AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟಕ್ಕೂ ಮುನ್ನ ಒಂದು ಚಮಚ ಆಲಿವ್ ಎಣ್ಣೆ ಕುಡಿದರೆ ಶುಗರ್ ಹೆಚ್ಚಳ ತಡೆಯಬಹುದೇ? ವೈರಲ್ ಟ್ರೆಂಡ್‌ನ ಸತ್ಯವೇನು ತಿಳಿದುಕೊಳ್ಳಿ

ಊಟಕ್ಕೂ 15 ನಿಮಿಷ ಮೊದಲು ಒಂದು ಚಮಚ ಆಲಿವ್ ಎಣ್ಣೆ ಕುಡಿದರೆ ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ತಡೆಯಬಹುದು ಎಂಬ ಟ್ರೆಂಡ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ವಿಧಾನಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆಯೇ? ಸಂಶೋಧನೆ ಏನು ಹೇಳುತ್ತದೆ? ಮಧುಮೇಹ ನಿಯಂತ್ರಣಕ್ಕೆ ಆಲಿವ್ ಎಣ್ಣೆ ಕುಡಿಯುವ ಬದಲು ಆಹಾರದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟಕ್ಕೂ ಮುನ್ನ ಒಂದು ಚಮಚ ಆಲಿವ್ ಎಣ್ಣೆ ಕುಡಿದರೆ ಶುಗರ್ ಹೆಚ್ಚಳ ತಡೆಯಬಹುದೇ? ವೈರಲ್ ಟ್ರೆಂಡ್‌ನ ಸತ್ಯವೇನು ತಿಳಿದುಕೊಳ್ಳಿ
Olive Oil Before Meals
ಪ್ರೀತಿ ಭಟ್​, ಗುಣವಂತೆ
|

Updated on: Nov 28, 2026 | 9:01 PM

Share

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಟ್ರೆಂಡ್‌ವೊಂದು ವೈರಲ್ ಆಗಿದೆ. ಊಟ ಮಾಡುವ 15 ನಿಮಿಷಗಳ ಮೊದಲು ಒಂದು ಚಮಚ ಆಲಿವ್ ಎಣ್ಣೆ ಕುಡಿದರೆ, ಊಟದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ವೇಗವಾಗಿ ಏರುವುದಿಲ್ಲ ಎಂಬುದು ಈ ಟ್ರೆಂಡ್‌ನಲ್ಲಿರುವ ಪ್ರಮುಖ ಹೇಳಿಕೆ. ಕೆಲವರು ಇದನ್ನು ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಸುಲಭ ಉಪಾಯವೆಂದೂ ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ಆಲಿವ್ ಎಣ್ಣೆ ಕುಡಿಯುವುದರಿಂದ ಮಧುಮೇಹ ನಿಯಂತ್ರಣವಾಗುತ್ತದೆಯೇ ಈ ಬಗ್ಗೆ ವೈದ್ಯರು ಹೇಳುವುದೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಶೋಧನೆಯಲ್ಲಿ ಕಂಡುಬಂದಿದ್ದೇನು?

