ತರಕಾರಿಗಳನ್ನು ತೊಳೆಯುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಪ್ರತಿಯೊಬ್ಬರೂ ಅಡುಗೆ ಮಾಡುವ ಮುನ್ನ ತರಕಾರಿಗಳನ್ನು ತಮ್ಮದೇ ಆದ ವಿಧಾನದಲ್ಲಿ ಸ್ವಚ್ಛಗೊಳಿಸುತ್ತಾರೆ. ಕೆಲವರು ತರಕಾರಿಗಳನ್ನು ಕಟ್ ಮಾಡಿ ನಂತರ ಅವುಗಳನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿದರೆ, ಇನ್ನೂ ಕೆಲವರು ತರಕಾರಿಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಕತ್ತರಿಸುತ್ತಾರೆ. ಇವೆರಡರಲ್ಲಿ ತರಕಾರಿ ತೊಳೆಯುವ ಯಾವುದು ಸರಿಯಾದ ವಿಧಾನ ಯಾವುದು, ತರಕಾರಿ ಸ್ವಚ್ಛಗೊಳಿಸುವಾಗ ನೆನಪಿನಲ್ಲಿಡಬೇಕಾದ ವಿಷಯಗಳೇನು ಎಂಬುದನ್ನು ತಿಳಿದುಕೊಳ್ಳಿ.

ಹಣ್ಣು, ತರಕಾರಿಗಳನ್ನು (vegetables) ಸೇವನೆ ಮಾಡುವ ಮುನ್ನ ಚೆನ್ನಾಗಿ ತೊಳೆಯುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳು, ರಾಸಾಯನಿಕಗಳು ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಅಡುಗೆ ಮಾಡುವ ಮುನ್ನ ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯುತ್ತಾರೆ. ಇದರಲ್ಲಿ ಕೆಲವರು ಕತ್ತರಿಸುವ ಮುನ್ನ ತರಕಾರಿಗಳನ್ನು ಕ್ಲೀನ್ ಮಾಡಿದರೆ, ಇನ್ನೂ ಕೆಲವರು ತರಕಾರಿಗಳ ಸಿಪ್ಪೆ ತೆಗೆದು, ಅವುಗಳನ್ನು ಚೆನ್ನಾಗಿ ಕತ್ತರಿಸಿದ ಬಳಿಕವೇ ನೀರಿನಲ್ಲಿ ಸ್ವಚ್ಛಗೊಳಿಸುತ್ತಾರೆ. ಇವೆರಡಲ್ಲಿ ಯಾವುದು ಸರಿ, ತರಕಾರಿ ಸ್ವಚ್ಛಗೊಳಿಸುವ ಸರಿಯಾದ ವಿಧಾನ ಯಾವುದು ಎಂಬುದರ ಪೂರ್ಣ ವಿವರವನ್ನು ತಿಳಿದುಕೊಳ್ಳಿ.
ತರಕಾರಿಗಳನ್ನು ಕತ್ತರಿಸಿ ನಂತರ ತೊಳೆಯಬೇಕೇ ಅಥವಾ ತೊಳೆದ ನಂತರ ಕತ್ತರಿಸಬೇಕೇ?
