ಬೆಂಗಳೂರು ಅಭಿವೃದ್ಧಿಗೆ ಟೋಕಿಯೊ ಮಾದರಿ ಅನುಸರಿಸಿ; ನಗರಾಭಿವೃದ್ಧಿಗೆ 10 ಮಹತ್ವದ ಸಲಹೆ ನೀಡಿದ ಸಂಸದ ತೇಜಸ್ವಿ ಸೂರ್ಯ
ಜಪಾನ್‌ನ ಟೋಕಿಯೊ ನಗರವು ಬೆಂಗಳೂರು ನಗರಾಭಿವೃದ್ಧಿಗೆ ಅತ್ಯುತ್ತಮ ಮಾದರಿ. ಮುಖ್ಯಮಂತ್ರಿಯಷ್ಟೇ ಅಲ್ಲದೆ, ವೈಯಕ್ತಿಕವಾಗಿಯೂ ನಾನು ಟೋಕಿಯೊಗೆ ಭೇಟಿ ನೀಡಿದ್ದು, ಅಲ್ಲಿನ ಸಾರ್ವಜನಿಕ ಸಾರಿಗೆ ಮತ್ತು ಸಣ್ಣಪುಟ್ಟ ವ್ಯವಸ್ಥೆಗಳ ನಿರ್ವಹಣೆಯಿಂದ ಪ್ರಭಾವಿತನಾಗಿದ್ದೇನೆ. ಬೆಂಗಳೂರಿಗೆ ದೊಡ್ಡ ಯೋಜನೆಗಳಿಗಿಂತ ಮೂಲಭೂತ ಸೌಕರ್ಯಗಳ ಸುಧಾರಣೆಯೇ ಪ್ರಮುಖ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೆಂಗಳೂರು, ನವೆಂಬರ್ 28: ಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಜಪಾನ್ ಪ್ರವಾಸ ಕೈಗೊಂಡಿದ್ದರು. ಟೋಕಿಯೊದ ನಗರಾಭಿವೃದ್ಧಿ ಮಾದರಿ ಅಧ್ಯಯನ ಮಾಡಿದ್ದರು. ಆ ಮೂಲಕ ಜಪಾನ್ ಮಾದರಿಯಲ್ಲಿ ಕರ್ನಾಟಕದ ಅಭಿವೃದ್ಧಿಯ ಕನಸು ಬಿಚ್ಚಿಟ್ಟಿದ್ದಾರೆ. ಸಿಎಂ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಟೋಕಿಯೊಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನ ನಗರಾಭಿವೃದ್ಧಿಗೆ ಟೋಕಿಯೊ ನಗರದಿಂದ ಕಲಿಯಬಹುದಾದ 10 ಪಾಠವನ್ನ ಅವರು ಹಂಚಿಕೊಂಡಿದ್ದಾರೆ.
ನಗರಾಭಿವೃದ್ಧಿಗೆ ಟೋಕಿಯೊ ಅತ್ಯುತ್ತಮ ಉದಾಹರಣೆಯಾಗಿದೆ: ತೇಜಸ್ವಿ ಸೂರ್ಯ
ಈ ಕುರಿತಾಗಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ‘ಮುಖ್ಯಮಂತ್ರಿಗಳು ಜಪಾನ್‌ಗೆ ಕಲಿಯಲು ಹೋಗಿದ್ದರು. ನಾನೂ ಜಪಾನ್‌ಗೆ ಹೋಗಿದ್ದೆ. ಕಳೆದ ವರ್ಷ ನಗರ ಸಾರಿಗೆ ವ್ಯವಸ್ಥೆ ಅಧ್ಯಯನ ಮಾಡುವ ಕಾರ್ಯಕ್ರಮದ ಭಾಗವಾಗಿ ಟೋಕಿಯೊಗೆ ಭೇಟಿ ನೀಡಿದ್ದೆ. ಈ ವರ್ಷವೂ ಮತ್ತೆ ಟೋಕಿಯೊಗೆ ತೆರಳಿದ್ದೆ. ಸಾರ್ವಜನಿಕ ಸಾರಿಗೆ ಆಧಾರಿತ ನಗರಾಭಿವೃದ್ಧಿಗೆ ಟೋಕಿಯೊ ಅತ್ಯುತ್ತಮ ಉದಾಹರಣೆಯಾಗಿದೆ’ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಟ್ವೀಟ್
The CM went to Japan to learn. So did I.
Last year, I was in Tokyo on a programme to study urban transportation. This year, I went back. The city is a great example of public transport-led urban development.
What struck me wasn’t bullet trains. It was small things done right: walkable footpaths, spotless streets, one mobility card and transit-oriented development.
Bengaluru doesn’t need another big-ticket infrastructure contract right now. It needs to get the small things right first. Here are 10 such lessons. 👇
All anchored in one simple principle: Cities are built for people, not vehicles.