2026ರ ಅಕ್ಟೋಬರ್‌ನಲ್ಲಿ ವೈದ್ಯಕೀಯ ಜರ್ನಲ್ ‘ಡಯಾಬಿಟಿಸ್’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿಜ್ಞಾನಿಗಳು ಇಲಿಗಳ ಮೇಲೆ ಆಲಿವ್ ಎಣ್ಣೆಯ ಪರಿಣಾಮವನ್ನು ಪರಿಶೀಲಿಸಿದ್ದಾರೆ. ಗ್ಲೂಕೋಸ್ ನೀಡುವ 15 ನಿಮಿಷಗಳ ಮೊದಲು ಇಲಿಗಳಿಗೆ ಆಲಿವ್ ಎಣ್ಣೆ ನೀಡಲಾಗಿತ್ತು. ಆರಂಭದ 15ರಿಂದ 30 ನಿಮಿಷಗಳ ಅವಧಿಯಲ್ಲಿ ಅವುಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ತುಲನಾತ್ಮಕವಾಗಿ ಕಡಿಮೆ ಇರುವುದು ಕಂಡುಬಂದಿತ್ತು. ಇದಕ್ಕೆ ಒಂದು ಕಾರಣ ಹೊಟ್ಟೆಯಿಂದ ಆಹಾರವು ಸಣ್ಣ ಕರುಳಿಗೆ ಸಾಗುವ ಪ್ರಕ್ರಿಯೆ ನಿಧಾನವಾಗಿರುವುದು ಎಂದು ಸಂಶೋಧಕರು ವಿವರಿಸಿದ್ದಾರೆ. ಕೊಬ್ಬಿನ ಅಂಶವು ಆಹಾರ ಹೊಟ್ಟೆಯಿಂದ ಮುಂದೆ ಸಾಗುವ ವೇಗವನ್ನು ನಿಧಾನಗೊಳಿಸಬಹುದು. ಇದರಿಂದ ಗ್ಲೂಕೋಸ್ ಹೀರಿಕೊಳ್ಳುವಿಕೆ ತಡವಾಗಬಹುದು. ಆದರೆ ಇದು ಪ್ರಾಣಿಗಳ ಮೇಲಿನ ಅಧ್ಯಯನವಾಗಿದ್ದು, ಇದೇ ಪರಿಣಾಮ ಮನುಷ್ಯರಲ್ಲೂ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಪ್ರತಿದಿನ ಆಲಿವ್ ಎಣ್ಣೆ ಕುಡಿದರೆ ಮಧುಮೇಹ ನಿಯಂತ್ರಣವಾಗುತ್ತದೆಯೇ?

ಆಲಿವ್ ಎಣ್ಣೆಯಲ್ಲಿ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು (MUFA) ಇವೆ. ಇವು ಆರೋಗ್ಯಕರ ಕೊಬ್ಬಿನ ಮೂಲವೆಂದು ಪರಿಗಣಿಸಲಾಗುತ್ತದೆ. ಕೊಬ್ಬಿನ ಸೇವನೆಯಿಂದ ಹೊಟ್ಟೆ ಖಾಲಿಯಾಗುವ ಪ್ರಕ್ರಿಯೆ ನಿಧಾನವಾಗಬಹುದು. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಗರಿಷ್ಠ ಮಟ್ಟ ತಲುಪುವ ಸಮಯ ಬದಲಾಗಬಹುದು. ಆದರೆ 2026ರ ಫೆಬ್ರವರಿಯಲ್ಲಿ ‘ನ್ಯೂಟ್ರಿಷನ್ ರಿವ್ಯೂಸ್’ ಜರ್ನಲ್‌ನಲ್ಲಿ ಪ್ರಕಟವಾದ 51 ನಿಯಂತ್ರಿತ ಅಧ್ಯಯನಗಳ ಮೆಟಾ-ವಿಶ್ಲೇಷಣೆಯಲ್ಲಿ 4,334 ಜನರ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಆಲಿವ್ ಎಣ್ಣೆ ಸೇವನೆಯಿಂದ ರಕ್ತದಲ್ಲಿನ ಗ್ಲೂಕೋಸ್, ಇನ್ಸುಲಿನ್ ಅಥವಾ HbA1c ಮಟ್ಟಗಳಲ್ಲಿ ಒಟ್ಟಾರೆಯಾಗಿ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ಹೀಗಾಗಿ ಇದನ್ನು ಮಧುಮೇಹ ನಿಯಂತ್ರಣ ಮಾಡುತ್ತದೆ ಎಂದು ಪರಿಗಣಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

ಇದನ್ನೂ ಓದಿ: ಸದಾ ಸುಸ್ತು, ಕೈಕಾಲುಗಳಲ್ಲಿ ಜುಮ್ಮೆನಿಸುತ್ತಾ? ಹಾಗಿದ್ರೆ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ!