ತರಕಾರಿಗಳನ್ನು ಕತ್ತರಿಸುವ ಅಥವಾ ಸಿಪ್ಪೆ ತೆಗೆಯುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯಬೇಕು. ಹಾಗೆ ಮಾಡುವುದರಿಂದ ಕೊಳಕು ಮತ್ತು ಇತರೆ ಸೂಕ್ಷ್ಮಾಣು ಜೀವಿಗಳನ್ನು ತೆಗೆದುಹಾಕಲು ಸಹಾಯವಾಗುತ್ತದೆ. ಅದೇ ಕತ್ತರಿಸಿದ ಬಳಿಕ ತರಕಾರಿಗಳನ್ನು ನೀರಿನಿಂದ ತೊಳೆಯುವುದರಿಂದ ಕೆಲವು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಕಡಿಮೆಯಾಗಬಹುದು. ಹಾಗಾಗಿ ತರಕಾರಿಗಳನ್ನು ಕತ್ತರಿಸುವ ಅಥವಾ ಸಿಪ್ಪೆ ತೆಗೆಯುವ ಮೊದಲು ಅವುಗಳನ್ನು ತೊಳೆಯುವುದು ಯಾವಾಗಲೂ ಉತ್ತಮ. ತರಕಾರಿಗಳನ್ನು ಮೊದಲು ತೊಳೆಯದೆ ಕತ್ತರಿಸುವುದರಿಂದ ಕೊಳಕು, ಧೂಳು, ಇತರೆ ಮಾಲಿನ್ಯಕಾರಕ ಹಾಗೂ ಬ್ಯಾಕ್ಟೀರಿಯಾಗಳು ಚಾಕುವಿನ ಜೊತೆಗೆ ತರಕಾರಿಯ ಒಳಭಾಗಕ್ಕೆ ವರ್ಗಾಯಿಸಲ್ಪಡುತ್ತದೆ. ಆದ್ದರಿಂದ, ಸಿಪ್ಪೆ ತೆಗೆಯುವ ಆಲೂಗಡ್ಡೆ, ಕ್ಯಾರೆಟ್, ಸೌತೆಕಾಯಿ ಮತ್ತು ಇತರ ಎಲ್ಲಾ ತರಕಾರಿಗಳನ್ನು ಮೊದಲು ನೀರಿನಿಂದ ತೊಳೆಯಬೇಕು. ನಂತರವೇ ಅವುಗಳನ್ನು ಕಟ್ ಮಾಡಬೇಕು. ತರಕಾರಿಗಳನ್ನು ನೀರಿನಿಂದ ತೊಳೆಯುವುದರಿಂದ ಎಲ್ಲಾ ಕೊಳಕು ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ.
ತರಕಾರಿಗಳನ್ನು ಕತ್ತರಿಸಿದ ನಂತರ ತೊಳೆಯುವುದರಿಂದ ಏನಾಗುತ್ತದೆ?
ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ ನಂತರ ನೀರಿನಿಂದ ತೊಳೆಯುವುದು ಒಳ್ಳೆಯ ಅಭ್ಯಾಸವಲ್ಲ. ಏಕೆಂದರೆ ತರಕಾರಿಗಳ ಕೆಲವು ಜೀವಸತ್ವಗಳು ಮತ್ತು ಖನಿಜಗಳು ನೀರಿನಲ್ಲಿ ಕರಗುತ್ತವೆ. ಇದಲ್ಲದೆ ಚಾಕುವಿನ ಮೂಲಕ ಬ್ಯಾಕ್ಟೀರಿಯಾಗಳು, ಕೊಳಕುಗಳು ತರಕಾರಿಯಲ್ಲಿ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕತ್ತರಿಸುವ ಮುನ್ನವೇ ಎಲ್ಲಾ ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು.
ಇದನ್ನೂ ಓದಿ: ಅಡುಗೆಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಲು ಹೋಗ್ಬೇಡಿ
ತರಕಾರಿಗಳನ್ನು ತೊಳೆಯಲು ಉತ್ತಮ ಮಾರ್ಗ ಯಾವುದು?
- ತರಕಾರಿಗಳನ್ನು ಸ್ವಚ್ಛಗೊಳಿಸಲು ಸರಳ ಹರಿಯುವ ನೀರನ್ನು ಬಳಸುವುದು ಉತ್ತಮ. ಹರಿಯುವ ನೀರಿನ (ಟ್ಯಾಪ್ ನೀರು) ಅಡಿಯಲ್ಲಿ ಅವುಗಳನ್ನು ಹಿಡಿದು ನಿಮ್ಮ ಕೈಗಳಿಂದ ನಿಧಾನವಾಗಿ ಉಜ್ಜಿ, ಕೊಳಕು ಮತ್ತು ಕೊಳೆಯನ್ನು ತೆಗೆದುಹಾಕಿ.
