ಬಾಗಲಕೋಟೆ: ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ, ನಿರ್ಲಕ್ಷ್ಯದ ಆರೋಪ
ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಮಾತ್ರೆ, ಸಿರಪ್, ಸಲೈನ್ ಸೇರಿದಂತೆ 48 ಔಷಧಿಗಳು ಪತ್ತೆಯಾಗಿವೆ. ರೋಗಿಗಳು ಔಷಧಿಯ ಕೊರತೆಯಿಂದ ಬಳಲುತ್ತಿರುವಾಗ, ಗುಣಮಟ್ಟವಿಲ್ಲದ ಹಾಗೂ ಅವಧಿ ಮೀರಿದ ಔಷಧಿಗಳು ಸಂಗ್ರಹಗೊಂಡಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ.
ಬಾಗಲಕೋಟೆ, ನವೆಂಬರ್ 28: ಬಾಗಲಕೋಟೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಔಷಧಿಗಳ ಕೊರತೆ ಎದುರಿಸುತ್ತಿರುವ ರೋಗಿಗಳಿಗೆ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ. ಜಿಲ್ಲಾ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಹಾಗೂ ಗುಣಮಟ್ಟವಿಲ್ಲದ ಔಷಧಿಗಳು ಪತ್ತೆಯಾಗಿವೆ. ಮಾತ್ರೆಗಳು, ಸಿರಪ್‌ಗಳು ಮತ್ತು ಸಲೈನ್ ಸೇರಿದಂತೆ ಒಟ್ಟು 48 ವಿವಿಧ ಔಷಧಿಗಳು ಅವಧಿ ಮೀರಿವೆ ಎಂದು ಗುರುತಿಸಲಾಗಿದೆ.
ಈ ಔಷಧಿ ಉಗ್ರಾಣದಲ್ಲಿ ಕೆಲವೊಂದು ಔಷಧಗಳನ್ನು ಸಂಗ್ರಹಿಸಲು ಸೂಕ್ತ ಫ್ರಿಡ್ಜ್‌ಗಳ ವ್ಯವಸ್ಥೆ ಇಲ್ಲದಿರುವುದು ಅವಾಂತರಕ್ಕೆ ಕಾರಣವಾಗಿದೆ. ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ ಈ ಉಗ್ರಾಣದಲ್ಲಿ ಅವಧಿ ಮೀರಿದ ಔಷಧಿಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳು ಈ ರೀತಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಸುವರ್ಣಾ ಕುಲಕರ್ಣಿ ಅವರು ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ 206 ಔಷಧಿಗಳ ಲಭ್ಯತೆಯಿದ್ದು, ಅದರಲ್ಲಿ 25 ಕ್ವಾರಂಟೈನ್ ಅವಧಿಯಲ್ಲಿವೆ. ಅವಧಿ ಮೀರಿದ ಹಾಗೂ ಗುಣಮಟ್ಟವಿಲ್ಲದ 48 ಔಷಧಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲು ರಾಜ್ಯ ಕೆಎಸ್‌ಎಂಎಸ್‌ಸಿಎಲ್‌ಗೆ ಪತ್ರ ಬರೆಯಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ. ಈ ಘಟನೆ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