ಆಹಾರ ಪದ್ಧತಿಯಲ್ಲಿ ಹೆಚ್ಚುವರಿ ಎಣ್ಣೆ ಕುಡಿಯುವುದು ಸರಿಯೇ?

ಒಂದು ದೊಡ್ಡ ಚಮಚ ಆಲಿವ್ ಎಣ್ಣೆಯಲ್ಲಿ ಸುಮಾರು 120 ಕ್ಯಾಲೊರಿ ಮತ್ತು 13.5 ಗ್ರಾಂ ಕೊಬ್ಬು ಇರುತ್ತದೆ. ದಿನಕ್ಕೆ ಮೂರು ಬಾರಿ ಊಟಕ್ಕೂ ಮೊದಲು ಇದನ್ನು ಕುಡಿದರೆ ಹೆಚ್ಚುವರಿಯಾಗಿ ಸುಮಾರು 360 ಕ್ಯಾಲೊರಿಗಳು ದೇಹಕ್ಕೆ ಸೇರುತ್ತವೆ.ಆಹಾರದಲ್ಲಿ ಈಗಾಗಲೇ ಅಡುಗೆ ಎಣ್ಣೆ ಮತ್ತು ತುಪ್ಪದ ಬಳಕೆ ಇರುತ್ತದೆ. ಹೀಗಾಗಿ ಅವುಗಳ ಜೊತೆಗೆ ಹೆಚ್ಚುವರಿಯಾಗಿ ಆಲಿವ್ ಎಣ್ಣೆ ಕುಡಿಯುವುದರಿಂದ ಕ್ಯಾಲೊರಿ ಪ್ರಮಾಣ ಹೆಚ್ಚಾಗಬಹುದು. ಆಲಿವ್ ಎಣ್ಣೆ ಬಳಸಬೇಕೆಂದಿದ್ದರೆ ಈಗ ಬಳಸುತ್ತಿರುವ ಎಣ್ಣೆ ಅಥವಾ ತುಪ್ಪದ ಬದಲಿಗೆ ಮಿತವಾಗಿ ಬಳಸುವುದು ಉತ್ತಮ.

ಶುಗರ್ ಸ್ಪೈಕ್ ನಿಯಂತ್ರಣಕ್ಕೆ ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು

ಆಲಿವ್ ಎಣ್ಣೆಯನ್ನು ನೇರವಾಗಿ ಕುಡಿಯುವ ಬದಲು ಸಲಾಡ್, ತರಕಾರಿ ಅಥವಾ ಇತರ ಆಹಾರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಜೊತೆಗೆ ಆಹಾರದಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಇರುವಂತೆ ನೋಡಿಕೊಳ್ಳಬೇಕು. ಸೌತೆಕಾಯಿ, ಟೊಮೆಟೊ, ಕ್ಯಾರೆಟ್, ಮೂಲಂಗಿ ಮತ್ತು ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಬೇಳೆ, ಕಡಲೆ, ಮೊಸರು, ಪನೀರ್ ಮತ್ತು ಮೊಟ್ಟೆಯಂತಹ ಪ್ರೋಟೀನ್ ಮೂಲಗಳನ್ನೂ ಸೇವಿಸಿ. ಊಟದ ನಂತರ ಸ್ವಲ್ಪ ಹೊತ್ತು ನಡೆಯುವುದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಒಟ್ಟಿನಲ್ಲಿ, ಆಲಿವ್ ಎಣ್ಣೆ ಸಮತೋಲಿತ ಆಹಾರದ ಭಾಗವಾಗಬಹುದು. ಆದರೆ ಅದನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಅಥವಾ ತೂಕ ಇಳಿಯುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಮಧುಮೇಹ ಇರುವವರು ವೈದ್ಯರು ಸೂಚಿಸಿದ ಔಷಧಿ ಅಥವಾ ಇನ್ಸುಲಿನ್ ನಿಲ್ಲಿಸಿ ಈ ವೈರಲ್ ಟ್ರೆಂಡ್ ಅನುಸರಿಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