AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣದ ಮೌಲ್ಯವನ್ನು ಕೋಟಿ ಗಳಿಕೆಯಿಂದ ಅಳೆಯಲಾಗದು’; ವಿವೇಕ್ ಒಬೆರಾಯ್

‘ರಾಮಾಯಣ’ ಚಿತ್ರದ ಮೌಲ್ಯವನ್ನು ಕೋಟಿ ಗಳಿಕೆಯಿಂದ ಅಳೆಯಲಾಗದು ಎಂದು ನಟ ವಿವೇಕ್ ಒಬೆರಾಯ್ ಹೇಳಿದ್ದಾರೆ. ಸಾಂಸ್ಕೃತಿಕ ಮೌಲ್ಯಕ್ಕಾಗಿ ಸಿನಿಮಾ ಒಪ್ಪಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. 24 ದಿನಗಳಲ್ಲಿ ಚಿತ್ರ ವಿಶ್ವಾದ್ಯಂತ 1,814 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಎಲ್ಲ ವಯೋಮಾನದ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿದ್ದಾರೆ ಎಂದು ವಿವೇಕ್ ಸಂತಸ ವ್ಯಕ್ತಪಡಿಸಿದ್ದಾರೆ.

‘ರಾಮಾಯಣದ ಮೌಲ್ಯವನ್ನು ಕೋಟಿ ಗಳಿಕೆಯಿಂದ ಅಳೆಯಲಾಗದು’; ವಿವೇಕ್ ಒಬೆರಾಯ್
ರಾಮಾಯಣ
ರಾಜೇಶ್ ದುಗ್ಗುಮನೆ
|

Updated on: Nov 29, 2026 | 3:26 PM

Share

ಮುಖ್ಯಾಂಶಗಳು

  • ಕೋಟಿ ಗಳಿಕೆಗಿಂತ ಸಾಂಸ್ಕೃತಿಕ ಮೌಲ್ಯವೇ ಮುಖ್ಯ ಎಂದ ವಿವೇಕ್ ಒಬೆರಾಯ್
  • ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ ನಟ
  • ವಿಶ್ವಾದ್ಯಂತ 1,814 ಕೋಟಿ ದಾಟಿದ ‘ರಾಮಾಯಣ’ ಮೊದಲ ಭಾಗದ ಗಳಿಕೆ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಯಶಸ್ಸಿನ ಕುರಿತು ನಟ ವಿವೇಕ್ ಒಬೆರಾಯ್ ಮಾತನಾಡಿದ್ದಾರೆ. ಚಿತ್ರ ಗಳಿಸಿದ ಕೋಟಿ ರೂಪಾಯಿಗಳಿಂದ ಇದರ ಮೌಲ್ಯ ಅಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಸಾಂಸ್ಕೃತಿಕ ಮೌಲ್ಯದ ಕಾರಣಕ್ಕಾಗಿಯೇ ಈ ಸಿನಿಮಾವನ್ನು ಒಪ್ಪಿಕೊಂಡೆ ಎಂದು ವಿವೇಕ್ ತಿಳಿಸಿದ್ದಾರೆ. ಚಿತ್ರದಲ್ಲಿ ಅವರು ವಿದ್ಯುತ್‌ಜೀವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವೇಕ್ ಸುದ್ದಿಗಾರರ ಜೊತೆ ಮಾತನಾಡಿದರು. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಅವರು ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ತಮ್ಮ ಮಕ್ಕಳು ಮತ್ತು ಸ್ನೇಹಿತರ ಮಕ್ಕಳ ಪ್ರತಿಕ್ರಿಯೆ ತಮಗೆ ತುಂಬಾ ಖುಷಿ ನೀಡಿದೆ ಎಂದರು. ಸಿನಿಮಾ ನೋಡಿ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಅವರು ಹಂಚಿಕೊಂಡರು.

‘ಶ್ರೀರಾಮನ ಕಥೆ ನಮ್ಮ ಸಂಸ್ಕೃತಿಯ ಪ್ರಮುಖ ಅಂಗವಾಗಿದೆ. ಈ ಕಥೆಯನ್ನು ಮಕ್ಕಳಿಗೆ ಸರಳವಾಗಿ ತಲುಪಿಸುವ ಕೆಲಸ ಆಗಿದೆ. ಎಂಭತ್ತೈದು ವರ್ಷದ ಹಿರಿಯರಿಂದ ಐದು ವರ್ಷದ ಮಕ್ಕಳವರೆಗೆ ಎಲ್ಲರೂ ಸಿನಿಮಾ ಇಷ್ಟಪಡುತ್ತಿದ್ದಾರೆ. ಇದಕ್ಕಿಂತ ದೊಡ್ಡ ಕೊಡುಗೆ ಬೇರೊಂದಿಲ್ಲ’ ಎಂದು ವಿವೇಕ್ ಅಭಿಪ್ರಾಯಪಟ್ಟರು.

ಬಾಲ್ಯದಲ್ಲಿ ರಾಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯನ್ನು ಕುಟುಂಬದ ಜೊತೆ ನೋಡುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡರು. ನಿರ್ಮಾಪಕ ನಮಿತ್ ಮಲ್ಹೋತ್ರಾ ಪಾತ್ರದ ಆಫರ್ ನೀಡಿದಾಗ ಇದು ಮಹಾಯಜ್ಞಕ್ಕೆ ಸಣ್ಣ ಆಹುತಿ ಎಂದು ಹೇಳಿದ್ದೆ ಎಂದರು. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜಿಟಿಎ ಮಾದರಿಯಲ್ಲಿ ಬರಲಿದೆ ‘ರಾಮಾಯಣ’ ವಿಡಿಯೋ ಗೇಮ್; ನೀವು ರಾವಣನ ಕೊಲ್ಲಬಹುದು

ಬಿಡುಗಡೆಯಾದ 24 ದಿನಗಳಲ್ಲಿ ‘ರಾಮಾಯಣ’ ಮೊದಲ ಭಾಗ ವಿಶ್ವಾದ್ಯಂತ 1,814 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಭಾರತದಲ್ಲಿ ನಿವ್ವಳ 1,015.20 ಕೋಟಿ ರೂಪಾಯಿ ಸಂಗ್ರಹವಾಗಿದೆ. ‘ಬಾಹುಬಲಿ 2’ ಮತ್ತು ‘ಧುರಂಧರ್ 2’ ಗಳಿಕೆಯನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಗಿದೆ. ಮುಂದಿನ ಭಾಗ 2028ರ ದೀಪಾವಳಿಗೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More