ಈ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಕ್ಕೆ 1 ಕೋಟಿ ರೂ. ಕಳೆದುಕೊಂಡ ನಿರ್ದೇಶಕ ಸುಕುಮಾರ್
ದುಲ್ಕರ್ ಸಲ್ಮಾನ್, ಸಾತ್ವಿಕಾ ನಟನೆಯ ‘ಆಕಾಶಂಲೋ ಒಕ ತಾರ’ ಸಿನಿಮಾ ನೋಡಿ ಅಳದೇ ಇದ್ದರೆ ತಾವು ಒಂದು ಕೋಟಿ ರೂಪಾಯಿ ನೀಡುವುದಾಗಿ ನಿರ್ಮಾಪಕ ಅಲ್ಲು ಅರವಿಂದ್ ಅವರು ಸುಕುಮಾರ್ ಅವರಿಗೆ ಸವಾಲು ಹಾಕಿದ್ದರು. ಆ ಸವಾಲು ಸ್ವೀಕರಿಸಿ ಸಿನಿಮಾ ನೋಡಿದ ಸುಕುಮಾರ್ ಅವರು ಸೋತಿದ್ದಾರೆ.

ಪವನ್ ಸಾದಿನೇನಿ ನಿರ್ದೇಶನದ, ದುಲ್ಕರ್ ಸಲ್ಮಾನ್ ಮತ್ತು ಸಾತ್ವಿಕಾ ವೀರವಲ್ಲಿ ಅಭಿನಯದ ಸೈನ್ಸ್ ಫಿಕ್ಷನ್ ಡ್ರಾಮಾ ‘ಆಕಾಶಂಲೋ ಒಕ ತಾರ’ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅರ್ಪಿಸಿದ್ದು, ಈವರೆಗೆ ವಿಶ್ವಾದ್ಯಂತ 51 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಲ್ಲು ಅರವಿಂದ್ ಅವರು ‘ಪುಷ್ಪ’ ಖ್ಯಾತಿಯ ನಿರ್ದೇಶಕ ಸುಕುಮಾರ್ ಅವರಿಗೆ ಸಿನಿಮಾ ನೋಡುವಂತೆ ಇತ್ತೀಚೆಗೆ ಒಂದು ವಿಶೇಷ ಸವಾಲು ಹಾಕಿದ್ದರು. ಆದರೆ, ಚಿತ್ರ ನೋಡುವಾಗ ಭಾವುಕರಾಗಿ ಕಣ್ಣೀರಿಡುವ ಮೂಲಕ ಸುಕುಮಾರ್ ಈ ಸವಾಲಿನಲ್ಲಿ ಸೋತಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಲ್ಲು ಅರವಿಂದ್ ಅವರ ಫೋಟೋ ಹಾಗೂ ಅವರಿಗೆ ಬರೆದಿರುವ 1 ಲಕ್ಷ ರೂಪಾಯಿ ಚೆಕ್‌ನ ಫೋಟೋವನ್ನು ಹಂಚಿಕೊಂಡಿರುವ ಸುಕುಮಾರ್ ಅವರು, ತಾವು ಸವಾಲು ಸೋತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಅವರು, ‘ನಿನ್ನೆ ಅರವಿಂದ್ ಅವರು ನನಗೆ ಕರೆ ಮಾಡಿ ಒಂದು ಕುತೂಹಲಕಾರಿ ಸವಾಲು ಹಾಕಿದ್ದರು. ‘ಹೇ ಸುಕುಮಾರ್, ಹೋಗಿ ಆಕಾಶಂಲೋ ಒಕ ತಾರ ಸಿನಿಮಾ ನೋಡಿ. ಥಿಯೇಟರ್‌ನಿಂದ ಒಂದು ಹನಿ ಕಣ್ಣೀರು ಹಾಕದೆ ಹೊರಬಂದರೆ ನಾನು ನಿಮಗೆ 1 ಕೋಟಿ ರೂಪಾಯಿ ಕೊಡುತ್ತೇನೆ. ಒಂದು ವೇಳೆ ಕಣ್ಣೀರು ಹಾಕಿದರೆ ನೀವು ನನಗೆ 1 ಲಕ್ಷ ರೂಪಾಯಿ ಕೊಡಬೇಕು’ ಎಂದಿದ್ದರು. ಎಂತಹ ದುಬಾರಿ ಶಿಫಾರಸು ಸರ್ ಇದು’ ಎಂದು ತಮಾಷೆಯಾಗಿ ಹಾಗೂ ಭಾವುಕರಾಗಿ ಬರೆದುಕೊಂಡಿದ್ದಾರೆ.
‘ಲೈಟ್‌ಬಾಕ್ಸ್ ಮೀಡಿಯಾ’ ನಿರ್ಮಾಣದ ಈ ಚಿತ್ರವನ್ನು ಸ್ವಪ್ನಾ ಸಿನಿಮಾ ಮತ್ತು ಗೀತಾ ಆರ್ಟ್ಸ್ ಸಂಸ್ಥೆಗಳು ಪ್ರಸ್ತುತಪಡಿಸಿವೆ. ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ರುಹಾನಿ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಗನಯಾತ್ರಿಯಾಗಬೇಕೆಂಬ ಕನಸು ಕಾಣುವ ಕಲ್ಪನಾ ಎಂಬ ಯುವತಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಆಕೆ ಅನಿವಾರ್ಯವಾಗಿ ಮದುವೆಯಾಗುವ ಮಧ್ಯಮ ವರ್ಗದ ಮೆಕ್ಯಾನಿಕ್ ಒಬ್ಬ, ಆಕೆಯ ಕನಸನ್ನು ನನಸು ಮಾಡಲು ಹೇಗೆ ಸಹಾಯ ಮಾಡುತ್ತಾನೆ ಎಂಬುದೇ ಚಿತ್ರದ ಭಾವನಾತ್ಮಕ ಎಳೆಯಾಗಿದೆ.
ಇದನ್ನೂ ಓದಿ: ‘ನನ್ನ ಹೆಸರಿನ ಫೇಕ್ ಖಾತೆ ನಂಬಬೇಡಿ’: ಅಭಿಮಾನಿಗಳಿಗೆ ದುಲ್ಕರ್ ಸಲ್ಮಾನ್ ಎಚ್ಚರಿಕೆ
ನವೆಂಬರ್ 20ರಂದು ಬಿಡುಗಡೆಯಾದ ‘ಆಕಾಶಂಲೋ ಒಕ ತಾರ’ ಚಿತ್ರಕ್ಕೆ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ, ಧನುಷ್, ಮಮ್ಮುಟ್ಟಿ, ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಟನೆಯ ‘ಓಂ’ ಚಿತ್ರದಿಂದ ತೀವ್ರ ಪೈಪೋಟಿ ಎದುರಾಗಿತ್ತು. ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ, ಉತ್ತಮ ಮೌತ್ ಪಬ್ಲಿಸಿಟಿ ಮೂಲಕ ‘ಆಕಾಶಂಲೋ ಒಕ ತಾರ’ 9 ದಿನಗಳಲ್ಲಿ 51 ಕೋಟಿ ರೂ. ಗಳಿಸಿದೆ. ಮತ್ತೊಂದೆಡೆ, ಸಾಧಾರಣ ವಿಮರ್ಶೆಗಳ ನಡುವೆಯೂ ಭರ್ಜರಿ ಓಪನಿಂಗ್ ಪಡೆದಿದ್ದ ‘ಓಂ’ ಚಿತ್ರ ವಿಶ್ವಾದ್ಯಂತ 118 ಕೋಟಿ ರೂ. ಬಾಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




