April Fool’s Day: ಮೂರ್ಖರ ದಿನವಾದ ಇಂದು ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ ನ್ಯಾಷನಲ್ ಜುಮ್ಲಾ ಡೇ ಹ್ಯಾಷ್​ಟ್ಯಾಗ್​; ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವ್ಯಂಗ್ಯ

|

Updated on: Apr 01, 2021 | 3:00 PM

ಅಚ್ಛೆ ದಿನ್​, ಜಿಡಿಪಿ ಬೆಳವಣಿಗೆ, ನೀರಾವರಿ, ರೈತರ ಆದಾಯ ದ್ವಿಗುಣ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ದೇಶ.. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜುಮ್ಲಾಗಳು. ಬನ್ನಿ ನಾವಿವತ್ತು ಅಂದರೆ ಏಪ್ರಿಲ್​ 1ನ್ನು ರಾಷ್ಟ್ರೀಯ ಜುಮ್ಲಾದಿನವನ್ನಾಗಿ ಆಚರಿಸೋಣ ಎಂದು ಕಿಸಾನ್​ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.

April Fools Day: ಮೂರ್ಖರ ದಿನವಾದ ಇಂದು ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ ನ್ಯಾಷನಲ್ ಜುಮ್ಲಾ ಡೇ ಹ್ಯಾಷ್​ಟ್ಯಾಗ್​; ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವ್ಯಂಗ್ಯ
ಟ್ವಿಟರ್​​ನಲ್ಲಿ ವೈರಲ್ ಆಗುತ್ತಿರುವ ಮೀಮ್ಸ್​ಗಳು
Follow us on

ಏಪ್ರಿಲ್​ 1ನೇ ತಾರೀಖೆಂದರೆ ಮೂರ್ಖರ ದಿನ. ಈ ದಿನ ಒಬ್ಬರು ಇನ್ನೊಬ್ಬರನ್ನು ಆರೋಗ್ಯಕರವಾಗಿ ಪ್ರ್ಯಾಂಕ್ ಮಾಡುತ್ತಾರೆ. ಕಾಲೆಳೆದು ಮಜಾ ತೆಗೆದುಕೊಳ್ಳುತ್ತಾರೆ. ಆದರೆ ಕಾಂಗ್ರೆಸ್​ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರನ್ನು, ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಲು ಈ ದಿನವನ್ನು ಬಳಸಿಕೊಳ್ಳುತ್ತಿದೆ. 2019ರ ಏಪ್ರಿಲ್​ 1ರಂದು ಕಾಂಗ್ರೆಸ್, ಫೇಕು ದಿವಸ್​, ಮೋದಿ ಮತ್ ಬನಾವೋ ಎಂಬ ಹ್ಯಾಷ್​ಟ್ಯಾಗ್​​ನಡಿ ಮೋದಿಯವರನ್ನು ಟೀಕೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಬಿಜೆಪಿ, ಪಪ್ಪು ದಿವಸ್​ ಎಂಬ ಹ್ಯಾಷ್​ಟ್ಯಾಗ್​ನಡಿ ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡಿತ್ತು. ಹಾಗೇ, ಈ ಬಾರಿ ಇಂದು ನ್ಯಾಷನಲ್ ಜುಮ್ಲಾ ಡೇ ಎಂಬ ಹ್ಯಾಷ್​ಟ್ಯಾಗ್​ ಟ್ವಿಟರ್​​ನಲ್ಲಿ ಟ್ರೆಂಡ್ ಆಗುತ್ತಿದೆ. ಜುಮ್ಲಾ ಎಂದರೆ ಸುಳ್ಳು ಆಶ್ವಾಸನೆಗಳು ಎಂದರ್ಥ.

ಈ ಜುಮ್ಲಾ ಎಂಬ ಪದವನ್ನು ಫೇಮಸ್​ ಮಾಡಿದ್ದೇ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ. 2018ರಲ್ಲಿ ಲೋಕಸಭೆಯಲ್ಲಿ ಮೋದಿ ವಿರುದ್ಧ ಮಾತನಾಡುತ್ತ ಜುಮ್ಲಾ ಶಬ್ದವನ್ನು ಬಳಸಿದ್ದರು. ಇಂದು ಏಪ್ರಿಲ್​ 1ರ ಮೂರ್ಖರ ದಿನದಂದು ಮತ್ತೆ ನ್ಯಾಷನಲ್ ಜುಮ್ಲಾ ಡೇ ಎಂಬ ಹ್ಯಾಷ್​ಟ್ಯಾಗ್​ ಮೂಲಕ ಜನಸಾಮಾನ್ಯರೂ ಸಹ ಬಿಜೆಪಿ ಸರ್ಕಾರವನ್ನು ಹಾಸ್ಯ ಮಾಡುತ್ತಿದ್ದಾರೆ. ಬಿಜೆಪಿ, ಮೋದಿ, ಅಮಿತ್​ ಶಾ ಸೇರಿ ಹಲವು ನಾಯಕರನ್ನು ವ್ಯಂಗ್ಯ ಮಾಡುವ ಸಾವಿರಾರು ಮೀಮ್ಸ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ವಿದೇಶದಲ್ಲಿ ಭಾರತದ ಕೆಲವರು ಕೂಡಿಟ್ಟಿರುವ ಕಪ್ಪುಹಣವನ್ನು ವಾಪಸ್ ತಂದು, ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂಬ ಮೋದಿಯವರ ಹೇಳಿಕೆಯಿಂದ ಹಿಡಿದು, ಮಹಿಳಾ ಸುರಕ್ಷತೆ, ಖಾಸಗೀಕರಣ..ದಂತಹ ಹತ್ತುಹಲವು ವಿಷಯಗಳನ್ನು ಇಂದು ನೆಟ್ಟಿಗರು ಟ್ವಿಟರ್​ನಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಅಚ್ಛೆ ದಿನ್​, ಜಿಡಿಪಿ ಬೆಳವಣಿಗೆ, ನೀರಾವರಿ, ರೈತರ ಆದಾಯ ದ್ವಿಗುಣ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ದೇಶ.. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜುಮ್ಲಾಗಳು. ಬನ್ನಿ ನಾವಿವತ್ತು ಅಂದರೆ ಏಪ್ರಿಲ್​ 1ನ್ನು ರಾಷ್ಟ್ರೀಯ ಜುಮ್ಲಾದಿನವನ್ನಾಗಿ ಆಚರಿಸೋಣ ಎಂದು ಕಿಸಾನ್​ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ. ಹಾಗೇ, ಕಾಂಗ್ರೆಸ್​ನ ರಾಷ್ಟ್ರೀಯ ಸಮನ್ವಯಾಧಿಕಾರಿ ಗೌರವ್​ ಪಾಂಡಿ, ರಾಷ್ಟ್ರೀಯ ಅಭಿಯಾನ ಉಸ್ತುವಾರಿ ಶ್ರೀವತ್ಸಾ ಕೂಡ ನ್ಯಾಷನಲ್​ ಜುಮ್ಲಾ ಡೇ ಹ್ಯಾಷ್​ಟ್ಯಾಗ್​ನಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ರನ್ನು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​ ಸದಾ ಒಂದಿಲ್ಲೊಂದು ಕಾರಣಕ್ಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡುತ್ತಲೇ ಬಂದಿದೆ. ಈ ಹಿಂದೆ ಸೆಪ್ಟೆಂಬರ್ 17- ಪ್ರಧಾನಿ ಮೋದಿಯವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಹೇಳಿತ್ತು.

Published On - 2:59 pm, Thu, 1 April 21