AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್‌ನಲ್ಲಿ ಎಎಪಿಗೆ ಹಿನ್ನಡೆ: 2022ರಲ್ಲಿ ಮಾಜಿ ಸಿಎಂ ಚನ್ನಿ ಸೋಲಿಗೆ ಕಾರಣರಾಗಿದ್ದ ಶಾಸಕ ಚರಣ್‌ಜಿತ್ ಸಿಂಗ್ ಅಕಾಲಿದಳ ಸೇರ್ಪಡೆ

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಚಮ್ಕೌರ್ ಸಾಹಿಬ್ ಶಾಸಕ ಚರಣ್‌ಜಿತ್ ಸಿಂಗ್ ಟಿಕೆಟ್ ನಿರಾಕರಣೆಯಿಂದ ಅಸಮಾಧಾನಗೊಂಡು ಅಕಾಲಿ ದಳ ಸೇರಿದ್ದಾರೆ. 2022ರಲ್ಲಿ ಮಾಜಿ ಸಿಎಂ ಚನ್ನಿ ಅವರನ್ನು ಸೋಲಿಸಿದ್ದ ಇವರ ನಿರ್ಗಮನ ಎಎಪಿ ಗೆ ದೊಡ್ಡ ಸವಾಲಾಗಿದೆ. ಬಿಜೆಪಿ-ಅಕಾಲಿ ದಳ ಮೈತ್ರಿ ಪುನಾರಂಭಗೊಂಡಿರುವುದರಿಂದ 2027ರ ಚುನಾವಣೆ ಕುತೂಹಲಕಾರಿಯಾಗಿದೆ.

ಪಂಜಾಬ್‌ನಲ್ಲಿ ಎಎಪಿಗೆ ಹಿನ್ನಡೆ: 2022ರಲ್ಲಿ ಮಾಜಿ ಸಿಎಂ ಚನ್ನಿ ಸೋಲಿಗೆ ಕಾರಣರಾಗಿದ್ದ ಶಾಸಕ ಚರಣ್‌ಜಿತ್ ಸಿಂಗ್ ಅಕಾಲಿದಳ ಸೇರ್ಪಡೆ
ಚರಣ್​ಜಿತ್ ಸಿಂಗ್
ನಯನಾ ರಾಜೀವ್
|

Updated on: Nov 29, 2026 | 1:24 PM

Share

ಅಮೃತಸರ, ನವೆಂಬರ್ 29: ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ರಾಜಕೀಯ ಹಿನ್ನಡೆಯಾಗಿದೆ. ಚಮ್ಕೌರ್ ಸಾಹಿಬ್ ಕ್ಷೇತ್ರದ ಎಎಪಿ ಶಾಸಕ ಚರಣ್‌ಜಿತ್ ಸಿಂಗ್ ಪಕ್ಷ ತೊರೆದು ಶಿರೋಮಣಿ ಅಕಾಲಿ ದಳಕ್ಕೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಚುನಾವಣೆಗೆ ಎಎಪಿ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸುಖ್‌ಬೀರ್ ಸಿಂಗ್ ಬಾದಲ್ ಅವರ ಸಮ್ಮುಖದಲ್ಲಿ ಅಕಾಲಿ ದಳ ಸೇರಿರುವುದು ಪಂಜಾಬ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಟಿಕೆಟ್ ನಿರಾಕರಣೆಯಿಂದ ಅಸಮಾಧಾನ ಎಎಪಿ ನಾಯಕತ್ವ ತಮ್ಮನ್ನು ಕಡೆಗಣಿಸಿದೆ ಎಂದು ಚರಣ್‌ಜಿತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ತಮ್ಮ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಆದರೂ ಟಿಕೆಟ್ ನಿರಾಕರಿಸಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದರು. ಅಲ್ಲದೆ, ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು.

ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ ಈ ಬಾರಿ ಎಎಪಿ, ಮಾಜಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಹಾಗೂ ಪಂಜಾಬ್ ರಾಜ್ಯ ಪರಿಶಿಷ್ಟ ಜಾತಿ ಆಯೋಗದ ಮಾಜಿ ಅಧ್ಯಕ್ಷ ಜಸ್ವಿರ್ ಸಿಂಗ್ ಗರ್ಹಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರಿಂದ ಚರಣ್‌ಜಿತ್ ಸಿಂಗ್ ಅಸಮಾಧಾನಗೊಂಡಿದ್ದರು.

2022ರಲ್ಲಿ ಮಾಜಿ ಸಿಎಂ ಚನ್ನಿಗೆ ಸೋಲುಣಿಸಿದ್ದ ಶಾಸಕ 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಚರಣ್‌ಜಿತ್ ಸಿಂಗ್ ಭಾರೀ ರಾಜಕೀಯ ಗಮನ ಸೆಳೆದಿದ್ದರು. ಆಗಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಚಮ್ಕೌರ್ ಸಾಹಿಬ್ ಕ್ಷೇತ್ರದಲ್ಲೇ ಸೋಲಿಸಿದ್ದರು.

