AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಟಿಎ ಮಾದರಿಯಲ್ಲಿ ಬರಲಿದೆ ‘ರಾಮಾಯಣ’ ವಿಡಿಯೋ ಗೇಮ್; ನೀವು ರಾವಣನ ಕೊಲ್ಲಬಹುದು

ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1,790 ಕೋಟಿ ಗಳಿಸಿ ಬಾಹುಬಲಿ 2 ದಾಖಲೆ ಮುರಿದಿದೆ. ಇದರ ಬೆನ್ನಲ್ಲೇ ನಿರ್ಮಾಪಕ ನಮಿತ್ ಮಲ್ಹೋತ್ರಾ ಜಿಟಿಎ ಮಾದರಿಯಲ್ಲಿ ರಾಮಾಯಣ ವಿಡಿಯೋ ಗೇಮ್ ತರುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಥೀಮ್ ಪಾರ್ಕ್ ನಿರ್ಮಿಸುವ ಬೃಹತ್ ಯೋಜನೆಯನ್ನು ಅವರು ಹಂಚಿಕೊಂಡಿದ್ದಾರೆ.

ಜಿಟಿಎ ಮಾದರಿಯಲ್ಲಿ ಬರಲಿದೆ ‘ರಾಮಾಯಣ’ ವಿಡಿಯೋ ಗೇಮ್; ನೀವು ರಾವಣನ ಕೊಲ್ಲಬಹುದು
ರಾಮಾಯಣ
ರಾಜೇಶ್ ದುಗ್ಗುಮನೆ
|

Updated on: Nov 29, 2026 | 11:09 AM

Share

ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರವು ಈಗಾಗಲೇ ಜಾಗತಿಕ ಮಟ್ಟದಲ್ಲಿ 1,790 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಈ ಯಶಸ್ಸಿನ ಬೆನ್ನಲ್ಲೇ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದಾರೆ. ಮಕ್ಕಳಿಗಾಗಿ ಜಿಟಿಎ ಮಾದರಿಯಲ್ಲಿ ‘ರಾಮಾಯಣ’ ವಿಡಿಯೋ ಗೇಮ್ ಸಿದ್ಧಪಡಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ವಿಶೇಷ ಸಂದರ್ಶನದಲ್ಲಿ ನಮಿತ್ ಈ ವಿಚಾರ ಹಂಚಿಕೊಂಡಿದ್ದಾರೆ. ‘ಇಂದಿನ ಮಕ್ಕಳು ಜಿಟಿಎ ಗೇಮ್ ಅನ್ನು ತುಂಬಾ ಇಷ್ಟಪಟ್ಟು ಆಡುತ್ತಾರೆ. ಅದೇ ರೀತಿ ಮಕ್ಕಳು ರಾಮಾಯಣ ಗೇಮ್ ಆಡಿ ಮನರಂಜನೆಯ ಜೊತೆಗೆ ಮೌಲ್ಯಗಳನ್ನು ಕಲಿಯಬೇಕು ಎಂಬುದು ನನ್ನ ಆಸೆ. ಸದ್ಯ ಈ ವಿಡಿಯೋ ಗೇಮ್ ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ಆಟಗಾರರು ಜಟಾಯು ಜೊತೆ ಹಾರಾಡುವ ಮತ್ತು ರಾವಣನ ವಿರುದ್ಧ ಹೋರಾಡುವ ಅನುಭವ ಪಡೆಯಬಹುದು’ ಎಂದಿದ್ದಾರೆ ಅವರು.

ರಾಮಾಯಣವನ್ನು ಕೇವಲ ಎರಡು ಸಿನಿಮಾಗಳಿಗೆ ಸೀಮಿತಗೊಳಿಸುವ ಉದ್ದೇಶ ನಮಗಿಲ್ಲ ಎಂದು ನಮಿತ್ ಹೇಳಿದ್ದಾರೆ. ‘ಇದೊಂದು ಬೃಹತ್ ಪ್ರಪಂಚವಾಗಿ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ರಾಮಾಯಣ ಆಧಾರಿತ ಥೀಮ್ ಪಾರ್ಕ್ ಮತ್ತು ಬ್ರಾಡ್‌ವೇ ಮ್ಯೂಸಿಕಲ್ ಶೋಗಳು ಬರಲಿವೆ. ಅಲ್ಲದೆ ಆಟಿಕೆಗಳು ಮತ್ತು ಗ್ಯಾಜೆಟ್‌ಗಳನ್ನು ಮಾರುಕಟ್ಟೆಗೆ ತರಲಾಗುವುದು. ವರ್ಚುವಲ್ ರಿಯಾಲಿಟಿ ಮತ್ತು ಅನಿಮೇಟೆಡ್ ಸರಣಿಗಳ ಮೂಲಕ ರಾಮಾಯಣದ ಕಥೆಯನ್ನು ಎಲ್ಲೆಡೆ ತಲುಪಿಸುವ ಯೋಜನೆ ಇದೆ’ ಎಂದು ನಿರ್ಧಾರ ವಿವರಿಸಿದ್ದಾರೆ.

ಈ ಸಿನಿಮಾಗೆ ಸುಮಾರು 4000 ಕೋಟಿ ರೂಪಾಯಿ ಬಜೆಟ್ ಹೂಡಲಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ವಾಪಸ್ ಪಡೆಯುವ ಬಗ್ಗೆ ನಮಿತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿನಿಮಾದಿಂದ ಪೂರ್ತಿ ಹಣ ಬರದಿದ್ದರೂ ಥೀಮ್ ಪಾರ್ಕ್ ಮತ್ತು ಇತರ ಉತ್ಪನ್ನಗಳಿಂದ ಲಾಭ ಗಳಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದು ಶ್ರೀರಾಮನ ಕಥೆಯಾಗಿರುವುದರಿಂದ ಜನರು ಖಂಡಿತವಾಗಿಯೂ ಇದನ್ನು ಇಷ್ಟಪಡುತ್ತಾರೆ ಎಂಬ ಭರವಸೆ ನಿರ್ಮಾಪಕರಿಗಿದೆ.

ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆಯನ್ನೇ ಮುರಿದ ‘ರಾಮಾಯಣ’, ಉಳಿದಿರುವುದು ಎರಡೇ ಹೆಜ್ಜೆ

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ: ಭಾಗ 1’ ನಾಲ್ಕನೇ ವಾರದಲ್ಲೂ ಅಬ್ಬರಿಸುತ್ತಿದೆ. ಭಾರತದಲ್ಲಿ ಈ ಚಿತ್ರ ನಿವ್ವಳ 1,000.05 ಕೋಟಿ ರೂಪಾಯಿ ಗಳಿಸಿದೆ. ಜಾಗತಿಕ ಗಳಿಕೆಯಲ್ಲಿ 1,790.10 ಕೋಟಿ ರೂಪಾಯಿ ತಲುಪುವ ಮೂಲಕ ‘ಬಾಹುಬಲಿ 2’ ಚಿತ್ರದ 1,788.06 ಕೋಟಿ ದಾಖಲೆಯನ್ನು ಮುರಿದಿದೆ. ಆದರೂ ಭಾರಿ ಬಜೆಟ್ ಕಾರಣದಿಂದ ಚಿತ್ರ ಇನ್ನೂ ಲಾಭದ ಹಂತ ತಲುಪಿಲ್ಲ. ಇನ್ನು ‘ರಾಮಾಯಣ: ಭಾಗ 2’ 2028ರ ದೀಪಾವಳಿಗೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More