
ಬಸ್ತರ್, ನವೆಂಬರ್ 08: ಒಂದು ಕಾಲದಲ್ಲಿ ನಕ್ಸಲ್ ಹಿಂಸಾಚಾರದಿಂದ ನಲುಗಿದ್ದ ಛತ್ತೀಸ್‌ಗಢದ ಬಸ್ತರ್‌ನಲ್ಲಿ ಈ ಬಾರಿ ದೀಪಾವಳಿ ಸಂಭ್ರಮ ಮನೆಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಪಡೆಗಳ ಯೋಧರೊಂದಿಗೆ ದೀಪಾವಳಿ ಆಚರಿಸಿ, ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಅವರ ಶೌರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ಕೊಂಡಾಡಿದ್ದಾರೆ. ದೇಶದಲ್ಲಿ ನಕ್ಸಲ್ ಪ್ರಭಾವ ಸಂಪೂರ್ಣವಾಗಿ ಅಂತ್ಯಗೊಂಡ ಬಳಿಕ ಆಚರಿಸುತ್ತಿರುವ ಮೊದಲ ದೀಪಾವಳಿ ಇದು ಎಂದು ಪ್ರಧಾನಿ ಹೇಳಿದ್ದಾರೆ.
ಒಂದು ಕಾಲದಲ್ಲಿ 20 ರಾಜ್ಯಗಳಲ್ಲಿ ನಕ್ಸಲರ ಪ್ರಭಾವ
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ನಕ್ಸಲಿಸಂ ವಿರುದ್ಧದ ಹೋರಾಟದ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ದೇಶದ 20 ರಾಜ್ಯಗಳ 230ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳ ಪ್ರಭಾವವಿತ್ತು. ಅನೇಕ ಗ್ರಾಮಗಳಲ್ಲಿ ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದರು. ರಾತ್ರಿ ವೇಳೆ ಮನೆಯಿಂದ ಹೊರಬರಲು ಕೂಡ ಆತಂಕ ಪಡಬೇಕಾದ ಪರಿಸ್ಥಿತಿ ಇತ್ತು. ಜನರು ಸ್ವತಂತ್ರವಾಗಿ ಮತದಾನ ಮಾಡುವುದಕ್ಕೂ ನಕ್ಸಲರ ಬೆದರಿಕೆ ಎದುರಿಸಬೇಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
2010ರಲ್ಲಿ ಛತ್ತೀಸ್‌ಗಢದ ದಂತೇವಾಡದಲ್ಲಿ ನಡೆದ ಭೀಕರ ದಾಳಿಯಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಇಂತಹ ಹಲವು ದಾಳಿಗಳಲ್ಲಿ ಭದ್ರತಾ ಪಡೆಗಳ ಯೋಧರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಐಇಡಿ ಸ್ಫೋಟಗಳಿಂದ ಅನೇಕ ಯೋಧರು ಗಂಭೀರವಾಗಿ ಗಾಯಗೊಂಡು ಕೈಕಾಲುಗಳನ್ನು ಕಳೆದುಕೊಂಡಿದ್ದರು. ದಶಕಗಳ ಕಾಲ ಈ ಹೋರಾಟ ಮುಂದುವರಿದಿತ್ತು.
ಇದನ್ನೂ ಓದಿ: ನಕ್ಸಲ್ ಅಂದ್ರೆ ದೇಶಪ್ರೇಮಿಗಳು, ಸಮಾನತೆಗಾಗಿ ಹೋರಾಟ ಮಾಡ್ತಿರೋರು: ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ
2014ರ ನಂತರ ಬದಲಾದ ಕಾರ್ಯತಂತ್ರ: ಮೋದಿ
ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಹಿಂದಿನ ಸರ್ಕಾರಗಳಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು ಎಂದು ಮೋದಿ ಟೀಕಿಸಿದ್ದಾರೆ. 2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭದ್ರತಾ ಪಡೆಗಳಿಗೆ ಕಾರ್ಯಾಚರಣೆ ನಡೆಸಲು ಹೆಚ್ಚಿನ ಸ್ವಾತಂತ್ರ್ಯ ನೀಡಲಾಯಿತು. ನಕ್ಸಲರಿಗೆ ಸಿಗುತ್ತಿದ್ದ ಬೆಂಬಲ ಮತ್ತು ಅವರ ಜಾಲವನ್ನು ದುರ್ಬಲಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.
“ಒಂದು ಕಾಲದಲ್ಲಿ ನಕ್ಸಲರ ದಾಳಿಗಳಲ್ಲಿ ಹುತಾತ್ಮರಾಗುತ್ತಿದ್ದ ನಮ್ಮ ಯೋಧರ ಸಂಖ್ಯೆ, ಹತರಾಗುತ್ತಿದ್ದ ನಕ್ಸಲರ ಸಂಖ್ಯೆಗಿಂತ ಹೆಚ್ಚಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸರಿಯಾದ ಉದ್ದೇಶ ಮತ್ತು ಸೂಕ್ತ ನೀತಿಗಳಿಂದ ಈ ಯಶಸ್ಸು ಸಾಧ್ಯವಾಗಿದೆ. ಇದು ಯೋಧರ ಶೌರ್ಯ, ಧೈರ್ಯ ಮತ್ತು ಸಂಯಮದ ಗೆಲುವು” ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.
