ಮನೆ ಹೆಣ್ಮಕ್ಕಳಂತೆ ಸಾಕಿರುವ ‘ಗಂಗೆ – ಗೌರಿ’ ಹಸುಗಳಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ರೈತ
ಹುಬ್ಬಳ್ಳಿ ತಾಲೂಕಿನ ಬಿಡನಾಳ ಗ್ರಾಮದ ರೈತ ನಿಂಗಪ್ಪ ಯಲಿಗಾರ್ ತಮ್ಮ ಮನೆಯಲ್ಲಿನ ಗಂಗೆ ಮತ್ತು ಗೌರಿ ಎಂಬ ಎರಡು ಗರ್ಭಿಣಿ ಹಸುಗಳಿಗೆ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮ ಆಯೋಜಿಸಿದರು. ಶಾಸ್ತ್ರೋಕ್ತವಾಗಿ ನೆರವೇರಿದ ಸೀಮಂತದಲ್ಲಿ ಗ್ರಾಮಸ್ಥರು, ಬಂಧುಗಳು, ಮಠಾಧೀಶರು ಪಾಲ್ಗೊಂಡರು. ಬಳಿಕ ಹಸುಗಳನ್ನು ಅಲಂಕರಿಸಿ ಗ್ರಾಮದಾದ್ಯಂತ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಈ ವಿನೂತನ ಗೋಪೂಜೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಧಾರವಾಡ, ನ.29: ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಮಾಡುವ ಸೀಮಂತ ಕಾರ್ಯಕ್ರಮವನ್ನು, ಹುಬ್ಬಳ್ಳಿ ತಾಲೂಕಿನ ಬಿಡನಾಳ ಗ್ರಾಮದ ರೈತ ನಿಂಗಪ್ಪ ಯಲಿಗಾರ್ ಅವರು ತಮ್ಮ ಮನೆಯಲ್ಲಿನ ಎರಡು ಹಸುಗಳಿಗೆ ನೆರವೇರಿಸಿ ಗಮನ ಸೆಳೆದಿದ್ದಾರೆ. ತಮ್ಮ ಕುಟುಂಬದ ಸದಸ್ಯರಂತೆಯೇ ಇರುವ ಗಂಗೆ ಮತ್ತು ಗೌರಿ ಎಂಬ ಎರಡು ಗರ್ಭಿಣಿ ಹಸುಗಳಿಗೆ ನಿಂಗಪ್ಪ ಯಲಿಗಾರ್ ಅವರು ಶಾಸ್ತ್ರೋಕ್ತವಾಗಿ ಸೀಮಂತ ಆಯೋಜಿಸಿದ್ದರು. ಒಂದು ಹಸು ಆರು ತಿಂಗಳ ಗರ್ಭಿಣಿಯಾಗಿದ್ದರೆ, ಇನ್ನೊಂದು ಎಂಟು ತಿಂಗಳ ಗರ್ಭಿಣಿಯಾಗಿದೆ. ಶುಭ ಮುಹೂರ್ತದಲ್ಲಿ ಸೀಮಂತ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಗರ್ಭಿಣಿ ಮಹಿಳೆಯರಿಗೆ ಮಾಡುವಂತೆಯೇ ಹಸುಗಳಿಗೂ ಹೊಸ ಬಟ್ಟೆ ತೊಡಿಸಿ, ಮಹಿಳೆಯರು ಆರತಿ ಬೆಳಗಿ, ಕುಂಕುಮ ಹಚ್ಚಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ನಿಂಗಪ್ಪ ಯಲಿಗಾರ್ ಅವರ ಸಂಬಂಧಿಕರು, ಗ್ರಾಮಸ್ಥರು ಹಾಗೂ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಸೀಮಂತದ ಬಳಿಕ ಹಸುಗಳನ್ನು ಅಲಂಕರಿಸಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಉತ್ತರ ಕರ್ನಾಟಕದ ಸುಪ್ರಸಿದ್ಧ ಕರಡಿ ಮಜಲು ವಾದ್ಯಮೇಳದೊಂದಿಗೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಗೋಮಾತೆಯನ್ನು ಕುಟುಂಬದ ಸದಸ್ಯರಂತೆ ಪೂಜಿಸುವ ಈ ರೈತನ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ನಿಂಗಪ್ಪ ಯಲಿಗಾರ್ ಈ ಹಿಂದೆ ಕೂಡ ತಮ್ಮ ಹಸುಗಳಿಗೆ ಸೀಮಂತ ಆಚರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

