AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಬೇಕಾಗಿರುವ ಸಾಕಷ್ಟು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವುಗಳನ್ನು ಪಾಲಿಸುವ ಮೂಲ ನಾವು ಯಶಸ್ವಿ ಜೀವನವನ್ನು ನಡೆಸಬಹುದು. ಅವರು ಮನುಷ್ಯನು ಮಾಡುವಂತಹ ಕೆಲವೊಂದು ತಪ್ಪುಗಳ ಬಗ್ಗೆಯೂ ಒತ್ತಿ ಹೇಳಿದ್ದು, ಈ ತಪ್ಪುಗಳಿಂದ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಿದ್ರೆ ನಮ್ಮ ಯಾವ ತಪ್ಪುಗಳು ನಮ್ಮ ಗೌರವವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಜೀವನದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿ
ಮಾಲಾಶ್ರೀ ಅಂಚನ್​
|

Updated on: Nov 29, 2026 | 6:19 PM

Share

ತಪ್ಪು (mistakes) ಮಾಡುವುದು ಮನುಷ್ಯನ ಸಹಜ ಗುಣ. ಪ್ರತಿಯೊಬ್ಬರೂ ಕೂಡ ಒಂದಷ್ಟು ತಪ್ಪುಗಳನ್ನು ಮಾಡೇ ಮಾಡುತ್ತಾರೆ. ಆದರೆ ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಸಮಾಜದಲ್ಲಿ ನಮ್ಮ ಗೌರವವನ್ನು ಕಡಿಮೆ ಮಾಡುತ್ತದೆ ಮತ್ತು ನಾಲ್ಕು ಜನರ ಮುಂದೆ ನಮ್ಮನ್ನು ನಗೆಪಾಟಲಿಗೆ ಗುರಿ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಸಮಾಜದಲ್ಲಿ ಗೌರವಯುತ ಬಾಳಲು ಆ ತಪ್ಪುಗಳನ್ನು ಮಾಡದಿರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.  ಹಾಗಿದ್ರೆ ಸಮಾಜದಲ್ಲಿ ನಮ್ಮ ಗೌರವವನ್ನು ಕಡಿಮೆ ಮಾಡುವ ಆ ತಪ್ಪುಗಳು ಮತ್ತು ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ:

ಹೆಚ್ಚು ಮಾತನಾಡುವುದು ಮತ್ತು ಬಡಾಯಿ ಕೊಚ್ಚಿಕೊಳ್ಳುವುದು:

ಕೆಲವರು ತಮ್ಮ ಸಾಧನೆ, ಆಸ್ತಿ-ಅಂತಸ್ತು, ಸಾಮರ್ಥ್ಯಗಳ ಬಗ್ಗೆ ಎಲ್ಲರ ಬಳಿಯೂ ಬಡಾಯಿ ಕೊಚ್ಚಿಕೊಂಡು ಬರುತ್ತಾರೆ. ಎಲ್ಲೆ ಮೀರಿ ಮಾತನಾಡುತ್ತಾರೆ. ಈ ಗುಣ ನಮ್ಮನ್ನು ನಾಲ್ಕು ಜನರ ಮುಂದೆ ನಗೆ ಪಾಟಲಿಗೆ ಗುರಿ ಮಾಡುತ್ತದೆ. ಆದ್ದರಿಂದ ನಮ್ಮ ಮಾತು ಯಾವಾಗಲೂ ಹಿತಮಿತವಾಗಿರಬೇಕು. ಎಲ್ಲರ ಗಮನವನ್ನು ಸೆಳೆಯಲು ಹೆಚ್ಚು ಮಾತನಾಡುವ ಅವಶ್ಯಕತೆಯಿಲ್ಲ. ಹೆಚ್ಚು ಮಾತನಾಡುವುದರಿಂದ ಇತರರು ನಮ್ಮತ್ತ ಆಕರ್ಷಿತರಾಗುವುದಿಲ್ಲ ಬದಲಿಗೆ ಅವರು ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಾಜದಲ್ಲಿ ಗೌರವವನ್ನು ಕಾಪಾಡಿಕೊಳ್ಳಲು, ಅಗತ್ಯವಿರುವಷ್ಟು ಮಾತ್ರ ಮಾತನಾಡಬೇಕು ಮತ್ತು ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.

ಯೋಚಿಸದೆ ವಾದ ಮಾಡುವುದು, ಸಣ್ಣ ವಿಷಯಕ್ಕೂ ವಾದ ಮಾಡುವುದು:

ಪ್ರತಿಯೊಂದು ಸಣ್ಣ ವಿಷಯಕ್ಕೂ ಯೋಚಿಸದೆ ಮಾತನಾಡುವುದು, ಸಣ್ಣ ವಿಷಯಗಳಿಗೆ ಎಲ್ಲರೊಂದಿಗೆ ವಾದ ಮಾಡುವುದು ಈ ಅಭ್ಯಾಸ ನಿಮಗಿದ್ದರೆ, ನೀವು ಇತರರ ದೃಷ್ಟಿಯಲ್ಲಿ ದುರ್ಬಲರಾಗಿ ಕಾಣುತ್ತೀರಿ ಎಂದಿದ್ದಾರೆ ಚಾಣಕ್ಯ. ಯೋಚಿಸದೆ ಬಾಯಿಗೆ ಬಂದಹಾಗೆ ಮಾತನಾಡುವವರು ಸರಿಯಾದ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಅವರು ನಗೆಪಾಟಲಿಗೆ ಗುರಿಯಾಗುತ್ತಾರೆ. ಆದ್ದರಿಂದ ಯಾವಾಗಲೂ ಯೋಚಿಸಿ ಮಾತನಾಡಬೇಕು. ಪ್ರತಿ ವಿಷಯಕ್ಕೂ ಜಗಳ ಮಾಡಬಾರದು, ತಾಳ್ಮೆಯಿಂದ ವ್ಯವಹರಿಸಬೇಕು. ಈ ಗುಣವಿದ್ದರೆ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ.

