AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

21 ವರ್ಷಗಳ ಸುದೀರ್ಘ ಟೆಸ್ಟ್ ಕೆರಿಯರ್​ಗೆ ಗುಡ್ ಬೈ!

ಸುಮಾರು ಎರಡು ದಶಕಗಳ ಕಾಲ ಬಾಂಗ್ಲಾದೇಶ್ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭವಾಗಿದ್ದ 'ಮಿಸ್ಟರ್ ಡಿಪೆಂಡಬಲ್' ಮುಷ್ಫಿಕರ್ ರಹೀಮ್, ತಮ್ಮ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳಲು ಸಜ್ಜಾಗಿದ್ದಾರೆ. 2005ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ್ದ ಈ ದಿಗ್ಗಜ, 2027ರ ಫೆಬ್ರವರಿಯಲ್ಲಿ ಅದೇ ಇಂಗ್ಲೆಂಡ್ ತಂಡದ ವಿರುದ್ಧ ಮೀರ್‌ಪುರದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.

21 ವರ್ಷಗಳ ಸುದೀರ್ಘ ಟೆಸ್ಟ್ ಕೆರಿಯರ್​ಗೆ ಗುಡ್ ಬೈ!
Mushfiqur RahimImage Credit source: GettyImages
ಝಾಹಿರ್ ಯೂಸುಫ್
|

Updated on: Nov 29, 2026 | 10:48 AM

Share

ಬಾಂಗ್ಲಾದೇಶ್ ಕ್ರಿಕೆಟ್‌ನ ದಿಗ್ಗಜ ಹಾಗೂ ಹಿರಿಯ ವಿಕೆಟ್‌ಕೀಪರ್-ಬ್ಯಾಟರ್ ಮುಷ್ಫಿಕರ್ ರಹೀಮ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ವರ್ಷದ ಫೆಬ್ರವರಿ 14, 2027 ರಂದು ಮಿರ್​ಪುರ್​ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರ ಸರಿಯಲಿದ್ದಾರೆ.

ಈ ಮಹತ್ವದ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಅಧ್ಯಕ್ಷ ತಮೀಮ್ ಇಕ್ಬಾಲ್ ಅವರು ಅಧಿಕೃತವಾಗಿ ದೃಢಪಡಿಸಿದ್ದಾರೆ. 39 ವರ್ಷದ ಮುಷ್ಫಿಕರ್ ಅವರ 21 ವರ್ಷಗಳ ಸುದೀರ್ಘ ಮತ್ತು ಸ್ಮರಣೀಯ ಅಂತಾರಾಷ್ಟ್ರೀಯ ಪಯಣಕ್ಕೆ ಈ ಮೂಲಕ ತೆರೆ ಬೀಳಲಿದೆ.

ಆರಂಭ ಮತ್ತು ಅಂತ್ಯ ಒಂದೇ ಎದುರಾಳಿ!

ಮುಷ್ಫಿಕರ್ ರಹೀಮ್ ಅವರ ವೃತ್ತಿಜೀವನವು ಒಂದು ಅಪರೂಪದ ವೃತ್ತವನ್ನು ಪೂರ್ಣಗೊಳಿಸುತ್ತಿದೆ. 2005ರ ಮೇ ತಿಂಗಳಿನಲ್ಲಿ ಕೇವಲ 18 ವರ್ಷದ ಯುವಕನಾಗಿದ್ದಾಗ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು, ಇದೀಗ 21 ವರ್ಷಗಳ ಬಳಿಕ ಅದೇ ಇಂಗ್ಲೆಂಡ್ ತಂಡದ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.

ಯಾವುದೇ ಸುದ್ದಿಗೋಷ್ಠಿ ಅಥವಾ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮೂಲಕ ವಿದಾಯ ಹೇಳುವ ಬದಲು, ಬಿಸಿಬಿ ಅಧ್ಯಕ್ಷ ತಮೀಮ್ ಇಕ್ಬಾಲ್ ಅವರಿಗೆ ವೈಯಕ್ತಿಕವಾಗಿ ತಿಳಿಸಿ, ಮಂಡಳಿಯ ಮೂಲಕವೇ ಅಧಿಕೃತ ಪ್ರಕಟಣೆ ಹೊರಡಿಸುವಂತೆ ಮುಷ್ಫಿಕರ್ ಮನವಿ ಮಾಡಿದ್ದರು.

