AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎ.ಆರ್. ರೆಹಮಾನ್ ಸಂಗೀತ ಇಷ್ಟವಾಗದೇ ಸಂಭಾವನೆ ಕೊಡಲು ಸತಾಯಿಸಿದ್ದ ನಿರ್ಮಾಪಕ

‘ರಾಕ್‌ಸ್ಟಾರ್’ ಸಿನಿಮಾದ ಹಾಡುಗಳು ಎ.ಆರ್. ರೆಹಮಾನ್ ಅವರ ವೃತ್ತಿಜೀವನದ ಮೈಲಿಗಲ್ಲಾಗಿ ಉಳಿದುಕೊಂಡಿವೆ. ಆದರೆ ಆರಂಭದಲ್ಲಿ ಈ ಚಿತ್ರದ ನಿರ್ಮಾಪಕರು ‘ನನಗೆ ಈ ಸಂಗೀತ ಇಷ್ಟವಾಗಿಲ್ಲ’ ಎಂದು ನೇರವಾಗಿ ಹೇಳಿದ್ದರು. ಅಲ್ಲದೇ, ಸಿನಿಮಾ ಬಿಡುಗಡೆ ಆಗಿ 8 ತಿಂಗಳವರೆಗೆ ರೆಹಮಾನ್​ಗೆ ಸಂಭಾವನೆ ನೀಡಿರಲಿಲ್ಲ.

ಎ.ಆರ್. ರೆಹಮಾನ್ ಸಂಗೀತ ಇಷ್ಟವಾಗದೇ ಸಂಭಾವನೆ ಕೊಡಲು ಸತಾಯಿಸಿದ್ದ ನಿರ್ಮಾಪಕ
AR RahmanImage Credit source: PTI
ಮದನ್​ ಕುಮಾರ್​
|

Updated on: Nov 29, 2026 | 4:32 PM

Share

ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಮ್ಯೂಸಿಕಲ್ ಹಿಟ್ ಸಿನಿಮಾಗಳಲ್ಲಿ ರಣಬೀರ್ ಕಪೂರ್ ಅಭಿನಯದ ‘ರಾಕ್‌ಸ್ಟಾರ್’ ಕೂಡ ಒಂದು. ಆದರೆ, ಈ ಚಿತ್ರದ ಹಾಡುಗಳಿಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರಿಗೆ ಚಿತ್ರ ಬಿಡುಗಡೆಯಾದ 8 ತಿಂಗಳವರೆಗೂ ನಿರ್ಮಾಪಕರು ಸಂಭಾವನೆಯನ್ನೇ ನೀಡಿರಲಿಲ್ಲ ಎಂಬ ಅಚ್ಚರಿಯ ಸಂಗತಿಯನ್ನು ಸ್ವತಃ ರೆಹಮಾನ್ ಬಹಿರಂಗಪಡಿಸಿದ್ದಾರೆ. ಡೆಹ್ರಾಡೂನ್ ಸಾಹಿತ್ಯ ಉತ್ಸವದಲ್ಲಿ ನಿರ್ದೇಶಕ ಇಮ್ತಿಯಾಜ್ ಅಲಿ ಅವರೊಂದಿಗೆ ಸಂವಾದ ನಡೆಸಿದ ರೆಹಮಾನ್, ‘ರಾಕ್‌ಸ್ಟಾರ್’ ಸಿನಿಮಾದ ತೆರೆಮರೆಯ ಹಲವು ಸ್ವಾರಸ್ಯಕರ ಹಾಗೂ ಅಚ್ಚರಿಯ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಸಂವಾದದಲ್ಲಿ ಮಾತನಾಡಿದ ರೆಹಮಾನ್, ‘ಇಡೀ ರಾಕ್‌ಸ್ಟಾರ್ ಸಿನಿಮಾಗೆ ನಿರ್ಮಾಪಕರು ನನಗೆ ಹಣವನ್ನೇ ನೀಡಿರಲಿಲ್ಲ. ತಮಗೆ ಈ ಸಂಗೀತ ಇಷ್ಟವಾಗಿಲ್ಲ ಎಂದು ಅವರು ನೇರವಾಗಿ ಹೇಳಿದ್ದರು. ಆ ಅವಧಿಯಲ್ಲಿ ನನ್ನ ಸ್ವಂತ ಹಣದಿಂದಲೇ ಸಂಗೀತಗಾರರಿಗೆ ಸಂಭಾವನೆ ಮತ್ತು ನನ್ನ ಪ್ರಯಾಣದ ಖರ್ಚುಗಳನ್ನು ಭರಿಸುತ್ತಿದ್ದೆ. ನನಗೆ ಈ ಚಿತ್ರಕ್ಕೆ ಒಂದು ಪೈಸೆಯೂ ಸಿಕ್ಕಿಲ್ಲ ಎಂಬ ವಿಷಯವನ್ನು ನಾನು ನಿರ್ದೇಶಕ ಇಮ್ತಿಯಾಜ್ ಅಲಿ ಅವರಿಗೂ ತಿಳಿಸಿರಲಿಲ್ಲ’ ಎಂದಿದ್ದಾರೆ. ಅಂತಿಮವಾಗಿ ಸಿನಿಮಾ ಬಿಡುಗಡೆಯಾದ 8 ತಿಂಗಳ ನಂತರ ರೆಹಮಾನ್ ಅವರಿಗೆ ಸಂಭಾವನೆಯ ಚೆಕ್ ಕೈಸೇರಿತ್ತಂತೆ.

