ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ನಿಮ್ಮ ಮನೆಯ ಮೀಟರ್ ರೀಡಿಂಗ್ ನೀವೇ ಪರಿಶೀಲಿಸಿ; ಇಲ್ಲಿದೆ ಮಾಹಿತಿ
ತಿಂಗಳ ವಿದ್ಯುತ್ ಬಿಲ್ ಹೆಚ್ಚಾದಾಗ ಆತಂಕಪಡುವ ಬದಲು, ನಿಮ್ಮ ವಿದ್ಯುತ್ ಮೀಟರ್ ರೀಡಿಂಗ್ ಮತ್ತು ಸೀರಿಯಲ್ ನಂಬರ್ ಅರ್ಥಮಾಡಿಕೊಳ್ಳುವುದು ಒಳ್ಳೆಯದು. ಆ ಮೂಲಕ ಹಣ ಉಳಿತಾಯ ಮಾಡಬಹುದು. ಹಾಗಾದರೆ ವಿದ್ಯುತ್ ಮೀಟರ್ ಲೆಕ್ಕಾಚಾರ, ಎಷ್ಟು ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ಪರಿಶೀಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ನವೆಂಬರ್ 29: ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ದಿಢೀರ್ ಹೆಚ್ಚಿಗೆ ಬಂದರೆ ಸಹಜವಾಗಿಯೇ ಆತಂಕ ಉಂಟಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಹೆಚ್ಚಿನ ವಿದ್ಯುತ್ ಉಪಕರಣಗಳನ್ನು ಬಳಸದೇ ಇದ್ದರೂ ನಿರೀಕ್ಷೆಗಿಂತ ಹೆಚ್ಚು ಬಿಲ್ ಬರುತ್ತದೆ. ಹಾಗಾದರೆ ಈ ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ, ಮೀಟರ್‌ನಲ್ಲಿ ಎಷ್ಟು ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಹಾಗಾಗಿ ವಿದ್ಯುತ್ ಮೀಟರ್‌ನ ರೀಡಿಂಗ್ ಅರ್ಥಮಾಡಿಕೊಳ್ಳಲು ಕೆಲವು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯ.
ವಿದ್ಯುತ್ ಮೀಟರ್‌ನಲ್ಲಿರುವ ಈ ಮೂರು ಅಂಶಗಳನ್ನು ತಿಳಿಯಿರಿ
- ಮೀಟರ್‌ನ ಸೀರಿಯಲ್ ನಂಬರ್: ಪ್ರತಿಯೊಂದು ವಿದ್ಯುತ್ ಮೀಟರ್‌ಗೂ ಪ್ರತ್ಯೇಕ ಸೀರಿಯಲ್ ನಂಬರ್ ಇರುತ್ತದೆ. ಮೀಟರ್ ತಯಾರಿಕಾ ಕಂಪನಿಯೂ ಈ ಸಂಖ್ಯೆಯನ್ನು ನೀಡುತ್ತದೆ. ಇದರಿಂದ ನಿರ್ದಿಷ್ಟ ವಿದ್ಯುತ್ ಮೀಟರ್ ಅನ್ನು ಗುರುತಿಸಬಹುದು. ವಿದ್ಯುತ್ ಬಿಲ್‌ನಲ್ಲಿರುವ ಮೀಟರ್ ಸಂಖ್ಯೆ ಮತ್ತು ಮನೆಯಲ್ಲಿರುವ ಮೀಟರ್ ಸಂಖ್ಯೆಯನ್ನು ಹೋಲಿಕೆ ಮಾಡಿಕೊಳ್ಳಲು ಕೂಡ ಸಹಾಯವಾಗುತ್ತದೆ.
- ಎನರ್ಜಿ ರೀಡಿಂಗ್ (kWh/kVAh): ಮೀಟರ್‌ನಲ್ಲಿರುವ ಎನರ್ಜಿ ರೀಡಿಂಗ್ ಮೂಲಕ ನಿರ್ದಿಷ್ಟ ಅವಧಿಯಲ್ಲಿ ಮನೆಯಲ್ಲಿ ಎಷ್ಟು ವಿದ್ಯುತ್ ಬಳಕೆಯಾಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಸಾಮಾನ್ಯವಾಗಿ ವಿದ್ಯುತ್ ಬಳಕೆಯನ್ನು ಯೂನಿಟ್‌ಗಳಲ್ಲಿ ಲೆಕ್ಕ ಹಾಕಲಾಗುತ್ತದೆ. kWh ಮತ್ತು kVAh ವಿದ್ಯುತ್ ಬಳಕೆಯ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
- ತ್ರಿಫೇಸ್ ಮೀಟರ್: ಸಾಮಾನ್ಯವಾಗಿ 5 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ವಿದ್ಯುತ್ ಸಂಪರ್ಕಗಳಿಗೆ ತ್ರಿಫೇಸ್ ಮೀಟರ್ ಬಳಸಲಾಗುತ್ತದೆ. ಹೆಚ್ಚಿನ ವಿದ್ಯುತ್ ಬಳಕೆಯ ಅಗತ್ಯವಿರುವ ಸಂಪರ್ಕಗಳಲ್ಲಿ ಈ ಮಾದರಿಯ ಮೀಟರ್ ಅಳವಡಿಸಲಾಗುತ್ತದೆ.
