AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ vs ಬೆಳ್ಳಿ: 2027ರಲ್ಲಿ ಹೆಚ್ಚು ಲಾಭ ತಂದುಕೊಡೋದು ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

2026ರ ನವೆಂಬರ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರಿ ಕುಸಿತದ ಬಳಿಕ ಮತ್ತೆ ಚೇತರಿಸಿಕೊಂಡಿವೆ. 2027ರಲ್ಲಿ ಬೆಳ್ಳಿ ಹೆಚ್ಚಿನ ಲಾಭ ನೀಡುವ ಸಾಧ್ಯತೆಯಿದ್ದರೂ, ಚಿನ್ನ ಸ್ಥಿರ ಹೂಡಿಕೆಯ ಆಯ್ಕೆಯಾಗಿ ಉಳಿಯಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕದ ಬಡ್ಡಿದರ ನೀತಿ, ಡಾಲರ್ ಮೌಲ್ಯ ಮತ್ತು ಕೈಗಾರಿಕಾ ಬೇಡಿಕೆ ಎರಡೂ ಲೋಹಗಳ ಬೆಲೆಯನ್ನು ನಿರ್ಧರಿಸಲಿವೆ.

ಚಿನ್ನ vs ಬೆಳ್ಳಿ: 2027ರಲ್ಲಿ ಹೆಚ್ಚು ಲಾಭ ತಂದುಕೊಡೋದು ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: PTI
ಗಣಪತಿ ಶರ್ಮಾ
|

Updated on: Nov 28, 2026 | 8:21 AM

Share

ಮುಖ್ಯಾಂಶಗಳು

  • ನವೆಂಬರ್‌ನಲ್ಲಿ ಚಿನ್ನಕ್ಕಿಂತ ಬೆಳ್ಳಿಯ ಬೆಲೆಯೇ ಹೆಚ್ಚು ಕುಸಿತ
  • 2027ರಲ್ಲಿ ಬೆಳ್ಳಿಗೆ ಹೆಚ್ಚಿನ ಲಾಭದ ಸಾಧ್ಯತೆ
  • ಸ್ಥಿರ ಹೂಡಿಕೆಗೆ ಚಿನ್ನ, ಹೆಚ್ಚಿನ ರಿಸ್ಕ್ ಹೂಡಿಕೆಗೆ ಬೆಳ್ಳಿ ಬೆಸ್ಟ್ ಎನ್ನುತ್ತಾರೆ ತಜ್ಞರು

ಚಿನ್ನ ಮತ್ತು ಬೆಳ್ಳಿ ಬೆಲೆಗಳು 2026ರ ನವೆಂಬರ್‌ನಲ್ಲಿ ಭಾರಿ ಏರಿಳಿತ ಕಂಡಿವೆ. ಜನವರಿಯಲ್ಲಿ ಗರಿಷ್ಠ ಮಟ್ಟ ದಾಖಲಿಸಿದ್ದ ಈ ಎರಡೂ ಲೋಹಗಳು, ದಿಢೀರ್ ಕುಸಿತ ಕಂಡಿವೆ. ಆದಾಗ್ಯೂ, ತಿಂಗಳ ಕೊನೆಯಲ್ಲಿ ಮತ್ತೆ ಚೇತರಿಕೆ ಕಂಡಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, 2027ರಲ್ಲಿ ಹೂಡಿಕೆದಾರರಿಗೆ ಚಿನ್ನ ಉತ್ತಮ ಆಯ್ಕೆಯಾಗಲಿದೆಯೇ ಅಥವಾ ಬೆಳ್ಳಿ ಹೆಚ್ಚು ಲಾಭ ನೀಡಲಿದೆಯೇ ಎಂಬ ಕುತೂಹಲ ಮೂಡಿದೆ.

ನವೆಂಬರ್‌ನಲ್ಲಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸುಮಾರು ಶೇ 13ರಷ್ಟು ಕುಸಿದಿದ್ದರೆ, ಬೆಳ್ಳಿ ಬೆಲೆ ಸುಮಾರು ಶೇ 20ರಷ್ಟು ಇಳಿಕೆಯಾಗಿತ್ತು. ಅಮೆರಿಕದ ಡಾಲರ್ ಬಲಗೊಳ್ಳುವುದು, ಬಾಂಡ್ ಇಳುವರಿ ಹೆಚ್ಚಳ ಮತ್ತು ಬಡ್ಡಿದರ ಕಡಿತದ ನಿರೀಕ್ಷೆಗಳು ಕಡಿಮೆಯಾಗಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ಆದರೆ ನವೆಂಬರ್ 27ರಂದು ಎರಡೂ ಲೋಹಗಳು ಮತ್ತೆ ಚೇತರಿಸಿಕೊಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ 2.7ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 3,663.52 ಡಾಲರ್ ತಲುಪಿದೆ. ಬೆಳ್ಳಿ ಬೆಲೆ ಶೇ 6.5ರಷ್ಟು ಹೆಚ್ಚಳವಾಗಿ 44.18 ಡಾಲರ್‌ಗೆ ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಡಿಸೆಂಬರ್ ಫ್ಯೂಚರ್ಸ್ 10 ಗ್ರಾಂಗೆ ₹1,24,856ಕ್ಕೆ, ಬೆಳ್ಳಿ ಕೆ.ಜಿ.ಗೆ ₹1,53,579ಕ್ಕೆ ವಹಿವಾಟು ನಡೆಸಿದೆ.

2027ರಲ್ಲಿ ಚಿನ್ನದ ಬೆಲೆ ಮೇಲೆ ಯಾವ ಅಂಶಗಳು ಪರಿಣಾಮ ಬೀರಲಿವೆ?

