
ನವದೆಹಲಿ, ಅಕ್ಟೋಬರ್ 23: ಮತದಾರರ ಪಟ್ಟಿಯ ಎಸ್‌ಐಆರ್ ವಿರೋಧಿಸಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಸಿಆರ್‌ಪಿಸಿ ಸೆಕ್ಷನ್ ಅಡಿಯಲ್ಲಿ 10,000 ರೂ. ಮೌಲ್ಯದ ‘ಶಾಂತಿ ನಿರ್ವಹಣಾ ಬಾಂಡ್’ ಸಲ್ಲಿಸುವಂತೆ ದೆಹಲಿ ಪೊಲೀಸರು ನೀಡಿರುವ ನೋಟಿಸ್ ಅನ್ನು ರದ್ದುಗೊಳಿಸಲು ಕೋರಿ ಸಾಮಾಜಿಕ ಕಾರ್ಯಕರ್ತೆ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಾವಿರಾರು ಜನರು ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಈ ನೋಟಿಸ್ ಜಾರಿಗೊಳಿಸಿದ್ದರು.
ಮ್ಯಾಜಿಸ್ಟ್ರೇಟ್ ಹೊರಡಿಸಿರುವ ಶೋ-ಕಾಸ್ ನೋಟಿಸ್ ಅನ್ನು ಪ್ರಶ್ನಿಸಿ ನೇರವಾಗಿ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್, ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆಯೇ ತಮ್ಮ ವಾದಗಳನ್ನು ಹಾಗೂ ಸ್ಪಷ್ಟನೆಯನ್ನು ಮಂಡಿಸುವಂತೆ ನೇಹಾ ಬೋರಾಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಬಿಗುವಿನ ವಾತಾವರಣ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನ, ಐಸಾ ಮುಖ್ಯಸ್ಥೆ ನೇಹಾ ಬೋರಾ ಬಿಡುಗಡೆ!
ನೇಹಾ ಬೋರಾ ವಿರುದ್ಧ ಪೊಲೀಸರ ಆರೋಪಗಳೇನು?:
ಅಕ್ಟೋಬರ್ 16ರಂದು ಮಂಡಿ ಹೌಸ್‌ನಲ್ಲಿ ಘೋಷಣೆ ಕೂಗಿದ್ದು, ಬಿಎನ್‌ಎಸ್‌ಎಸ್ ಸೆಕ್ಷನ್ 163 (ನಿಷೇಧಾಜ್ಞೆ) ಜಾರಿಯಲ್ಲಿದ್ದರೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಜನರನ್ನು ಪ್ರಚೋದಿಸಿದ್ದು ಹಾಗೂ ಕೆಜೆಪಿಯ ‘ಲೆಹರಾ ದೋ ತಿರಂಗಾ’ ಮೆರವಣಿಗೆಯಲ್ಲಿ ಭಾಗವಹಿಸಲು ಯತ್ನಿಸಿದ ಆರೋಪಗಳು ಅವರ ಮೇಲಿವೆ. ಅಕ್ಟೋಬರ್ 16ರಂದು ನೇಹಾ ಬೋರಾ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದು, ಅಕ್ಟೋಬರ್ 17ರಂದು ಬಿಡುಗಡೆ ಮಾಡಿ ಈ ನೋಟಿಸ್ ನೀಡಲಾಗಿತ್ತು.
ಶಾಂತಿ ಬಾಂಡ್ ಅಂದರೇನು?:
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಗಲಭೆ ಅಥವಾ ಶಾಂತಿ ಭಂಗ ಉಂಟಾಗುವ ಸಾಧ್ಯತೆಯಿದ್ದಾಗ, ವ್ಯಕ್ತಿಯು ನಿರ್ದಿಷ್ಟ ಅವಧಿಗೆ ಯಾವುದೇ ಅಪರಾಧದಲ್ಲಿ ಭಾಗಿಯಾಗುವುದಿಲ್ಲ ಎಂಬ ಭರವಸೆಯ ಮೇಲೆ ಬಾಂಡ್ ಹಾಗೂ ಶೂರಿಟಿ ನೀಡುವಂತೆ ಮ್ಯಾಜಿಸ್ಟ್ರೇಟ್ ಆದೇಶಿಸುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