ವಿದ್ಯುತ್ ಮೀಟರ್ ರೀಡಿಂಗ್ ಪರಿಶೀಲಿಸುವುದು ಹೇಗೆ?
ಪ್ರಸ್ತುತ ಬಹುತೇಕ ಡಿಜಿಟಲ್ ವಿದ್ಯುತ್ ಮೀಟರ್‌ಗಳಲ್ಲಿ ಪುಶ್ ಬಟನ್ ವ್ಯವಸ್ಥೆ ಇರುತ್ತದೆ. ಈ ಬಟನ್ ಅನ್ನು ಪದೇಪದೇ ಒತ್ತುವ ಮೂಲಕ ಮೀಟರ್‌ನ ಡಿಸ್‌ಪ್ಲೇಯಲ್ಲಿ ವಿವಿಧ ಮಾಹಿತಿಯನ್ನ ಕಾಣಬಹುದಾಗಿದೆ.
- ಪ್ರಸ್ತುತ ಸಮಯ
- ದಿನಾಂಕ
- ಮೀಟರ್‌ನ ಸೀರಿಯಲ್ ನಂಬರ್
- ಒಟ್ಟು ವಿದ್ಯುತ್ ಬಳಕೆಯ ಪ್ರಮಾಣ
- ಪ್ರಸಕ್ತ ತಿಂಗಳ ಗರಿಷ್ಠ ವಿದ್ಯುತ್ ಬೇಡಿಕೆ
- ಹಿಂದಿನ ತಿಂಗಳ ಗರಿಷ್ಠ ವಿದ್ಯುತ್ ಬೇಡಿಕೆ
- ಒಟ್ಟು ವಿದ್ಯುತ್ ಬೇಡಿಕೆ
- ವಿದ್ಯುತ್ ವೋಲ್ಟೇಜ್ ಪ್ರಮಾಣ
- ವಿದ್ಯುತ್ ಕರೆಂಟ್ ಪ್ರಮಾಣ. ಈ ಮಾಹಿತಿಗಳನ್ನು ಪರಿಶೀಲಿಸುವ ಮೂಲಕ ಮನೆಯ ವಿದ್ಯುತ್ ಬಳಕೆಯ ಕುರಿತು ಸ್ಪಷ್ಟ ಮಾಹಿತಿ ಪಡೆಯಬಹುದು.
ವಿದ್ಯುತ್ ಬಿಲ್ ಜಾಸ್ತಿ ಬಂದರೆ ಏನು ಮಾಡಬೇಕು?
ವಿದ್ಯುತ್ ಬಿಲ್ ನಿರೀಕ್ಷೆಗಿಂತ ಹೆಚ್ಚಾಗಿ ಬಂದಾಗ ಆತಂಕಪಡುವ ಬದಲು ಕೆಲವು ಅಂಶಗಳನ್ನು ಪರಿಶೀಲಿಸಬೇಕು. ಮೀಟರ್‌ನ ಪ್ರಸ್ತುತ ರೀಡಿಂಗ್ ಮತ್ತು ಹಿಂದಿನ ತಿಂಗಳ ವಿದ್ಯುತ್ ಬಿಲ್‌ನಲ್ಲಿರುವ ರೀಡಿಂಗ್ ಅನ್ನು ಹೋಲಿಕೆ ಮಾಡಬೇಕು. ಬಿಲ್‌ನಲ್ಲಿ ನಮೂದಿಸಿರುವ ಒಟ್ಟು ಯೂನಿಟ್ ಬಳಕೆಯ ಲೆಕ್ಕಾಚಾರ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಮನೆಯ ವಿದ್ಯುತ್ ಮೀಟರ್‌ನ ಸೀರಿಯಲ್ ನಂಬರ್ ಮತ್ತು ಬಿಲ್‌ನಲ್ಲಿರುವ ಮೀಟರ್ ನಂಬರ್ ಒಂದೇ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಬಿಲ್ ಪಾವತಿಯ ಕೊನೆಯ ದಿನಾಂಕ ಹಾಗೂ ವಿಧಿಸಿರುವ ಹೆಚ್ಚುವರಿ ಶುಲ್ಕಗಳ ಬಗ್ಗೆ ಪರಿಶೀಲಿಸಬೇಕು. ಯಾವುದೇ ವ್ಯತ್ಯಾಸ ಅಥವಾ ಲೋಪ ಕಂಡುಬಂದರೆ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ಸಲ್ಲಿಸಬೇಕು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