ಅಮೆರಿಕದ ಬಡ್ಡಿದರ ನೀತಿ, ಡಾಲರ್ ಮೌಲ್ಯ ಮತ್ತು ಹಣದುಬ್ಬರದ ದಿಕ್ಕು ಮುಂದಿನ ವರ್ಷ ಚಿನ್ನದ ಬೆಲೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ. ಬಡ್ಡಿದರಗಳು ಇಳಿಕೆಯಾಗುವ ನಿರೀಕ್ಷೆ ಹೆಚ್ಚಾದರೆ ಡಾಲರ್ ದುರ್ಬಲಗೊಳ್ಳಬಹುದು. ಇದು ಚಿನ್ನದ ಬೆಲೆಗೆ ಬೆಂಬಲ ನೀಡುವ ಸಾಧ್ಯತೆಯಿದೆ.

ಕೇಂದ್ರ ಬ್ಯಾಂಕ್‌ಗಳ ಚಿನ್ನದ ಖರೀದಿ, ಜಾಗತಿಕ ರಾಜಕೀಯ ಅನಿಶ್ಚಿತತೆ ಮತ್ತು ಹೂಡಿಕೆ ಬೇಡಿಕೆಯೂ ಚಿನ್ನಕ್ಕೆ ನೆರವಾಗಬಹುದು. 2026ರ ಮೊದಲ ಒಂಬತ್ತು ತಿಂಗಳಲ್ಲಿ ಕೇಂದ್ರ ಬ್ಯಾಂಕ್‌ಗಳು ಒಟ್ಟು 675 ಟನ್ ಚಿನ್ನ ಖರೀದಿಸಿವೆ ಎಂದು ‘ಕೊಟಕ್ ನಿಯೋ’ ವಿಶ್ಲೇಷಕಿ ಕಯ್ನತ್ ಚೈನ್‌ವಾಲಾ ತಿಳಿಸಿರುವುದಾಗಿ ‘ಲೈವ್ ಮಿಂಟ್ ಡಾಟ್ ಕಾಮ್ ’ ವರದಿ ಉಲ್ಲೇಖಿಸಿದೆ.

ಬೆಳ್ಳಿಗೆ ಹೆಚ್ಚು ಲಾಭದ ಅವಕಾಶವಿದೆಯೇ?

2027ರಲ್ಲಿ ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚಿನ ಲಾಭ ನೀಡುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನ-ಬೆಳ್ಳಿ ಅನುಪಾತ ಈಗ ಸುಮಾರು 87ರಷ್ಟಿದ್ದು, ಐತಿಹಾಸಿಕ ಸರಾಸರಿ 60ರಿಂದ 70ರ ಮಟ್ಟದಲ್ಲಿದೆ. ಈ ಅನುಪಾತ ಕಡಿಮೆಯಾದರೆ ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆ ಹೆಚ್ಚು ಏರಿಕೆಯಾಗುವ ಅವಕಾಶವಿದೆ ಎಂದು ವರದಿ ಉಲ್ಲೇಖಿಸಿದೆ.

ಬೆಳ್ಳಿಯ ಬೆಲೆ ಏರಿಕೆ, ಕುಸಿತಕ್ಕೆ ಕಾರಣವಾಗಬಲ್ಲ ಅಂಶ ಯಾವುದು?

ಸೌರಶಕ್ತಿ, ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಾನಿಕ್ಸ್ ಮತ್ತು ವಿದ್ಯುತ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚುತ್ತಿರುವುದು ದೀರ್ಘಕಾಲೀನ ಬೇಡಿಕೆಗೆ ಬೆಂಬಲ ನೀಡಬಹುದು. ಆದರೆ ಕೈಗಾರಿಕಾ ಬೇಡಿಕೆ ಕುಸಿದರೆ ಬೆಳ್ಳಿಯ ಬೆಲೆಯೂ ತೀವ್ರವಾಗಿ ಇಳಿಯಬಹುದು.

ಹೂಡಿಕೆದಾರರು ಯಾವುದನ್ನು ಆಯ್ಕೆ ಮಾಡಬೇಕು?

ಸ್ಥಿರತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುವವರಿಗೆ ಚಿನ್ನ ಸೂಕ್ತ ಆಯ್ಕೆಯಾಗಬಹುದು. ಹೆಚ್ಚಿನ ಲಾಭದ ನಿರೀಕ್ಷೆಯೊಂದಿಗೆ ಬೆಲೆ ಏರಿಳಿತದ ಅಪಾಯವನ್ನು ಎದುರಿಸಲು ಸಿದ್ಧರಿರುವವರಿಗೆ ಬೆಳ್ಳಿ ಆಕರ್ಷಕವಾಗಬಹುದು. ಆದರೆ ಬೆಳ್ಳಿಯ ಬೆಲೆ ಚಿನ್ನಕ್ಕಿಂತ ಹೆಚ್ಚು ಏರಿಳಿತ ಹೊಂದಿರುತ್ತದೆ.

ಇದನ್ನೂ ಓದಿ: ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವುದು ಸುರಕ್ಷಿತವೇ? ಈ ವಿಷ್ಯಗಳು ನಿಮ್ಗೆ ತಿಳಿದಿರಲಿ

(ಮಾಹಿತಿಯ ಉದ್ದೇಶದಿಂದ ಈ ಸುದ್ದಿ ಪ್ರಕಟಿಸಲಾಗಿದೆ. ಹೂಡಿಕೆ ಮಾಡುವ ಮುನ್ನ ತಜ್ಞರೊಂದಿಗೆ ಸಮಾಲೋಚಿಸುವುದು ಉತ್ತಮ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More