‘ರಾಕ್‌ಸ್ಟಾರ್’ ಸಿನಿಮಾ ಆರಂಭವಾಗುವ ಮುನ್ನ ರೆಹಮಾನ್ ಮತ್ತು ಇಮ್ತಿಯಾಜ್ ಅಲಿ ನಡುವೆ ದೊಡ್ಡ ಮಟ್ಟದ ಸಂವಹನ ಕೊರತೆ ಉಂಟಾಗಿತ್ತು. ರೆಹಮಾನ್ ಪ್ರತಿಕ್ರಿಯೆಗಾಗಿ ಇಮ್ತಿಯಾಜ್ ಕಾಯುತ್ತಿದ್ದರೆ, ಇತ್ತ ರೆಹಮಾನ್ ಅವರು ನಿರ್ದೇಶಕರ ಸಂಪರ್ಕವಿಲ್ಲದೆಯೇ ಈಗಾಗಲೇ ಎರಡು ಹಾಡುಗಳನ್ನು ಸಂಯೋಜಿಸಿ, ಮೂರು ಹೊಸ ಐಡಿಯಾಗಳನ್ನು ಸಿದ್ಧಪಡಿಸಿದ್ದರು. ಆದರೆ ರೆಹಮಾನ್ ಕಡೆಯಿಂದ ಯಾವುದೇ ಮಾಹಿತಿ ಬಾರದ ಕಾರಣ, ‘ಬಹುಶಃ ಅವರಿಗೆ ಈ ಸಿನಿಮಾ ಮಾಡಲು ಇಷ್ಟವಿಲ್ಲ, ಅದನ್ನು ನೇರವಾಗಿ ಹೇಳಲು ಸಂಕೋಚಪಡುತ್ತಿದ್ದಾರೆ’ ಎಂದು ಇಮ್ತಿಯಾಜ್ ಅಲಿ ಭಾವಿಸಿದ್ದರು.

ಈ ಗೊಂದಲಕ್ಕೆ ತೆರೆಬಿದ್ದಿದ್ದು ದೆಹಲಿಯ ಹಜರತ್ ನಿಜಾಮುದ್ದೀನ್ ಔಲಿಯಾ ದರ್ಗಾದಲ್ಲಿ. ಚಿತ್ರದ ಲೊಕೇಶನ್ ನೋಡಲು ಇಮ್ತಿಯಾಜ್ ಅಲಿ ಮತ್ತು ತಂಡ ದರ್ಗಾಕ್ಕೆ ಹೋಗಿದ್ದಾಗ, ಅಲ್ಲಿನ ಸೇವಕರೊಬ್ಬರು ‘ಎ.ಆರ್. ರೆಹಮಾನ್ ಅವರು ಕೂಡ ಈ ದರ್ಗಾಕ್ಕೆ ಸಂಬಂಧಿಸಿದ ಹಾಡೊಂದನ್ನು ಸಂಯೋಜಿಸುತ್ತಿದ್ದಾರೆ’ ಎಂದು ಸಹಾಯಕ ನಿರ್ದೇಶಕರಿಗೆ ತಿಳಿಸಿದ್ದರು. ದರ್ಗಾದ ದೃಶ್ಯ ‘ರಾಕ್‌ಸ್ಟಾರ್’ ಚಿತ್ರದ ಭಾಗವಾಗಿದ್ದರಿಂದ, ರೆಹಮಾನ್ ಅವರು ತಮ್ಮ ಚಿತ್ರಕ್ಕಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂಬುದು ಇಮ್ತಿಯಾಜ್ ಅವರಿಗೆ ಖಚಿತವಾಯಿತು. ತಕ್ಷಣವೇ ರೆಹಮಾನ್ ಅವರನ್ನು ಸಂಪರ್ಕಿಸಿದಾಗ, ‘ಹೌದು, ಖಂಡಿತವಾಗಿಯೂ ನಾವು ಈ ಸಿನಿಮಾ ಮಾಡುತ್ತಿದ್ದೇವೆ. ನಾನು ಈಗಾಗಲೇ ಮೂರು ಹಾಡುಗಳನ್ನು ಸಿದ್ಧಪಡಿಸಿದ್ದೇನೆ’ ಎಂದು ರೆಹಮಾನ್ ಭರವಸೆ ನೀಡಿದ್ದರು.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದ ಹಾಡುಗಳನ್ನು ಟ್ರೋಲ್ ಮಾಡಿದವರಿಗೆ ಎಆರ್ ರೆಹಮಾನ್ ತಿರುಗೇಟು

‘ಕುನ್ ಫಯಾ ಕುನ್’, ‘ಸಡ್ಡಾ ಹಕ್’, ‘ತುಮ್ ಹೋ’, ‘ಕತ್ತಿಯಾ ಕರೂ’, ‘ಫಿರ್ ಸೇ ಉಡ್ ಚಲಾ’ ಮತ್ತು ‘ನಾದಾನ್ ಪರಿಂದೇ’ಯಂತಹ ಎವರ್‌ಗ್ರೀನ್ ಹಾಡುಗಳನ್ನು ನೀಡಿದ ‘ರಾಕ್‌ಸ್ಟಾರ್’ ಸಿನಿಮಾ ಆಲ್ಬಮ್, ಎ.ಆರ್. ರೆಹಮಾನ್ ಅವರ ವೃತ್ತಿಜೀವನದ ಮೈಲಿಗಲ್ಲಾಗಿ ಉಳಿದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More