ಮುಂಬೈ: ಮಹಾರಾಷ್ಟ್ರದಲ್ಲಿ ನಡೀತಿದ್ದ ಮಹಾ ನಾಟಕಕ್ಕೆ ರೋಚಕ ತೆರೆ ಬಿದ್ದಿದೆ. ರಾತ್ರೋರಾತ್ರಿ ಕ್ರಾಂತಿ ಮಾಡಿ ಬೆಳಗಾಗುವಷ್ಟರಲ್ಲಿ ಸಿಎಂ ಆಗಿದ್ದ ಫಡ್ನವಿಸ್ ಆಟ ಮೂರೇ ದಿನಕ್ಕೆ ಖತಂ ಆಗಿದೆ. ಗದ್ದುಗೆ ಏರಲು ಭಾರಿ ಸರ್ಕಸ್ ಮಾಡಿದ್ದ ಮಹಾ ಮೈತ್ರಿಕೂಟ ಕೊನೆಗೂ ವಿಜಯದ ಪತಾಕೆಯನ್ನ ಹಾರಿಸಿದೆ.
ನೂತನ ಶಾಸಕರ ಪದಗ್ರಹಣ:
ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಎಲ್ಲಾ ಪಕ್ಷದ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಶಾಸಕರಿಗೆ ಹಂಗಾಮಿ ಸ್ಪೀಕರ್ ಕಾಳಿದಾಸ್ ಕೋಲಂಬ್ಕರ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು 8ಬಾರಿ ಬಿಜೆಪಿ ಶಾಸಕರಾಗಿದ್ದ ಕಾಳಿದಾಸ್ ಕೋಲಂಬ್ಕರ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನಿನ್ನೆ ಆಯ್ಕೆ ಮಾಡಿದ್ದರು.
ಪ್ರಮಾಣವಚನಕ್ಕೆ ಮೋದಿ, ಅಮಿತ್ ಶಾಗೆ ಆಹ್ವಾನ!
ನಾಳೆ ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ‘ಮಹಾ’ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪದಗ್ರಹಣ ಮಾಡಲಿದ್ದಾರೆ. ವಿಶೇಷ ಅಂದ್ರೆ ತಾವು ಯಾರ ವಿರುದ್ಧ ತೊಡೆ ತಟ್ಟಿ ಗದ್ದುಗೆ ಏರುತ್ತಿದ್ದಾರೋ ಅದೇ ಪಕ್ಷದ ನಾಯಕರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾತನಾಡಿರೋ ಶಿವಸೇನೆ ನಾಯಕ ಸಂಜಯ್ ರಾವತ್, ಪ್ರಮಾಣವಚನಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾರನ್ನ ಆಹ್ವಾನಿಸುತ್ತೇವೆ ಎಂದಿದ್ದಾರೆ.
Published On - 8:42 am, Wed, 27 November 19