ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ; ಪ್ರಧಾನಿ ಮೋದಿ ಮನವಿಯ ಬಳಿಕ ಸರ್ಕಾರ ಸ್ಪಷ್ಟನೆ

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನರು ಕಡಿಮೆ ಇಂಧನ ಬಳಕೆ ಮಾಡಬೇಕು, ಎಲೆಕ್ಟ್ರಿಕ್ ವಾಹನಗಳ ಬಳಕೆ ಜಾಸ್ತಿ ಮಾಡಬೇಕು ಎಂದು ಹೇಳಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಭಾರತದಲ್ಲಿ ಯಾವುದೇ ಇಂಧನ ಪೂರೈಕೆಯ ಸಮಸ್ಯೆಯಿಲ್ಲ ಎಂದಿದ್ದಾರೆ.

ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ; ಪ್ರಧಾನಿ ಮೋದಿ ಮನವಿಯ ಬಳಿಕ ಸರ್ಕಾರ ಸ್ಪಷ್ಟನೆ
Sujata Sharma

Updated on: May 11, 2026 | 6:37 PM

ನವದೆಹಲಿ, ಮೇ 11: ಜಾಗತಿಕ ಪೂರೈಕೆ ಅಡಚಣೆಗಳ ನಡುವೆಯೂ ಇಂಧನ, ಎಲ್‌ಪಿಜಿ ದಾಸ್ತಾನುಗಳು ಸಾಕಷ್ಟು ಇವೆ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ಹಾಗೇ, ಇಂಧನವನ್ನು ಕಡಿಮೆ ಪ್ರಮಾಣದಲ್ಲಿ ಬಳಸಲು ನಾಗರಿಕರಿಗೆ ಮನವಿ ಮಾಡಿದೆ. ದೆಹಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ, ಗ್ರಾಹಕರಿಗೆ ನಿರಂತರ ಇಂಧನ ಪೂರೈಕೆಯನ್ನು ಒದಗಿಸಲು ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

“ಭಾರತ ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಸಾಮಾನ್ಯ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಇಂಧನ ಸರಬರಾಜುಗಳನ್ನು ಮಾಡಲಾಗುತ್ತಿದೆ” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಹೇಳಿದ್ದಾರೆ.


ಇದನ್ನೂ ಓದಿ: ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

“ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ವಿತರಿಸಲಾದ ಎಲ್‌ಪಿಜಿ ಸಿಲಿಂಡರ್‌ಗಳ ಸ್ಥಿತಿಯನ್ನು ವಿವರಿಸಿದ ಶರ್ಮಾ, “ಕಳೆದ ಮೂರು ದಿನಗಳಲ್ಲಿ 1 ಕೋಟಿ 14 ಲಕ್ಷ ಬುಕಿಂಗ್‌ಗಳಾಗಿದೆ. 1 ಕೋಟಿ 26 ಲಕ್ಷ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಗಳಿಗೆ ತಲುಪಿಸಲಾಗಿದೆ. ಅದೇ ರೀತಿ, ಕಳೆದ ಮೂರು ದಿನಗಳಲ್ಲಿ ಕಮರ್ಷಿಯಲ್ ಎಲ್‌ಪಿಜಿ ಮಾರಾಟವು 17,000 ಟನ್‌ಗಳನ್ನು ಮೀರಿದೆ. ಆಟೋ ಎಲ್‌ಪಿಜಿ ಮಾರಾಟವು ಸಹ 762 ಟನ್‌ಗಳನ್ನು ಮೀರಿದೆ.” ಎಂದು ಸುಜಾತಾ ಶರ್ಮಾ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲಿಯಂ ಉತ್ಪನ್ನಗಳನ್ನು ಎಚ್ಚರಿಕೆಯಿಂದ, ಮಿತವಾಗಿ ಬಳಸುವಂತೆ ನಾಗರಿಕರಿಗೆ ಮನವಿ ಮಾಡಿದ್ದರು. ಸಾಂಕ್ರಾಮಿಕ ರೋಗದ ಸಮಯದಲ್ಲಿರುವಂತೆ ವರ್ಕ್ ಫ್ರಂ ಹೋಂ, ಆನ್‌ಲೈನ್ ಮೀಟಿಂಗ್ ಮತ್ತು ವರ್ಚುವಲ್ ಸಭೆಗಳಿಗೆ ಆದ್ಯತೆ ನೀಡುವ ಬಗ್ಗೆಯೂ ಅವರು ಒತ್ತಿ ಹೇಳಿದ್ದರು.

“ಪೆಟ್ರೋಲ್ ಮತ್ತು ಡೀಸೆಲ್ ಜಾಗತಿಕವಾಗಿ ತುಂಬಾ ದುಬಾರಿಯಾಗಿರುವುದರಿಂದ ನಾವು ವಿದೇಶಿ ವಿನಿಮಯವನ್ನು ಉಳಿಸುವತ್ತ ಆದ್ಯತೆ ನೀಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಖರ್ಚು ಮಾಡುವ ವಿದೇಶಿ ಕರೆನ್ಸಿಯನ್ನು ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us