ಬೆಸ್ಕಾಂ ಗ್ರಾಹಕರಿಗೆ ಗುಡ್‌ನ್ಯೂಸ್! 2027ರ ಏಪ್ರಿಲ್‌ನಿಂದ ಪ್ರತಿ ಯೂನಿಟ್‌ಗೆ 35 ಪೈಸೆ ಮರುಪಾವತಿ
ಬೆಸ್ಕಾಂ ಗ್ರಾಹಕರಿಗೆ 2027ರ ಏಪ್ರಿಲ್‌ನಿಂದ ವಿದ್ಯುತ್ ಬಿಲ್‌ನಲ್ಲಿ ರಿಲೀಫ್ ಸಿಗುವ ಸಾಧ್ಯತೆಯಿದೆ. ಪ್ರತಿ ಯೂನಿಟ್‌ಗೆ 35 ಪೈಸೆ ಮರುಪಾವತಿ ನೀಡುವ ಪ್ರಸ್ತಾವನೆಯನ್ನು ಬೆಸ್ಕಾಂ ಮುಂದಿಟ್ಟಿದೆ. ಕರ್ನಾಟಕದ ಇತರ ಎಸ್ಕಾಂಗಳ ಗ್ರಾಹಕರಿಗೆ 16 ಪೈಸೆ ಮರುಪಾವತಿ ನಿರೀಕ್ಷೆಯಿದೆ. ಬೆಸ್ಕಾಂ ₹293.6 ಕೋಟಿ ಲಾಭ ಗಳಿಸಿದ್ದು, ಈ ಪ್ರಸ್ತಾವನೆಗೆ KERC ಅನುಮೋದನೆ ದೊರೆಯಬೇಕಿದೆ.

ಮುಖ್ಯಾಂಶಗಳು
- ಬೆಸ್ಕಾಂ ಗ್ರಾಹಕರಿಗೆ 2027ರ ಏಪ್ರಿಲ್‌ನಿಂದ ಪ್ರತಿ ಯೂನಿಟ್‌ಗೆ 35 ಪೈಸೆ ಮರುಪಾವತಿ.
- ಕರ್ನಾಟಕದ ಬಹುತೇಕ ಎಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 16 ಪೈಸೆ ರಿಲೀಫ್.
- ಬೆಸ್ಕಾಂ ₹293.6 ಕೋಟಿ ಲಾಭ ಗಳಿಸಿದ್ದು, ಗ್ರಾಹಕರಿಗೆ ಹಣ ಮರಳಿಸುವ ಪ್ರಸ್ತಾವನೆ.
ಬೆಂಗಳೂರು, ನವೆಂಬರ್ 27: ವಿದ್ಯುತ್ ಬಿಲ್ ಏರಿಕೆಯಿಂದ ಕಂಗಾಲಾಗಿರುವ ಬೆಸ್ಕಾಂ ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದೆ. 2027ರ ಏಪ್ರಿಲ್‌ನಿಂದ ವಿದ್ಯುತ್ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ 35 ಪೈಸೆಯಷ್ಟು ಹಣವನ್ನು ಮರುಪಾವತಿ ಮಾಡುವ ಪ್ರಸ್ತಾವನೆ ಇದೆ. ವಿದ್ಯುತ್ ಸರಬರಾಜು ಕಂಪನಿಗಳು ಗಳಿಸಿರುವ ಲಾಭದ ಒಂದು ಭಾಗವನ್ನು ಗ್ರಾಹಕರಿಗೆ ಮರಳಿಸಲು ನಿರ್ಧರಿಸಿವೆ. ಕರ್ನಾಟಕದ ಬಹುತೇಕ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 16 ಪೈಸೆ ಮರುಪಾವತಿ ಸಿಗುವ ನಿರೀಕ್ಷೆಯಿದೆ. ಆದರೆ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ. ಈ ಪ್ರಸ್ತಾವನೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅನುಮೋದನೆ ದೊರೆಯಬೇಕಿದೆ.
ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 35 ಪೈಸೆ ರಿಲೀಫ್!
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಸೇರಿದಂತೆ ಎಂಟು ಜಿಲ್ಲೆಗಳಿವೆ. ಈ ವ್ಯಾಪ್ತಿಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 35 ಪೈಸೆ ಮರುಪಾವತಿ ನೀಡುವ ಪ್ರಸ್ತಾವನೆಯನ್ನು ಬೆಸ್ಕಾಂ ಮುಂದಿಟ್ಟಿದೆ. 2027ರ ಏಪ್ರಿಲ್‌ನಿಂದ ಆರಂಭವಾಗುವ ಬಿಲ್‌ನಲ್ಲಿ ಈ ಪ್ರಯೋಜನ ಸಿಗುವ ನಿರೀಕ್ಷೆಯಿದೆ. ಈ ಮರುಪಾವತಿ 12 ತಿಂಗಳ ಅವಧಿಗೆ ಅನ್ವಯವಾಗಲಿದೆ.
