ನವದೆಹಲಿ: ವಿದೇಶಗಳಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ (Khalistan Terrorists) ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಕ್ರಮ ಕೈಗೊಂಡಿದೆ. 21 ಖಲಿಸ್ತಾನಿಗಳ ಹೆಸರುಗಳನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ದಾಖಲಾಗಿದೆ. ಈ ಖಲಿಸ್ತಾನಿಗಳ ಹೆಸರುಗಳನ್ನು ಅವರ ಫೋಟೋಗಳೊಂದಿಗೆ ಎನ್ಐಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಲಖ್ಬೀರ್ ಸಿಂಗ್ ಲಾಂಡಾ, ಮನ್ದೀಪ್ ಸಿಂಗ್, ಸತ್ನಾಮ್ ಸಿಂಗ್, ಅಮ್ರಿಕ್ ಸಿಂಗ್ ಸೇರಿದಂತೆ ಕೆನಡಾ, ಅಮೆರಿಕ ಮತ್ತು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಹೆಸರುಗಳಿವೆ.
ಏತನ್ಮಧ್ಯೆ, ತನಿಖಾ ಸಂಸ್ಥೆಯ 5 ಸದಸ್ಯರ ತಂಡ ಶೀಘ್ರದಲ್ಲೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿ ಭಾರತೀಯ ರಾಯಭಾರಿ ಕಚೇರಿ ಮೇಲಿನ ದಾಳಿಯ ತನಿಖೆ ನಡೆಸಲಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಜುಲೈ 17ರ ನಂತರ ಈ ತಂಡ ಅಮೆರಿಕಕ್ಕೆ ತೆರಳಲಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್‌ನಲ್ಲಿ ಖಲಿಸ್ತಾನಿ ಬೆಂಬಲಿಗರು ದಾಳಿ ಮಾಡಿದ್ದರು.
ಗುಪ್ತಚರ ಮೂಲಗಳ ಪ್ರಕಾರ, ಭದ್ರತಾ ಏಜೆನ್ಸಿಗಳಾದ ಎನ್‌ಐಎ, ಐಬಿ ಮತ್ತು ರಾಜ್ಯ ಪೊಲೀಸರು ಸಮಾಲೋಚನೆ ನಡೆಸಿ ಪಟ್ಟಿಯನ್ನು ಸಿದ್ಧಪಡಿಸಿವೆ. ಬ್ರಿಟನ್, ಅಮೆರಿಕ ಮತ್ತು ಕೆನಡಾ ರಾಯಭಾರಿ ಕಚೇರಿ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಖಲಿಸ್ತಾನಿ ಮತ್ತು ಖಲಿಸ್ತಾನಿ ಪರ ಇರುವ ಭಯೋತ್ಪಾದಕರ ಸಂಪೂರ್ಣ ಪಟ್ಟಿಯನ್ನು ಎನ್‌ಐಎ ಇತ್ತೀಚೆಗಷ್ಟೇ ಸಿದ್ಧಪಡಿಸಿತ್ತು. ತನಿಖಾ ಸಂಸ್ಥೆಗಳ ಪಟ್ಟಿಯಲ್ಲಿ ಸಿಖ್ ಫಾರ್ ಜಸ್ಟಿಸ್ನ ಪರಾರಿಯಾಗಿರುವ ಗುರುಪತ್ವಂತ್ ಸಿಂಗ್ ಪನ್ನು ಹೆಸರು ಅಗ್ರಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿಯ ಪ್ರಕಾರ, ಸಿಖ್ಸ್ ಫಾರ್ ಜಸ್ಟಿಸ್ (SFJ), ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI), ಖಲಿಸ್ತಾನಿ ಲಿಬರೇಶನ್ ಫೋರ್ಸ್ (KLF), ಖಲಿಸ್ತಾನ್ ಟೈಗರ್ ಫೋರ್ಸ್ (KTF), ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (KZF), ಖಲಿಸ್ತಾನ್ ಕಮಾಂಡೋ ಫೋರ್ಸ್ (KCF) ವಿದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ISYF) ಮತ್ತು ದಾಲ್ ಖಾಲ್ಸಾ ಇಂಟರ್ನ್ಯಾಷನಲ್ (DKI) ಸದಸ್ಯರ ಹೆಸರುಗಳುಳ್ಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಇದಲ್ಲದೇ 20 ರಿಂದ 25 ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಲುಕ್ ಔಟ್ ನೋಟಿಸ್ ಅನ್ನೂ ಹೊರಡಿಸಲಾಗಿದೆ.
ಇದನ್ನೂ ಓದಿ: Khalistanis: ಖಲಿಸ್ತಾನಿಗಳಿಗೆ ಜಾಗ ನೀಡದಂತೆ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಭಾರತ ಮನವಿ
ಖಲಿಸ್ತಾನಿ ಬೆಂಬಲಿಗರು ಇಂದು (ಜುಲೈ 8) ‘ಕಿಲ್ ಇಂಡಿಯಾ’ ಹೆಸರಿನ ರ‍್ಯಾಲಿ ಮೂಲಕ ಭಾರತ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಮಾಹಿತಿಯ ಪ್ರಕಾರ, ಈ ರ‍್ಯಾಲಿಯನ್ನು ಅಮೆರಿಕದಿಂದ ಕೆನಡಾಕ್ಕೆ ಯೋಜಿಸಲಾಗಿದೆ. ಈ ರ‍್ಯಾಲಿ ವೇಳೆ ಹಿಂಸಾಚಾರ ಬಡೆಸಯುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಸುಳಿವು ನೀಡಿವೆ ಎಂದು ಕೆಲವು ಮಾಧಚ್ಯಮಗಳು ವರದಿ ಮಾಡಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