ಮೂರು ಮಾದರಿಗಳಿಗೆ ವಿದಾಯ:

ಈಗಾಗಲೇ 2022ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಾಗೂ 2025ರ ಮಾರ್ಚ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಮುಷ್ಫಿಕರ್, ಟೆಸ್ಟ್ ಮಾದರಿಯಲ್ಲಿ ಮಾತ್ರ ಮುಂದುವರಿದಿದ್ದರು. ಇದೀಗ ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸರಣಿಯ ಮೊದಲ ಪಂದ್ಯದೊಂದಿಗೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ. ಅವರ ಸೇವೆಯನ್ನು ಗೌರವಿಸಲು ಬಿಸಿಬಿ ಈ ಪಂದ್ಯದ ವೇಳೆ ವಿಶೇಷ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.

ದಾಖಲೆಗಳ ಸರದಾರ:

ಬಾಂಗ್ಲಾದೇಶ್ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಮತ್ತು ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ಮುಷ್ಫಿಕರ್ ನಿವೃತ್ತರಾಗುತ್ತಿದ್ದಾರೆ. ಅವರ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ:

100+ ಟೆಸ್ಟ್ ಪಂದ್ಯಗಳು: ಒಟ್ಟು 108 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, ಬಾಂಗ್ಲಾದೇಶದ ಪರ 100 ಟೆಸ್ಟ್ ಆಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

7,000+ ರನ್‌ಗಳ ಸಾಧನೆ: 38.80ರ ಸರಾಸರಿಯಲ್ಲಿ 7,062 ರನ್ ಗಳಿಸಿದ್ದು, 7,000 ಟೆಸ್ಟ್ ರನ್ ಪೂರೈಸಿದ ಬಾಂಗ್ಲಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಶತಕ ಮತ್ತು ದ್ವಿಶತಕಗಳು: ಟೆಸ್ಟ್‌ನಲ್ಲಿ ಬಾಂಗ್ಲಾ ಪರ ಅತಿ ಹೆಚ್ಚು ಅಂದರೆ 14 ಶತಕಗಳು ಮತ್ತು 30 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ, ಬಾಂಗ್ಲಾದೇಶದ ಪರ ಮೊದಲ ಟೆಸ್ಟ್ ದ್ವಿಶತಕ (2013ರಲ್ಲಿ) ಬಾರಿಸಿದ ಕೀರ್ತಿಯೂ ಇವರದ್ದಾಗಿದೆ. ಇವರ ಖಾತೆಯಲ್ಲಿ ಒಟ್ಟು 3 ದ್ವಿಶತಕಗಳಿದ್ದು, ಅಜೇಯ 219 ರನ್ ಗರಿಷ್ಠ ಮೊತ್ತವಾಗಿದೆ.

ಯಶಸ್ವಿ ನಾಯಕ: 2011ರಿಂದ 2017ರವರೆಗೆ 34 ಟೆಸ್ಟ್ ಪಂದ್ಯಗಳಲ್ಲಿ ಬಾಂಗ್ಲಾದೇಶ್ ತಂಡವನ್ನು ಮುನ್ನಡೆಸಿದ್ದು, ದೀರ್ಘಾವಧಿಯ ಟೆಸ್ಟ್ ನಾಯಕ ಎನಿಸಿಕೊಂಡಿದ್ದಾರೆ. ಇವರ ನಾಯಕತ್ವದಲ್ಲೇ ಬಾಂಗ್ಲಾ ತಂಡ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಚೊಚ್ಚಲ ಟೆಸ್ಟ್ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: ಏನಿದು ‘ಕಂಕಷನ್ ಸಬ್‌ಸ್ಟಿಟ್ಯೂಟ್’ ನಿಯಮ? ಇದರ ನಿಬಂಧನೆಗಳೇನು?

ಒಟ್ಟಾರೆಯಾಗಿ, ಬಾಂಗ್ಲಾದೇಶ ಕ್ರಿಕೆಟ್‌ನ ಬೆನ್ನೆಲುಬಾಗಿದ್ದ ‘ಮಿಸ್ಟರ್ ಡಿಪೆಂಡಬಲ್’ ಮುಷ್ಫಿಕರ್ ರಹೀಮ್ ಅವರ ನಿರ್ಗಮನ ಬಾಂಗ್ಲಾ ಕ್ರಿಕೆಟ್‌ನಲ್ಲಿ ಒಂದು ದೊಡ್ಡ ಶೂನ್ಯವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಸತತ ಎರಡು ದಶಕಗಳ ಕಾಲ ತಂಡದ ಸಂಕಷ್ಟದ ಸಮಯದಲ್ಲಿ ಆಪದ್ಬಾಂಧವನಂತೆ ನಿಂತಿದ್ದ ಈ ದಿಗ್ಗಜನ ಸ್ಥಾನವನ್ನು ತುಂಬುವುದು ಅಷ್ಟು ಸುಲಭವಲ್ಲ ಎಂಬುದೇ ಸತ್ಯ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More