— Tejasvi Surya (@Tejasvi_Surya) November 28, 2026
‘ಟೋಕಿಯೊದಲ್ಲಿ ನನ್ನ ಗಮನ ಸೆಳೆದಿದ್ದು ಬುಲೆಟ್ ರೈಲುಗಳಲ್ಲ. ಬದಲಾಗಿ ಅಲ್ಲಿನ ಸಣ್ಣಪುಟ್ಟ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ರೀತಿ. ಪಾದಚಾರಿಗಳಿಗೆ ಅನುಕೂಲಕರವಾದ ಕಾಲುದಾರಿಗಳು, ಸ್ವಚ್ಛವಾದ ರಸ್ತೆಗಳು, ಒಂದೇ ಮೊಬಿಲಿಟಿ ಕಾರ್ಡ್ ಹಾಗೂ ಸಾರ್ವಜನಿಕ ಸಾರಿಗೆ ಕೇಂದ್ರಿತ ನಗರಾಭಿವೃದ್ಧಿ ವ್ಯವಸ್ಥೆಗಳು ಗಮನ ಸೆಳೆದವು’ ಎಂದಿದ್ದಾರೆ.
ಇದನ್ನೂ ಓದಿ: ಜಪಾನ್ ಮಾದರಿ ಕರ್ನಾಟಕದಲ್ಲಿ ಜಾರಿ: ಹಾರೋಹಳ್ಳಿಯಲ್ಲಿ 600 ಜನರಿಗೆ ಉದ್ಯೋಗ ಸೃಷ್ಟಿಗೆ ಒಪ್ಪಂದ
‘ಬೆಂಗಳೂರಿಗೆ ಸದ್ಯ ಮತ್ತೊಂದು ಬೃಹತ್ ಮೂಲಸೌಕರ್ಯ ಯೋಜನೆಯ ಅಗತ್ಯಕ್ಕಿಂತಲೂ, ಸಣ್ಣಪುಟ್ಟ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವ ಅಗತ್ಯ ಹೆಚ್ಚಿದೆ ಎಂದಿರುವ ತೇಜಸ್ವಿ ಸೂರ್ಯ, ನಗರಗಳು ವಾಹನಗಳಿಗಾಗಿ ಅಲ್ಲ, ಜನರಿಗಾಗಿ ನಿರ್ಮಾಣವಾಗಬೇಕು’ ಎಂದು ಹೇಳಿದ್ದಾರೆ.
ನಗರಾಭಿವೃದ್ಧಿಗೆ ತೇಜಸ್ವಿ ಸೂರ್ಯ 10 ಮಹತ್ವದ ಸಲಹೆಗಳು
- ಗುಂಡಿಗಳಿಲ್ಲದ ರಸ್ತೆಗಳು, ನಡೆದಾಡಲು ಅನುಕೂಲಕರ ಪಾದಚಾರಿ, ಸಮರ್ಪಕವಾಗಿ ಕಾರ್ಯನಿರ್ವಹಿಸುವ ಚರಂಡಿಗಳು ಹಾಗೂ ಸ್ಪಷ್ಟವಾದ ರಸ್ತೆ ಗುರುತುಗಳು ನಗರದ ಕನಿಷ್ಠ ಅಗತ್ಯಗಳಾಗಿವೆ. ಇವುಗಳನ್ನು ಒದಗಿಸುವುದು ನಗರಾಡಳಿತದ ಮೂಲ ಜವಾಬ್ದಾರಿಯೇ ಹೊರತು ಸಾಧನೆಯಲ್ಲ. ಸುರಂಗ ರಸ್ತೆಗಳಿಗೆ ಕೋಟ್ಯಂತರ ರೂ ಖರ್ಚು ಮಾಡುವ ಮೊದಲು ಈ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು.
- ಟೋಕಿಯೊದ ನಗರ ಕೇಂದ್ರ ಭಾಗದಲ್ಲಿ ನಡೆಯುವ ಒಟ್ಟು ಪ್ರಯಾಣಗಳಲ್ಲಿ ಅರ್ಧದಷ್ಟು ರೈಲು ಸಾರಿಗೆಯ ಮೂಲಕವೇ ನಡೆಯುತ್ತವೆ. ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆಗೆ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ಮೊದಲ ಆದ್ಯತೆ ಸಮೂಹ ಸಾರಿಗೆಗೆ ನೀಡಬೇಕು.
- ಪ್ರತಿಯೊಬ್ಬ ಪ್ರಯಾಣಿಕನೂ ತನ್ನ ಪ್ರಯಾಣವನ್ನು ಪಾದಚಾರಿಯಾಗಿ ಆರಂಭಿಸುತ್ತಾನೆ. ಹೀಗಾಗಿ ಮೆಟ್ರೋ ನಿಲ್ದಾಣಗಳ ಸುತ್ತಲೂ ಪಾದಚಾರಿ ಮಾರ್ಗಗಳು, ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ಹಾಗೂ ಸೈಕಲ್ ಪಥಗಳನ್ನು ನಿರ್ಮಿಸಬೇಕು. ಜನರಿಗಾಗಿ ನಿಯಮಿತವಾಗಿ ಓಪನ್ ಸ್ಟ್ರೀಟ್ಸ್ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು.