ಆ ಚುನಾವಣೆಯಲ್ಲಿ ಚರಣ್‌ಜಿತ್ ಸಿಂಗ್ 70,248 ಮತಗಳನ್ನು ಪಡೆದರೆ, ಚನ್ನಿ 62,306 ಮತಗಳನ್ನು ಪಡೆದಿದ್ದರು. ಅಂದರೆ 7,942 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಗೆಲುವಿನಿಂದ ಅವರು ಪಂಜಾಬ್ ರಾಜಕೀಯದಲ್ಲಿ ಗಮನ ಸೆಳೆದಿದ್ದರು.

ಇದನ್ನೂ ಓದಿ: 2027ರ ಪಂಜಾಬ್ ವಿಧಾನಸಭಾ ಚುನಾವಣೆ: ಬಿಜೆಪಿ–ಅಕಾಲಿ ದಳ ಮೈತ್ರಿ ಘೋಷಿಸಿದ ಅಮಿತ್ ಶಾ

ಎಎಪಿಯಿಂದ ನಾಲ್ವರು ಶಾಸಕರ ನಿರ್ಗಮನ ಚರಣ್‌ಜಿತ್ ಸಿಂಗ್ ಅವರ ಪಕ್ಷಾಂತರದಿಂದ ಎಎಪಿಗೆ ಮತ್ತೊಂದು ಹಿನ್ನಡೆಯಾಗಿದೆ. 2027ರ ಚುನಾವಣೆಗೆ ಮುನ್ನ ಈ ಹಿಂದೆ ಮೂವರು ಎಎಪಿ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಇದೀಗ ಚರಣ್‌ಜಿತ್ ಸಿಂಗ್ ಕೂಡ ಪಕ್ಷ ತೊರೆದಿರುವುದರಿಂದ ಎಎಪಿಯಿಂದ ಹೊರಬಂದ ಶಾಸಕರ ಸಂಖ್ಯೆ ನಾಲ್ಕಕ್ಕೆ ಏರಿದೆ ಎಂದು ವರದಿಯಾಗಿದೆ.

ಬಿಜೆಪಿ–ಅಕಾಲಿ ದಳ ಮತ್ತೆ ಒಂದಾಗಿವೆ ಇನ್ನೊಂದೆಡೆ, 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಮೈತ್ರಿ ಮಾಡಿಕೊಂಡಿವೆ. ನವೆಂಬರ್ 24ರಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿ ಘೋಷಿಸಿದ್ದರು.

ಈ ಮೂಲಕ ಆರು ವರ್ಷಗಳ ರಾಜಕೀಯ ಅಂತರ ಕೊನೆಗೊಂಡಿದೆ. 2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಕಾಲಿ ದಳ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಇದರಿಂದ 24 ವರ್ಷಗಳ ಬಿಜೆಪಿ–ಅಕಾಲಿ ದಳದ ಮೈತ್ರಿ ಮುರಿದುಬಿದ್ದಿತ್ತು. ಇದೀಗ ಮತ್ತೆ ಒಂದಾಗಿರುವ ಎರಡೂ ಪಕ್ಷಗಳು 2027ರ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಲು ಸಿದ್ಧತೆ ನಡೆಸಿವೆ.

ಈ ಬೆಳವಣಿಗೆ ಪಂಜಾಬ್ ರಾಜಕೀಯಕ್ಕೆ ಮುಖ್ಯ ಏಕೆ? – ಟಿಕೆಟ್ ನಿರಾಕರಣೆಯಿಂದ ಅಸಮಾಧಾನಗೊಂಡಿದ್ದ ಹಾಲಿ ಶಾಸಕ ಈಗ ಅಕಾಲಿ ದಳ ಸೇರಿದ್ದಾರೆ. – 2022ರಲ್ಲಿ ಮಾಜಿ ಮುಖ್ಯಮಂತ್ರಿ ಚನ್ನಿ ಅವರನ್ನು ಸೋಲಿಸಿದ್ದ ನಾಯಕನ ಪಕ್ಷಾಂತರ ಎಎಪಿಗೆ ಚುನಾವಣಾ ಸವಾಲಾಗಬಹುದು. – ಎಎಪಿಯಿಂದ ನಾಲ್ವರು ಶಾಸಕರು ಪಕ್ಷ ತೊರೆದಿರುವುದು ಪಕ್ಷದೊಳಗಿನ ಅಸಮಾಧಾನದ ಚರ್ಚೆಗೆ ಕಾರಣವಾಗಿದೆ. – ಬಿಜೆಪಿ–ಅಕಾಲಿ ದಳ ಮೈತ್ರಿ ಪುನರಾರಂಭವಾಗಿರುವುದರಿಂದ 2027ರ ಚುನಾವಣೆ ತ್ರಿಕೋನ ಅಥವಾ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More