- ತರಕಾರಿಗಳನ್ನು ತೊಳೆಯಲು ಸೋಪ್, ಡಿಟರ್ಜೆಂಟ್ ಅಥವಾ ಯಾವುದೇ ಇತರ ವಿಶೇಷ ಕ್ಲೀನರ್‌ಗಳನ್ನು ಎಂದಿಗೂ ಬಳಸಬೇಡಿ. ಅವುಗಳನ್ನು ಸ್ವಚ್ಛಗೊಳಿಸಲು ಶುದ್ಧ, ಹರಿಯುವ ನೀರನ್ನು ಮಾತ್ರ ಬಳಸಿ.
- ತೊಳೆದ ನಂತರ, ತರಕಾರಿಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ, ಒಣಗಿಸಿ. ಇದು ಯಾವುದೇ ಹೆಚ್ಚುವರಿ ನೀರಿನ ಅಂಶವನ್ನು ತೆಗೆದುಹಾಕುತ್ತದೆ.
- ಎಲೆಕೋಸು ಮತ್ತು ಹೂಕೋಸುಗಳ ಹೊರ ಎಲೆಗಳ ಮೇಲೆ ಕೊಳಕು ಅಥವಾ ಕೊಳೆ ಇರಬಹುದು. ಆದ್ದರಿಂದ ಈ ಎಲೆಗಳನ್ನು ತೆಗೆದು ಉಳಿದ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಪಾಲಕ್, ಮೆಂತ್ಯ ಮತ್ತು ಇತರ ಎಲೆಗಳ ತರಕಾರಿಗಳನ್ನು ತೊಳೆಯುವಾಗ, ಎಲೆಗಳನ್ನು ಸ್ವಚ್ಛಗೊಳಿಸುವ ಮೊದಲು ಅವುಗಳನ್ನು ಬೇರ್ಪಡಿಸುವುದು ಉತ್ತಮ. ಇದು ಎಲೆಗಳ ನಡುವೆ ಸಿಲುಕಿರುವ ಕೊಳೆ ಮತ್ತು ಕೊಳೆಯನ್ನು ತೆಗೆದುಹಾಕಲು ಸುಲಭವಾಗುತ್ತದೆ.
- ತರಕಾರಿಗಳನ್ನು ತೊಳೆದ ನಂತರ, ಹೆಚ್ಚುವರಿ ನೀರನ್ನು ಬಸಿದು ಅಗತ್ಯವಿರುವಂತೆ ಕತ್ತರಿಸಿಕೊಳ್ಳಿ. ಕತ್ತರಿಸಿದ ನಂತರ ಹೆಚ್ಚು ಹೊತ್ತು ತೆರೆದಿಡಬೇಡಿ. ಕತ್ತರಿಸಿದ ತರಕಾರಿಗಳನ್ನು ಸಾಧ್ಯವಾದಷ್ಟು ಬೇಗ ಸೇವಿಸಬೇಕು ಅಥವಾ ಪದಾರ್ಥ ಮಾಡಬೇಕು ಏಕೆಂದರೆ ದೀರ್ಘಕಾಲ ಸಂಗ್ರಹಿಸುವುದರಿಂದ ಅವುಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ತಾಜಾತನ ಕಡಿಮೆಯಾಗುತ್ತದೆ.
- ತರಕಾರಿಗಳನ್ನು ಕತ್ತರಿಸುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಅಲ್ಲದೆ ಚಾಕುಗಳು ಮತ್ತು ಚಾಪಿಂಗ್ ಬೋರ್ಡ್‌ಗಳು ಸ್ವಚ್ಛವಾಗಿರಬೇಕು. ಮಾಂಸ ಕಟ್ ಮಾಡಲು ಬಳಸುವ ಚಾಕು ಮತ್ತು ಚಾಪಿಂಗ್ ಬೋರ್ಡ್ ಅನ್ನು ತರಕಾರಿ ಕಟ್ ಮಾಡಲು ಬಳಸಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




