ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸ್ವಾಗತಿಸಿದ ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸ್ವಾಗತಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಡಿಲಿಮಿಟೇಶನ್ ಅಗತ್ಯವೆಂದು ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ, ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿರುವುದು ಪದ್ಧತಿಗಳನ್ನು ಎತ್ತಿಹಿಡಿದ ಉತ್ತಮ ನಿರ್ಧಾರ ಎಂದು ಪ್ರಶಂಸಿಸಿದ್ದಾರೆ. ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದಿವೆ.

ಕೋಲಾರ, ನ. 29: ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರು ಇಂದು (ನವೆಂಬರ್ 29) ನೀಡಿರುವ ಎರಡು ಮಹತ್ವದ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಅಚ್ಚರಿ ಮೂಡಿಸಿವೆ. ಒಂದೆಡೆ ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ (Delimitation) ತಿದ್ದುಪಡಿ ಮಸೂದೆಯನ್ನು ಸ್ವಾಗತಿಸಿರುವ ಅವರು, ಮತ್ತೊಂದೆಡೆ ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಿದ ಸುಪ್ರೀಂ ಕೋರ್ಟ್ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕೊತ್ತೂರು ಮಂಜುನಾಥ್ ಸ್ವಾಗತ:
ಒಬ್ಬ ಶಾಸಕರಿಗೆ ಸುಮಾರು 1 ಲಕ್ಷದಿಂದ 1.5 ಲಕ್ಷ ಮತದಾರರಿದ್ದರೆ ಕ್ಷೇತ್ರವನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಜನರ ಕಷ್ಟ ಸುಖ ಕೇಳಲು ಅನುಕೂಲವಾಗುತ್ತದೆ. ನಮ್ಮಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಅದಕ್ಕೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ಮಾಡಿಲ್ಲ; ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಿದರೆ ಒಳ್ಳೆಯದು. ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷಿಯಾ ಹಾಗೂ ಸಿಂಗಾಪುರ ಮುಂತಾದ ದೇಶಗಳಲ್ಲಿ ಸಂಸದರಿಗೆ ಗರಿಷ್ಠ ಸುಮಾರು 60,000 ಮತಗಳು ಹಾಗೂ ಪುರಸಭೆ ಸದಸ್ಯರಿಗೆ ಸುಮಾರು 7,000-8,000 ಮತಗಳ ವ್ಯವಸ್ಥೆ ಇರುತ್ತದೆ.
ಕ್ಷೇತ್ರ ಮರುವಿಂಗಡಣೆಗೆ ಕಾಂಗ್ರೆಸ್ ವಿರೋಧವಿದೆ ಎಂದು ಎಲ್ಲೂ ಹೇಳಿಲ್ಲ. ಡಿಲಿಮಿಟೇಶನ್‌ನಿಂದ ಬಿಜೆಪಿಗೆ ಹೆಚ್ಚು ಲಾಭವಾಗುವುದಿಲ್ಲ ಅಥವಾ ಯಾರಿಗೂ ವಿಶೇಷ ಲಾಭವಾಗುವುದಿಲ್ಲ. ಕ್ಷೇತ್ರ ವಿಂಗಡಣೆಯಿಂದ ಹೊಸ ಮತದಾರರನ್ನು ಸೇರಿಸುವುದೋ ಅಥವಾ ತಮಿಳುನಾಡಿನಂತಹ ಹೊರಗಿನ ಪ್ರದೇಶಗಳನ್ನು ಸೇರಿಸಿಕೊಳ್ಳುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆ ಒಳ್ಳೆಯದು ಎಂದರು.
ಇದನ್ನೂ ಓದಿ: ರಾಜಕೀಯ ಅಂಗಳದಲ್ಲಿ ಮೊಹಮ್ಮದ್ ಶಮಿ; ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಜೊತೆ ಮಾತುಕತೆ
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಿದ್ದನ್ನು ಒಳ್ಳೆಯದು ಎಂದ ಶಾಸಕ:
ತಮಿಳುನಾಡಿನ ಮದುರೈನ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶಾಸಕ ಕೊತ್ತೂರು ಮಂಜುನಾಥ್, ಸುಪ್ರೀಂ ಕೋರ್ಟ್ ಮಧ್ಯಪ್ರವೇಶವನ್ನು ಕೊಂಡಾಡಿದರು. “ಯಾವುದೇ ಸಮುದಾಯ, ಸಿದ್ಧಾಂತ ಮತ್ತು ಪದ್ಧತಿಯನ್ನು ಹಾಳು ಮಾಡದಿರಿ. ದೀಪ ಬೆಳಗಿಸಬಾರದು ಎಂದು ಯಾರ್ಯಾರೋ ಪ್ರಯತ್ನ ಮಾಡಿದ್ದರು; ಆದರೆ ಸುಪ್ರೀಂಕೋರ್ಟ್ ದೇಗುಲ ಸಮಿತಿಯನ್ನೇ ಅಮಾನತು ಮಾಡಿದೆ. ಒಂದು ಸಮುದಾಯದ ಸಿದ್ಧಾಂತ, ಪದ್ಧತಿ ಹಾಳು ಮಾಡಲು ಹೋದರೆ, ದೇವರ ರೂಪದಲ್ಲಿ ಸುಪ್ರೀಂಕೋರ್ಟ್ ಅದನ್ನು ತಡೆದಿದೆ” ಎಂದು ಹೇಳಿದರು.
“ದೀಪ ಬೆಳಗಿಸಲು ಸಿಆರ್‌ಪಿಎಫ್ (CRPF) ಪಡೆ ಆಗಮಿಸುವಾಗ ಜನರು ವಿವಿಧ ಬಣ್ಣದ ಹೂವುಗಳಿಂದ ಹೂಮಳೆ ಸುರಿಸಿ ಭವ್ಯ ಸ್ವಾಗತ ನೀಡಿದ್ದಾರೆ. ಕಾರ್ತಿಕ ದೀಪ ಬೆಳಗಿಸಿದ ಸಂತಸಕ್ಕೆ ಭಕ್ತರು ಭಾವುಕರಾಗಿದ್ದರು. ಕಳೆದ 80 ವರ್ಷಗಳಿಂದ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಿಸಿರಲಿಲ್ಲ; ಇದೀಗ ದೀಪ ಬೆಳಗಿಸಿರುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ” ಎಂದು ಕೊತ್ತೂರು ಮಂಜುನಾಥ್ ಅಭಿಪ್ರಾಯಪಟ್ಟರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




