ಚೆನ್ನೈ / ಬೆಂಗಳೂರು: ನಿರೀಕ್ಷೆಗಿಂತ ಕಡಿಮೆ ತೀವ್ರತೆಯಲ್ಲಿ ನಿವಾರ್ ಚಂಡಮಾರುತವು ತಮಿಳುನಾಡಿನ ಮರಕ್ಕಣಂ ಬಳಿ ಗುರುವಾರ ನಸುಕಿನ 2.30ರಲ್ಲಿ ಭೂಮಿಗೆ ಅಪ್ಪಳಿಸಿತು. ಚಂಡಮಾರುತದ ತೀವ್ರತೆಯನ್ನು ಈ ಮೊದಲು ‘ಅತಿ ತೀಕ್ಷ್ಣ’ ಎಂದು ವರ್ಗೀಕರಿಸಲಾಗಿತ್ತು. ನಂತರ ಅದನ್ನು ‘ತೀಕ್ಷ್ಣ’ದ ತೀವ್ರತೆಗೆ ಇಳಿಸಲಾಯಿತು.
ತಮಿಳುನಾಡು, ಪುದುಚೇರಿ ಸೇರಿದಂತೆ ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ರಾಜ್ಯಗಳಲ್ಲಿ ಈವರೆಗೆ 2 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ನಡುವೆಯೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರಗಳು ಹೇಳಿವೆ.
ಕರ್ನಾಟಕದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಸಹಿತ, ತುಂತುರು ಮಳೆಯಾಗುತ್ತಿದೆ.
ಇದನ್ನೂ ಓದಿ: ನುಗ್ಗಿ ಬರ್ತಿದೆ ಡೆಡ್ಲಿ ನಿವಾರ್ ಚಂಡಮಾರುತ: ಬೆಂಗಳೂರಿನಲ್ಲಿ 2 ದಿನ ಭಾರಿ ಮಳೆ
ಚಂಡಮಾರುತಕ್ಕೆ ಸಂಬಂಧಿಸಿದಂತೆ ಈವರೆಗಿನ 10 ಮುಖ್ಯ ಬೆಳವಣಿಗೆಗಳು ಇಲ್ಲಿದೆ..
1) ಪುದುಚೇರಿಯಲ್ಲಿ ಕಳೆದ 20 ಗಂಟೆಗಳಲ್ಲಿ 20 ಸೆಂಮೀ ಮಳೆಯಾಗಿದೆ. ಹಲವೆಡೆ ನೀರು ನಿಂತಿದೆ. ಸಾವಿರಾರು ಮರಗಳು ಉರುಳಿವೆ. ಪುದುಚೇರಿ ಮತ್ತು ತಮಿಳುನಾಡಿನ ಕಡಲೂರಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
2) ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣ ಮತ್ತು ಮೆಟ್ರೊ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ‘ಗಾಳಿಯ ತೀವ್ರತೆ ಕ್ರಮೇಣ ಕಡಿಮೆಯಾಗಲಿದೆ. ಆದರೆ ಭಾರಿ ಮಳೆ ಮುಂದುವರಿಯಲಿದೆ’ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಡಾ.ಎಸ್.ಬಾಲಚಂದ್ರನ್ ಮಾಹಿತಿ ನೀಡಿದ್ದಾರೆ.
3) ಪುದುಚೇರಿ ಮತ್ತು ತಮಿಳುನಾಡಿನ ಕಡಲೂರು, ನಾಗಪಟ್ಟಿನಂ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಬೀಳುತ್ತಿದೆ. 2 ಲಕ್ಷಕ್ಕೂ ಹೆಚ್ಚು ಜನರನ್ನು ಚಂಡಮಾರುತ ತಂಗುದಾಣಗಳಿಗೆ (ಸೈಕ್ಲೋನ್ ಶೆಲ್ಟರ್ಸ್) ಸ್ಥಳಾಂತರಿಸಲಾಗಿದೆ.
4) ಜನರು ಮನೆಯಲ್ಲಿಯೇ ಇರಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮನವಿ ಮಾಡಿದ್ದಾರೆ. ತಮಿಳುನಾಡಿನ 4000 ಸ್ಥಳಗಳಲ್ಲಿ ಚಂಡಮಾರುತದಿಂದ ತೀವ್ರಹಾನಿ ಆಗಬಹುದು ಎಂದು ಗುರುತಿಸಲಾಗಿದೆ. ಸಂತ್ರಸ್ತರಿಗೆ ಮುಖ್ಯಮಂತ್ರಿ ಶೀಘ್ರ ಪರಿಹಾರ ಘೋಷಿಸಲಿದ್ದಾರೆ ಎಂದು ತಮಿಳುನಾಡಿನ ವಿಪತ್ತು ನಿರ್ವಹಣಾ ಸಚಿವ ಆರ್.ಬಿ.ಉದಯಕುಮಾರ್ ಹೇಳಿದ್ದಾರೆ.
