರು. ಮೊದಲು ಇದನ್ನು ನಂಬದಿದ್ದರೂ, ಕೊನೆಗೆ ಅಕ್ಟೋಬರ್ 5, 2022 ರಂದು ವಿರಾಟ್ ಕೊಹ್ಲಿ ಅವರ ಮನೆಗೆ ಚೋಲೆ ಭಟೂರೆ ತಲುಪಿಸಲಾಯಿತು.
ಒಂದೇ ಅರ್ಧ ಗಂಟೆಯಲ್ಲಿ ಬದಲಿ ದೃಶ್ಯ
ಚೋಲೆ ಭಟೂರೆ ಸವಿದ ಅನುಷ್ಕಾ ಶರ್ಮಾ, “ಮುಂಬೈನಲ್ಲಿ ಕೊನೆಗೂ ಅತ್ಯುತ್ತಮ ದೆಹಲಿ ಶೈಲಿಯ ಚೋಲೆ ಭಟೂರೆ ಸಿಕ್ಕಿದೆ, ಇಂದು ನಮ್ಮ ಮನೆಯಲ್ಲಿ ಸಂಭ್ರಮದ ದಿನ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕೇವಲ ಅರ್ಧ ಗಂಟೆಯಲ್ಲಿ ಹೋಟೆಲ್ ಮುಂದೆ ಜನಸಾಗರವೇ ಹರಿದುಬಂತು. ಸಾಲು ಗಟ್ಟಿ ನಿಂತ ಜನರನ್ನು ನಿಯಂತ್ರಿಸಲು ಪೋಲೀಸರೇ ಬರಬೇಕಾಯಿತು. ಉಚಿತವಾಗಿ ಊಟ ನೀಡುತ್ತಿದ್ದಾರೆಯೇ ಎಂದು ಅಕ್ಕಪಕ್ಕದವರು ವಿಚಾರಿಸುವಂತಾಯಿತು. ದಿಢೀರ್ ಹೆಚ್ಚಾದ ಬೇಡಿಕೆಯನ್ನು ತಡೆಯಲಾಗದೆ, ಹೋಟೆಲ್ ಮಾಲೀಕರು ಅಕ್ಕಪಕ್ಕದ ಮನೆಯವರಿಂದ ಕಾಬೂಲಿ ಕಡಲೆ (ಚೋಲೆ) ನೆನೆಸಿಡುವಂತೆ ಕೋರಿದರು. ಕೇವಲ 3 ದಿನಗಳಲ್ಲಿ ದಿನಕ್ಕೆ 8 ಕೆಜಿ ನೆನೆಯುತ್ತಿದ್ದ ಚೋಲೆ, 100 ಕೆಜಿಗೆ ಏರಿಕೆಯಾಯಿತು.
ಇಂದಿನ ಪರಿಸ್ಥಿತಿ: ಕೋಟಿಗಳ ಬ್ಯುಸಿನೆಸ್
ಅಂದು ಬಾಗಿಲು ಮುಚ್ಚುವ ಹಂತದಲ್ಲಿದ್ದ ‘ದೆಹಲಿ ಸೇ’ ಹೋಟೆಲ್ ಇಂದು ಮುಂಬೈನಲ್ಲಿ 4 ಶಾಖೆಗಳನ್ನು ಹೊಂದಿದೆ. ಮುಂಚೆ ದಿನಕ್ಕೆ ಅರ್ಧ-ಒಂದು ಕೆಜಿ ಚೋಲೆ ಬಳಸುತ್ತಿದ್ದವರು, ಈಗ ಪ್ರತಿದಿನ 125 ಕೆಜಿ ಚೋಲೆ ನೆನೆಸಿ ಬೇಯಿಸುತ್ತಾರೆ . ಪ್ರತಿದಿನ ನಾಲ್ಕೂ ಶಾಖೆಗಳಿಂದ 3,000ಕ್ಕೂ ಹೆಚ್ಚು ಪ್ಲೇಟ್ ಚೋಲೆ ಭಟೂರೆ ಮಾರಾಟವಾಗುತ್ತಿದೆ. ತಿಂಗಳಿಗೆ 1 ರಿಂದ 1.5 ಲಕ್ಷ ರೂಪಾಯಿ ವ್ಯಾಪಾರವಾಗದೆ ನಷ್ಟದಲ್ಲಿದ್ದ ಸಂಸ್ಥೆ, ಇಂದು ತಿಂಗಳಿಗೆ ಬಿಸಿನೆಸ್‌ನಲ್ಲಿ ರೂ. 2 ಕೋಟಿ ವಹಿವಾಟು ನಡೆಸುತ್ತಿದೆ. ಸೆಲೆಬ್ರಿಟಿಗಳ ಬೆಂಬಲ ಮತ್ತು ಸೋಷಿಯಲ್ ಮೀಡಿಯಾದ ಶಕ್ತಿ ಹೇಗೆ ಒಬ್ಬ ಸಾಮಾನ್ಯ ವ್ಯಾಪಾರಿಯ ಭವಿಷ್ಯವನ್ನೇ ಬದಲಾಯಿಸಬಹುದು ಎಂಬುದಕ್ಕೆ ಈ ಹೋಟೆಲ್ ಸಾಕ್ಷಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