ಇತರರಿಗೆ ವೈಯಕ್ತಿಕ ರಹಸ್ಯಗಳನ್ನು ಹೇಳುವುದು:

ಎಷ್ಟೇ ಕ್ಲೋಸ್‌ ಫ್ರೆಂಡ್‌ ಆದ್ರೂ ಸರಿ, ನಮ್ಮ ಕೆಲವೊಂದು ಸೀಕ್ರೆಟ್‌ಗಳನ್ನು ನಾವು ಯಾರೊಂದಿಗೂ ಹಂಚಿಕೊಳ್ಳಬಾರದು. ನೀವು ಯಾರನ್ನಾದರೂ ಕುರುಡಾಗಿ ನಂಬಿ ನಿಮ್ಮ ವೀಕ್‌ನೆಸ್‌ಗಳನ್ನು ಬಹಿರಂಗಪಡಿಸಿದರೆ, ಅದನ್ನು ಕೇಳಿ ನಿಮ್ಮನ್ನು ಗೇಲಿ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ದೌರ್ಬಲ್ಯಗಳನ್ನು ಇತರರ ಮುಂದೆ ಬಹಿರಂಗವಾದರೆ ಇದರಿಂದ ಸಮಾಜದಲ್ಲಿ ನಿಮ್ಮ ಖ್ಯಾತಿ ಹಾಳಾಗುತ್ತದೆ. ಇಲ್ಲವೆ ನಿಮ್ಮ ದೌರ್ಬಲ್ಯವನ್ನು ನಿಮ್ಮ ವಿರುದ್ಧವೇ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾರಿಗೂ ನಿಮ್ಮ ಭವಿಷ್ಯದ ಯೋಜನೆಗಳು ಮತ್ತು ನಿಮ್ಮ ದೌರ್ಬಲ್ಯ, ಸೀಕ್ರೆಟ್‌ಗಳನ್ನು ಶೇರ್‌ ಮಾಡಿಕೊಳ್ಳಬೇಡಿ.

ಇದನ್ನೂ ಓದಿ: ಗಂಡ-ಹೆಂಡತಿಯ ಈ ತಪ್ಪುಗಳು ಮನೆಯ ಶಾಂತಿ, ನೆಮ್ಮದಿಯನ್ನೇ ಕೆಡಿಸುತ್ತದೆ

ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು:

ಶೋಕಿಗಾಗಿ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿ, ಕೊನೆಗೆ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಾಲ ಮಾಡಿಕೊಳ್ಳುವ ವ್ಯಕ್ತಿ ಸಮಾಜದಲ್ಲಿ ನಗೆಪಾಟಲಿಗೆ ಗುರಿಯಾಗುತ್ತಾನೆ. ಸಾಲ ಮಾಡಿಕೊಳ್ಳುವ ವ್ಯಕ್ತಿಯ ಗೌರವವೂ ಹಾಳಾಗುತ್ತದೆ ಮತ್ತು ಆತ ಯಾವಾಗಲೂ ಟೀಕೆಗೆ ಗುರಿಯಾಗುತ್ತಾನೆ.  ಆದ್ದರಿಂದ ಯಾವತ್ತಿಗೂ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು. ಬದಲಿಗೆ ಹೂಡಿಕೆ ಮತ್ತು ಉಳಿತಾಯಕ್ಕೆ ಆದ್ಯತೆ ನೀಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಮೂರ್ಖ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸುವುದು:

ಮೂರ್ಖ ಹಾಗೂ ದುರಾಭ್ಯಾಸಗಳಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿದರೆ ಸಮಾಜದಲ್ಲಿ ನಿಮ್ಮ ಸ್ಥಾನಮಾನವೂ ಕಡಿಮೆಯಾಗುತ್ತದೆ. ಅವರೊಂದಿಗೆ ಸ್ನೇಹ ಬೆಳೆಸಿದರೆ ಜನ ನಿಮ್ಮನ್ನು ಸಹ ಮೂರ್ಖ ಹಾಗೂ ಕೆಟ್ಟ ವ್ಯಕ್ತಿಗಳೆಂದು ಭಾವಿಸುತ್ತಾರೆ. ಇದರಿಂದ ನಿಮ್ಮ ಮರ್ಯಾದೆ ಕಡಿಮೆಯಾಗುತ್ತದೆ. ಆದ್ದರಿಂದ ಯಾವಾಗಲೂ ಸಜ್ಜನರ ಸಹವಾಸದಲ್ಲಿರುವುದು ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More