47 ವರ್ಷಗಳಲ್ಲಿ ಮೊದಲ ಬಾರಿಗೆ ಸಿಆರ್‌ಪಿಎಫ್‌ಗೆ ಮಹತ್ವದ ಸಾಧನೆ
ಸಿಆರ್‌ಪಿಎಫ್ ಕಳೆದ 12 ತಿಂಗಳುಗಳಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ ಒಬ್ಬ ಸಿಬ್ಬಂದಿಯನ್ನೂ ಕಳೆದುಕೊಂಡಿಲ್ಲ. 47 ವರ್ಷಗಳ ಬಳಿಕ ಮೊದಲ ಬಾರಿಗೆ ಇಂತಹ ಸಾಧನೆ ಮಾಡಿದೆ ಎಂದು ವರದಿಯಾಗಿದೆ. ಆಧುನಿಕ ಉಪಕರಣಗಳು, ಉತ್ತಮ ತರಬೇತಿ, ಕಾರ್ಯತಂತ್ರದ ಯೋಜನೆ ಮತ್ತು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಈ ಸಾಧನೆಗೆ ನೆರವಾಗಿದೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.
ನಕ್ಸಲ್ ಹಿಂಸಾಚಾರವನ್ನು ಅಂತ್ಯಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ 2026ರ ಮಾರ್ಚ್ 31ಕ್ಕೆ ನಿಗದಿಪಡಿಸಿತ್ತು. ಆ ದಿನ ದೇಶದಲ್ಲಿ ನಕ್ಸಲ್ ಸಮಸ್ಯೆಯನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತು. ಹಲವು ಪ್ರಮುಖ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತರಾಗಿದ್ದು, ನೂರಾರು ಮಂದಿ ಶರಣಾಗಿದ್ದರು.
ಆದರೆ ನಕ್ಸಲ್ ಪ್ರಭಾವ ಅಂತ್ಯಗೊಂಡಿದೆ ಎಂಬ ಘೋಷಣೆಯಷ್ಟೇ ಸಾಕಾಗುವುದಿಲ್ಲ. ಹಿಂದೆ ಹಿಂಸಾಚಾರದಿಂದ ಹಿಂದುಳಿದಿದ್ದ ಪ್ರದೇಶಗಳಿಗೆ ರಸ್ತೆ, ವಿದ್ಯುತ್, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಂಪರ್ಕ ವ್ಯವಸ್ಥೆ ತಲುಪಿಸುವುದೂ ಅಷ್ಟೇ ಮುಖ್ಯ. ಬಸ್ತರ್‌ನಲ್ಲಿ ಭದ್ರತಾ ಶಿಬಿರಗಳನ್ನು ಜನಸೇವಾ ಕೇಂದ್ರಗಳಾಗಿ ಪರಿವರ್ತಿಸಿ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನಗಳೂ ನಡೆಯುತ್ತಿವೆ.
ವಿಡಿಯೋ
ಯೋಧರೇ ನನ್ನ ಕುಟುಂಬ: ಮೋದಿ
“ದೇಶದ ಪ್ರತಿಯೊಬ್ಬ ಯೋಧನೂ ನನ್ನ ಕುಟುಂಬದ ಸದಸ್ಯ. ನೀವು ನಿಮ್ಮ ಕುಟುಂಬದಿಂದ ದೂರವಿದ್ದು ದೇಶದ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮ ತ್ಯಾಗ ಮತ್ತು ಸೇವೆಗೆ ನಾನು ತಲೆಬಾಗುತ್ತೇನೆ” ಎಂದು ಮೋದಿ ಹೇಳಿದ್ದಾರೆ.
ಯಾವುದೇ ತಾಯಿಯ ಮಡಿಲು ಖಾಲಿಯಾಗಬಾರದು, ಯಾವುದೇ ಯುವಕನ ಭವಿಷ್ಯ ಹಾಳಾಗಬಾರದು ಎಂಬುದು ಸರ್ಕಾರದ ಗುರಿ ಎಂದು ಅವರು ತಿಳಿಸಿದ್ದಾರೆ. ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳ ಪಾತ್ರವನ್ನು ಸ್ಮರಿಸಿ, ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಬಸ್ತರ್ ಮುನ್ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಮೋದಿ ದೀಪಾವಳಿ ಆಚರಣೆಯ ಸಂಪ್ರದಾಯ
ಪ್ರಧಾನಿ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ವರ್ಷ ದೀಪಾವಳಿಯನ್ನು ಸೈನಿಕರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ಆಚರಿಸುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. 2025ರಲ್ಲಿ ಗೋವಾ ಮತ್ತು ಕಾರವಾರದ ಸಮುದ್ರ ಪ್ರದೇಶದಲ್ಲಿ ಐಎನ್‌ಎಸ್ ವಿಕ್ರಾಂತ್‌ನಲ್ಲಿ ನೌಕಾಪಡೆ ಸಿಬ್ಬಂದಿಯೊಂದಿಗೆ ಹಬ್ಬ ಆಚರಿಸಿದ್ದರು. ಈ ಬಾರಿ ನಕ್ಸಲ್ ಹೋರಾಟದ ಪ್ರಮುಖ ಕೇಂದ್ರವಾಗಿದ್ದ ಬಸ್ತರ್ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Sun, 8 November 26