‘ರಾಮಾಯಣ’ ಸಿನಿಮಾದ ಹಾಡುಗಳನ್ನು ಟ್ರೋಲ್ ಮಾಡಿದವರಿಗೆ ಎಆರ್ ರೆಹಮಾನ್ ತಿರುಗೇಟು
ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾದ ಹಾಡುಗಳ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತಿರುಗೇಟು ನೀಡಿದ್ದಾರೆ. ಸಾರ್ವಜನಿಕರ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿರುವ ಅವರು, ಹ್ಯಾನ್ಸ್ ಜಿಮ್ಮರ್ ಜೊತೆಗಿನ ಒಡನಾಟದ ಬಗ್ಗೆಯೂ ಮಾತನಾಡಿದ್ದಾರೆ.

ಮುಖ್ಯಾಂಶಗಳು
- ‘ರಾಮಾಯಣ’ ಹಾಡುಗಳ ಟ್ರೋಲ್ ಬಗ್ಗೆ ಮೌನ ಮುರಿದರು ಎ.ಆರ್. ರೆಹಮಾನ್
- ಹ್ಯಾನ್ಸ್ ಜಿಮ್ಮರ್ ಜೊತೆ ಕೈಜೋಡಿಸಿರುವುದು ದೊಡ್ಡ ಹೆಮ್ಮೆ ಎಂದ ಸಂಗೀತ ನಿರ್ದೇಶಕ
- ನವೆಂಬರ್ 5ರಂದು ದೀಪಾವಳಿ ಸಂಭ್ರಮದಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದೆ ರಾಮಾಯಣ
ನಮಿತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ‘ರಾಮಾಯಣ‘ ಸಿನಿಮಾವು ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರದ ಗ್ರಾಫಿಕ್ಸ್ ಹಾಗೂ ಹಾಡುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಈ ಎಲ್ಲ ವಿವಾದಗಳು ಮತ್ತು ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಮುಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
‘ಸಂಗೀತ ಸಂಯೋಜನೆ ಮತ್ತು ಕೆಲಸದ ಮೇಲೆಯೇ ತಮ್ಮ ಸಂಪೂರ್ಣ ಗಮನವಿರುತ್ತದೆ. ಸಾರ್ವಜನಿಕವಾಗಿ ಕೇಳಿಬರುವ ಟೀಕೆಗಳು ಅಥವಾ ಪ್ರತಿಕ್ರಿಯೆಗಳನ್ನು ನೋಡಲು ತಮಗೆ ಸಮಯವಿರುವುದಿಲ್ಲ. ನಾನು ಬಹಳ ಪ್ರಾಮಾಣಿಕವಾಗಿ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ಪ್ರೇಕ್ಷಕರು ಇದನ್ನು ಇಷ್ಟಪಟ್ಟು ಕೊಂಡಾಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಸಂದರ್ಶನ ಒಂದರಲ್ಲಿ ರೆಹಮಾನ್ ಹೇಳೀದ್ದಾರೆ.
ಚಿತ್ರದ ‘ರಾವಣ ತಾಂಡವ’ ಮತ್ತು ‘ಮಂಗಲ್ ರಂಗ್’ ಹಾಡುಗಳು ಬಿಡುಗಡೆಯಾದ ಬಳಿಕ ನೆಟಿಗರಿಂದ ಭಾರಿ ಟ್ರೋಲ್ ಹಾಗೂ ಚರ್ಚೆಗಳು ಆರಂಭವಾಗಿದ್ದವು. ಕೆಲವರು ಹಾಡಿನ ಶೈಲಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ರೆಹಮಾನ್, ‘ಪ್ರತಿಯೊಬ್ಬರ ಅಭಿಪ್ರಾಯಕ್ಕೆ ತಕ್ಕಂತೆ ತಮ್ಮ ಸೃಜನಶೀಲತೆಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ಪ್ರಯೋಗಗಳನ್ನು ಮಾಡುವುದು ಅನಿವಾರ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಈ ಮಹಾಕಾವ್ಯಕ್ಕೆ ಹಾಡುಗಳನ್ನು ಸಂಯೋಜಿಸುವುದು ತಮಗೆ ಸಿಕ್ಕ ದೊಡ್ಡ ಗೌರವ. ಈ ಸಿನಿಮಾಗಾಗಿ ಹಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಅವರ ಜೊತೆ ಕೈಜೋಡಿಸಿರುವುದು ವಿಶೇಷ. ಹ್ಯಾನ್ಸ್ ಜಿಮ್ಮರ್ ಅವರ ಸಹಯೋಗವು ಜಾಗತಿಕ ಮಟ್ಟದಲ್ಲಿ ಈ ಚಿತ್ರಕ್ಕೆ ದೊಡ್ಡ ಮನ್ನಣೆ ತಂದುಕೊಡಲಿದೆ. ಜಾಗತಿಕ ಪ್ರೇಕ್ಷಕರು ಭಾರತೀಯ ಸಿನಿಮಾವನ್ನು ನೋಡುವ ದೃಷ್ಟಿಕೋನವನ್ನೇ ಇದು ಬದಲಾಯಿಸಲಿದೆ’ ಎಂದು ರೆಹಮಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾ ಹಂಚಿಕೆ ಮಾಡಲು ರೆಡಿ ಆದ ಯಶ್
ರಣ್‌ಬೀರ್ ಕಪೂರ್ ರಾಮನಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಇದರ ಮೊದಲ ಭಾಗವು ನವೆಂಬರ್ 5ರಂದು ಬಿಡುಗಡೆಯಾಗಲಿದೆ. ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಸೇರಿದಂತೆ ಹಲವು ದಿಗ್ಗಜ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