5) ತಮಿಳುನಾಡು, ಪುದುಚೇರಿ ಮತ್ತು ನೆರೆಯ ಆಂಧ್ರದಲ್ಲಿ ಸುಮಾರು 1,200 NDRF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಡಲೂರು ಜಿಲ್ಲೆಯಲ್ಲಿ 6 ತಂಡಗಳೂ ಸೇರಿದಂತೆ ತಮಿಳುನಾಡಿನಲ್ಲಿ ಒಟ್ಟು 12 ತಂಡಗಳನ್ನು ನಿಯೋಜಿಸಲಾಗಿದೆ. ಆಂಧ್ರದಲ್ಲಿ 7, ಪುದುಚೇರಿಯಲ್ಲಿ 3 ತಂಡಗಳಿವೆ. ಒಡಿಶಾದ ಕಟಕ್, ಆಂಧ್ರದ ವಿಜಯವಾಡ ಮತ್ತು ಕೇರಳದ ತ್ರಿಶೂರ್ ನಗರಗಳಲ್ಲಿ ಇನ್ನೂ 20 ಮೀಸಲು ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ.
6) ಮುಂಜಾಗರೂಕತಾ ಕ್ರಮವಾಗಿ ಚೆನ್ನೈ ಸುತ್ತಮುತ್ತಲ ಜಲಾಶಯಗಳಿಂದ ನೀರು ಹರಿಸಲಾಗಿದೆ. ಜಲಾಶಯಗಳ ಒಳಹರಿವಿನ ಮೇಲೆ ಸತತ ನಿಗಾ ಇರಿಸಲಾಗಿದೆ. ಚೆನ್ನೈ ನಗರದಲ್ಲಿದ್ದ ಹಳೆಯ ಮತ್ತು ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಬಂದರಿನಲ್ಲಿದ್ದ ಹಡಗುಗಳನ್ನು ಆಳ ಸಮುದ್ರಕ್ಕೆ ಕಳಿಸಲಾಗಿದ್ದು, ಬಂದರು ಚಟುವಟಿಕೆಗಳನ್ನು ಸ್ತಬ್ಧಗೊಳಿಸಲಾಗಿದೆ.
7) ನಿವಾರ್ ಚಂಡಮಾರುತದ ಪರಿಣಾಮಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವ ನೌಕಾಪಡೆಯು ಹಡಗುಗಳು, ವಿಮಾನಗಳು, ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಮತ್ತು ಮುಳುಗುತಜ್ಞರನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳೊಂದಿಗೆ ನಮ್ಮ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.
8) ತಮಿಳುನಾಡಿನ ಕಲ್ಪಕಂನಲ್ಲಿರುವ ಮದ್ರಾಸ್ ಅಣುಶಕ್ತಿ ಘಟಕವು ಚಂಡಮಾರುತದಿಂದ ತೀವ್ರ ಹಾನಿ ಅನುಭವಿಸುವ ಸ್ಥಳ ಎಂದು ಗುರುತಿಸಲಾಗಿರುವ ಮಾಮಲ್ಲಪುರಂಗೆ ಕೇವಲ 20 ಕಿ.ಮೀ. ದೂರದಲ್ಲಿದೆ. ಹವಾಮಾನವು ಘಟಕದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
9) ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ನೈಸರ್ಗಿಕ ವಿಕೋಪದಿಂದ ಜನರು ಸುರಕ್ಷಿತವಾಗಿ ಪಾರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
10) ಆಂಧ್ರ ಪ್ರದೇಶದಲ್ಲಿ ಚಂಡಮಾರುತ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಚಂಡಮಾರುತದ ಪ್ರಭಾವದಿಂದ ನೆಲ್ಲೂರು, ಚಿತ್ತೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗಬಹುದು ಎಂಬ ಮುನ್ಸೂಚನೆಯಿದೆ. ಮೀನುಗಾರರಿಗೆ ಸಮುದ್ರಕ್ಕೆ ತೆರಳುವುದನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: Cyclone Nivar ಎದುರಿಸಲು ಹೇಗೆ ಸಿದ್ಧವಾಗಿದೆ ತಮಿಳುನಾಡು, ಪುದುಚೇರಿ?
Published On - 10:57 am, Thu, 26 November 20