ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಪೊಲೀಸರ ವಿರುದ್ಧ ಅಡ್ಡಂಡ ಕಾರ್ಯಪ್ಪ ಆಕ್ರೋಶ
ಮುಖ್ಯಾಂಶಗಳು
- ಮುಗಿಯದ ಗಾಂಧಿ ಹತ್ಯೆ ಸತ್ಯ ನಾಟಕದ ಅನುಮತಿ ವಿವಾದ
- ನಾಟಕದ ಭದ್ರತೆಗೆ ಏಳು ಲಕ್ಷದ 59 ಸಾವಿರ ರೂಪಾಯಿ ಶುಲ್ಕ ನಿಗದಿ
- ಮೈಸೂರು ಪೊಲೀಸರ ವಿರುದ್ಧ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಕ್ರೋಶ
ಮೈಸೂರಿನಲ್ಲಿ 'ಗಾಂಧಿ ಹತ್ಯೆ ಸತ್ಯ' ನಾಟಕಕ್ಕೆ ಭದ್ರತಾ ಶುಲ್ಕವಾಗಿ ಪೊಲೀಸರು 7.59 ಲಕ್ಷ ರೂ. ನಿಗದಿಪಡಿಸಿದ್ದರಿಂದ ಭಾರಿ ವಿವಾದ ಸೃಷ್ಟಿಯಾಗಿದೆ. ನಾಟಕ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಇದನ್ನು ಉದ್ದೇಶಪೂರ್ವಕ ಎಂದು ಖಂಡಿಸಿ, ಹಣ ಪಾವತಿಸಲು ನಿರಾಕರಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಯವರು ನಾಟಕ ಪ್ರದರ್ಶನವನ್ನೇ ಪ್ರಶ್ನಿಸಿದ್ದು, ಕಾರ್ಯಪ್ಪ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಮೈಸೂರು, ನವೆಂಬರ್ 29: ಅಡ್ಡಂಡ ಕಾರ್ಯಪ್ಪ ನಿರ್ದೇಶನದ ‘ಗಾಂಧಿ ಹತ್ಯೆ ಸತ್ಯ’ ನಾಟಕದ ಪ್ರದರ್ಶನಕ್ಕೆ ಸಂಬಂಧಿಸಿದ ಅನುಮತಿ ವಿವಾದ ಮುಂದುವರಿದಿದೆ. ನಾಟಕದ ಭದ್ರತೆಗಾಗಿ ಮೈಸೂರು ಪೊಲೀಸರು 7 ಲಕ್ಷ 59 ಸಾವಿರ ರೂ ಶುಲ್ಕ ನಿಗದಿಪಡಿಸಿರುವುದಕ್ಕೆ ಪೊಲೀಸರ ವಿರುದ್ಧ ಅಡ್ಡಂಡ ಕಾರ್ಯಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ‘ಪೊಲೀಸರು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿದ್ದಾರೆ. ನನ್ನ ಹೆಣವು 7,59,000 ಹಣವನ್ನು ಪಾವತಿ ಮಾಡುವುದಿಲ್ಲ. ಈ ಹಣ ತರಬೇಕಾದರೆ ನಾನು ನನ್ನ ಕೊಡಗಿನ ಒಂದು ಎಕರೆ ಜಮೀನು ಮಾರಾಟ ಮಾಡಬೇಕು. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ. ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ಸದ್ಯಕ್ಕೆ ನಾಟಕವನ್ನು ಮುಂದೂಡುತ್ತಿದ್ದೇನೆ, ಆದರೆ ರದ್ದುಪಡಿಸುತ್ತಿಲ್ಲ. ನ್ಯಾಯಾಲಯದ ಅನುಮತಿ ಜೊತೆ ಗಾಂಧಿ ಹತ್ಯೆ ಸತ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಮಧುರೈ ಮಾದರಿಯಲ್ಲಿ ನನ್ನ ನಾಟಕಕ್ಕೆ ನ್ಯಾಯಾಲಯ ಅನುಮತಿ ಕೊಡಿಸುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