- ಟೋಕಿಯೊದಲ್ಲಿ 2007ರಿಂದಲೇ ವಿವಿಧ ಸಾರಿಗೆ ನಿರ್ವಾಹಕರ ಸೇವೆಗಳಿಗೂ ಒಂದೇ ಟ್ರಾನ್ಸಿಟ್ ಕಾರ್ಡ್ ಬಳಕೆಯಲ್ಲಿದೆ. ಬೆಂಗಳೂರಿನಲ್ಲೂ ಒಂದೇ ಮೊಬಿಲಿಟಿ ಕಾರ್ಡ್, ಸಮಗ್ರ ಟಿಕೆಟ್ ವ್ಯವಸ್ಥೆ ಹಾಗೂ ವಿವಿಧ ಸಾರಿಗೆ ಸೇವೆಗಳ ನಡುವೆ ಸಮನ್ವಯ ಸಾಧಿಸುವ ವೇಳಾಪಟ್ಟಿ ಜಾರಿಗೆ ಬರಬೇಕು.
- ಜಪಾನ್‌ನ ರೈಲ್ವೆ ಸಂಸ್ಥೆಗಳು ಟಿಕೆಟ್‌ಗಳಿಂದ ಬರುವ ಆದಾಯಕ್ಕಿಂತಲೂ ರಿಯಲ್ ಎಸ್ಟೇಟ್ ಮತ್ತು ಚಿಲ್ಲರೆ ವ್ಯಾಪಾರದಿಂದ ಹೆಚ್ಚಿನ ಆದಾಯ ಗಳಿಸುತ್ತವೆ. ನಮ್ಮ ಮೆಟ್ರೋ ನಿಲ್ದಾಣಗಳನ್ನೂ ಆದಾಯ ಗಳಿಸುವ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಆದರೆ ಇದರಿಂದ ಪ್ರಯಾಣಿಕರಿಗೆ ಟಿಕೆಟ್ ದರದ ಹೊರೆ ಹೆಚ್ಚಾಗಬಾರದು.
- ಟೋಕಿಯೊದಲ್ಲಿ ರೈಲು ಸಾರಿಗೆಯನ್ನೇ ಆಧಾರವಾಗಿಟ್ಟುಕೊಂಡು ನಗರವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಕೂಡಿರುವ ನಗರದೊಳಗೆ ರೈಲು ವ್ಯವಸ್ಥೆಯನ್ನು ಹೊಂದಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಮುಂದಿನ ನಗರಾಭಿವೃದ್ಧಿ ಯೋಜನೆಗಳು ರೈಲು ನಿಲ್ದಾಣಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಳ್ಳಬೇಕು.
- ಬೆಂಗಳೂರಿನಲ್ಲೂ ಸ್ವಚ್ಛತೆಯನ್ನು ಜನರ ದೈನಂದಿನ ಜೀವನದ ಭಾಗವಾಗಿಸಬೇಕು.
- ಬೆಂಗಳೂರು ನಗರದ ಯೋಜನೆಗಳನ್ನು ರೂಪಿಸುವಾಗ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು.
- ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರವನ್ನು ಬಲಪಡಿಸಿ, ಹೆಚ್ಚಿನ ಅಧಿಕಾರ ನೀಡಬೇಕು.
ಇದನ್ನೂ ಓದಿ: ಸಿಎಂ ಜಪಾನ್ ಪ್ರವಾಸ: ವಿದೇಶಾಂಗ ರಾಜ್ಯ ಸಚಿವರ ಜೊತೆ ಡಿಕೆ ಶಿವಕುಮಾರ್ ಮಹತ್ವದ ಮಾತುಕತೆ
‘ಟೋಕಿಯೊದ ಅಭಿವೃದ್ಧಿ ಕೇವಲ ಬೃಹತ್ ಯೋಜನೆಗಳ ಅನುಷ್ಠಾನಗೊಳಿಸುವುದರಲ್ಲಿ ಇಲ್ಲ. ಸಣ್ಣಪುಟ್ಟ ಕೆಲಸಗಳನ್ನೂ ಅತ್ಯುತ್ತಮವಾಗಿ ನಿರ್ವಹಿಸುವುದರಲ್ಲಿ ಅದರ ಶ್ರೇಷ್ಠತೆ ಅಡಗಿದೆ. ಬೆಂಗಳೂರಿನ ನಗರಾಭಿವೃದ್ಧಿಯಲ್ಲೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ನಗರಗಳು ವಾಹನಗಳಿಗಾಗಿ ಅಲ್ಲ, ಜನರಿಗಾಗಿ ನಿರ್ಮಾಣವಾಗಬೇಕು ಎಂಬ ತತ್ವವನ್ನು ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು’ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




