ಈ ಮನೆಮದ್ದುಗಳ ಸಹಾಯದಿಂದ ಚಳಿಗಾಲದಲ್ಲಿ ಕಾಡುವ ಒಣ ಚರ್ಮದ ಸಮಸ್ಯೆಗೆ ಮುಕ್ತಿ ಪಡೆಯಬಹುದು
ಚಳಿಗಾಲದಲ್ಲಿ ಚರ್ಮ ಒಣಗುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ಮುಕ್ತಿ ಪಡೆಯಲು ದುಬಾರಿ ಮಾಯಿಶ್ಚರೈಸರ್, ಬಾಡಿ ಲೋಷನ್‌ಗಳನ್ನು ಬಳಸುತ್ತಾರೆ. ಎಷ್ಟೇ ಮಾಯಿಶ್ಚರೈಸರ್ ಹಚ್ಚಿದರೂ, ಸ್ವಲ್ಪ ಸಮಯದ ನಂತರ ಚರ್ಮವು ಮತ್ತೆ ಒಣಗಿದಂತಾಗುತ್ತದೆ. ಹೀಗಿರುವಾಗ ದುಬಾರಿ ಕ್ರೀಮ್‌ಗಳನ್ನು ಬಳಸುವ ಬದಲು ಕೆಲವೊಂದು ಮನೆಮದ್ದುಗಳ ಸಹಾಯದಿಂದ ಒಣ ತ್ವಚೆ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು.

ಚಳಿಗಾಲ (winter) ಆರಂಭವಾದ ತಕ್ಷಣ ಒಣ ಚರ್ಮ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಚಳಿಗಾಲದ ಶೀತ ಗಾಳಿಯು ಚರ್ಮವನ್ನು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ. ವಿಶೇಷವಾಗಿ ಕೈ-ಕಾಲುಗಳ ಚರ್ಮವು ಒಣಗಿ ಹಾವಿನ ಪೊರೆಯಂತಾಗುತ್ತದೆ. ಇದರಿಂದ ಕೈಕಾಲು ಅಹಸ್ಯವಾಗಿ ಕಾಣಿಸುತ್ತದೆ. ಈ ಒಂದು ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಲು ಹೆಚ್ಚಿನವರು ಮಾಯಿಶ್ಚರೈಸರ್, ಬಾಡಿ ಲೋಷನ್‌ಗಳನ್ನು ಬಳಸುತ್ತಾರೆ. ಕೆಲವೊಮ್ಮೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಕ್ರೀಮ್‌ಗಳು ಮತ್ತು ಲೋಷನ್‌ಗಳು ಸಹ ಕೈಕಾಲುಗಳ ತೇವಾಂಶವನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲು ವಿಫಲವಾಗುತ್ತವೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಒಣಚರ್ಮದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.
ಒಣ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದುಗಳು ಸಹಕಾರಿ:
ಒಣ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಜೇನುತುಪ್ಪ ಸಹಕಾರಿ:
ಜೇನುತುಪ್ಪವನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೇನುತುಪ್ಪವು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಇದು ಒಣ ಚರ್ಮದ ಸಮಸ್ಯೆಗೆ ಮುಕ್ತಿಯನ್ನು ನೀಡುತ್ತದೆ. ಇದಕ್ಕಾಗಿ ಕೆಲವು ಹನಿ ಜೇನುತುಪ್ಪವನ್ನು ತೆಗೆದುಕೊಂಡು ಕೈ ಕಾಲುಗಳಿಗೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ, ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕೈಯನ್ನು ಶುದ್ಧ ನೀರಿನಿಂದ ತೊಳೆಯಿರಿ. ದಿನಕ್ಕೆ ಎರಡು ಬಾರಿ ಜೇನುತುಪ್ಪವನ್ನು ಹಚ್ಚುವುದರಿಂದ ಕೈಕಾಲುಗಳ ಶುಷ್ಕತೆ ನಿವಾರಣೆಯಾಗುತ್ತದೆ.
ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಲು ಓಟ್ಸ್ ಸ್ಕ್ರಬ್ ಸಹಕಾರಿ:
ಓಟ್ಸ್ ಕೈ ಕಾಲುಗಳ ಶುಷ್ಕತೆಯನ್ನು ನಿವಾರಿಸಲು ಕೂಡ ಸಹಕಾರಿ. ಒಂದು ಚಮಚ ಓಟ್ಸ್ ಅನ್ನು ಅರ್ಧ ಚಮಚ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪ್ಯಾಕ್ ಅನ್ನು ನಿಮ್ಮ ಕೈ ಹಾಗೂ ಕಾಲುಗಳಿಗೆ ಹಚ್ಚಿ, ಮಸಾಜ್ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಟ್ಟ ನಂತರ, ನೀರಿನಿಂದ ಚೆನ್ನಾಗಿ ತೊಳೆಯಿರಿ. ವಾರಕ್ಕೊಮ್ಮೆಯಾದರೂ ಈ ಪ್ಯಾಕ್ ಹಚ್ಚುವುದರಿಂದ ಶುಷ್ಕತೆ ನಿವಾರಣೆಯಾಗಿ ಕೈ ಕಾಲುಗಳು ಮೃದುವಾಗುತ್ತದೆ.
ತೆಂಗಿನ ಎಣ್ಣೆ ಶುಷ್ಕ ತ್ವಚೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ:
ಚಳಿಗಾಲದಲ್ಲಿ ಕೈ ಕಾಲುಗಳು ಒಣಗಿ ಹಾವಿನ ಪೊರೆಯಂತಾದರೆ ನೀವು ತೆಂಗಿನ ಎಣ್ಣೆಯನ್ನು ಹಚ್ಚಬಹುದು. ಈ ಎಣ್ಣೆಯಲ್ಲಿರುವ ಲಾರಿಕ್ ಆಮ್ಲದಂತಹ ಕೊಬ್ಬಿನಾಮ್ಲಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಚರ್ಮದ ಶುಷ್ಕತೆಯನ್ನು ನಿವಾರಿಸಿ, ಮೃದುವಾಗಿಸುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಪ್ರತಿದಿನ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯುವುದು ಒಳ್ಳೆಯದೇ?
ಆಲೋವೇರಾ ಜೆಲ್ ತ್ವಚೆಯ ಶುಷ್ಕತೆ ನಿವಾರಿಸಲು ಸಹಕಾರಿ:
ನಿಮ್ಮ ಮನೆಯಲ್ಲಿ ಅಲೋವೆರಾ ಗಿಡವಿದ್ದರೆ, ಅದರಿಂದ ತಾಜಾ ಅಲೋವೆರಾ ಜೆಲ್ ಅನ್ನು ಹೊರತೆಗೆದು ಪ್ರತಿದಿನ ನಿಮ್ಮ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಅದನ್ನು 15–20 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ತೊಳೆಯಿರಿ. ಅಲೋವೇರಾ ಜೆಲ್ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಕಾರಿ.
ಹಾಲು ಮತ್ತು ಕೇಸರಿ ತ್ವಚೆಯ ಶುಷ್ಕತೆ ನಿವಾರಿಸಲು ಸಹಕಾರಿ:
ನಿಮ್ಮ ಚರ್ಮವನ್ನು ತೇವಗೊಳಿಸಲು ನೀವು ಹಾಲು ಮತ್ತು ಕೇಸರಿಯನ್ನು ಸಹ ಹಚ್ಚಬಹುದು. ಇದು ಶುಷ್ಕತೆಯನ್ನು ಕಡಿಮೆ ಮಾಡುವುದಲ್ಲದೆ ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಕೆಲವು ಕೇಸರಿ ದಳವನ್ನು ಹಾಲಿನೊಂದಿಗೆ ಬೆರೆಸಿ ನಿಮ್ಮ ಪಾದ, ಕೈಗಳಿಗೆ ಹಚ್ಚಿ, ಅರ್ಧ ಗಂಟೆ ಹಾಗೆಯೇ ಬಿಡಿ, ನಂತರ ತೊಳೆಯಿರಿ. ವಾರಕ್ಕೆ ಎರಡು ಬಾರಿಯಾದರೂ ಈ ಮನೆಮದ್ದನ್ನು ಪ್ರಯತ್ನಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