ಇನ್ನು ಕರ್ನಾಟಕದ ಇತರ ಬಹುತೇಕ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 16 ಪೈಸೆ ಮರುಪಾವತಿ ಸಿಗಲಿದೆ. ಆದರೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (HESCOM) ವ್ಯಾಪ್ತಿಯ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ಈ ಪ್ರಯೋಜನ ಇರುವುದಿಲ್ಲ. ಕಳೆದ ಹಣಕಾಸು ವರ್ಷದಲ್ಲಿ ಲಾಭ ಗಳಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ಗ್ರಾಹಕರಿಗೆ ಮರುಪಾವತಿ ನೀಡುವ ಬದಲು ಪ್ರತಿ ಯೂನಿಟ್‌ಗೆ ಕೆಲವು ಪೈಸೆಗಳಷ್ಟು ದರ ಏರಿಕೆ ಮಾಡುವ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ.
ಬೆಸ್ಕಾಂಗೆ ₹293.6 ಕೋಟಿ ಲಾಭ: ಮರುಪಾವತಿಗೆ ಕಾರಣವೇನು?
2025-26ನೇ ಹಣಕಾಸು ವರ್ಷದಲ್ಲಿ ಬೆಸ್ಕಾಂ ₹293.6 ಕೋಟಿ ಲಾಭ ಗಳಿಸಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಈ ಹಿಂದೆ ತಿಳಿಸಿದ್ದರು. ವಿದ್ಯುತ್ ಬಿಲ್ ಸಂಗ್ರಹದಲ್ಲಿ ಸುಧಾರಣೆ, ಸರಿಯಾದ ಮೀಟರ್ ರೀಡಿಂಗ್, ಬಾಕಿ ವಸೂಲಿ ಹಾಗೂ ವಿದ್ಯುತ್ ಖರೀದಿ ವೆಚ್ಚ ಕಡಿಮೆಯಾಗಿರುವುದು ಲಾಭಕ್ಕೆ ಪ್ರಮುಖ ಕಾರಣಗಳಾಗಿವೆ. ಅಲ್ಲದೆ, ವಿದ್ಯುತ್ ವಿತರಣೆಯಲ್ಲಿನ ನಷ್ಟದ ಪ್ರಮಾಣ ಶೇ.10ಕ್ಕಿಂತ ಕೆಳಕ್ಕೆ ಇಳಿದಿದೆ.
ವಿದ್ಯುತ್ ಖರೀದಿ ವೆಚ್ಚ ಕಡಿಮೆಯಾಗಿರುವುದು ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಿರುವುದರಿಂದ ಬಹುತೇಕ ಎಸ್ಕಾಂಗಳು 2025-26ರಲ್ಲಿ ಲಾಭದ ಹಾದಿಗೆ ಮರಳಿವೆ. ಈ ಹಿನ್ನೆಲೆಯಲ್ಲಿ ಲಾಭದ ಒಂದು ಭಾಗವನ್ನು ಗ್ರಾಹಕರಿಗೆ ಮರಳಿಸಲು ನಿರ್ಧರಿಸಲಾಗಿದೆ.
ಆದರೆ ಅಂತಿಮ ಮರುಪಾವತಿ ಮೊತ್ತ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಸುಂಕ ನಿರ್ಧಾರ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ. ಅನುಮೋದನೆ ದೊರೆತ ಬಳಿಕವೇ ಗ್ರಾಹಕರ ವಿದ್ಯುತ್ ಬಿಲ್‌ನಲ್ಲಿ ಈ ಮೊತ್ತ ಹೊಂದಾಣಿಕೆಯಾಗಲಿದೆ. ಹೀಗಾಗಿ ಬೆಸ್ಕಾಂ ಗ್ರಾಹಕರು 2027ರ ಏಪ್ರಿಲ್‌ನಿಂದ ವಿದ್ಯುತ್ ಬಿಲ್‌ನಲ್ಲಿ ಕೊಂಚ ರಿಲೀಫ್ ನಿರೀಕ್ಷಿಸಬಹುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




