ದೆಹಲಿ: ಅತ್ಯಾಚಾರಕ್ಕೊಳಗಾಗಿರುವ ವಾಯುಪಡೆಯ ಅಧಿಕಾರಿಯೊಬ್ಬರು ಅತ್ಯಾಚಾರ ನಡೆದಿದೆ ಎಂದು ಸಾಬೀತು ಪಡಿಸಲು ಎರಡು ಬೆರಳಿನ ಪರೀಕ್ಷೆಯನ್ನು ಮಾಡಲಾಗಿತ್ತು ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, ಸಂತ್ರಸ್ತೆಗೆ ಎರಡು ಬೆರಳಿನ ಪರೀಕ್ಷೆ ಮಾಡಿಲ್ಲ ಎಂದು ಹೇಳಿದ್ದಾರೆ. ವಾಯುಪಡೆಯ ಸಹೋದ್ಯೋಗಿಯಿಂದ ಅತ್ಯಾಚಾರಕ್ಕೊಳಗಾದ ನಂತರ ನಡೆದ ಎರಡು ಬೆರಳಿನ ಪರೀಕ್ಷೆ ನನಗೆ ಆಘಾತವನ್ನುಂಟು ಮಾಡಿತು ಎಂದು ಸಂತ್ರಸ್ತೆ ಹೇಳಿದ್ದರು.
“ಎರಡು ಬೆರಳಿನ ಪರೀಕ್ಷೆಯನ್ನು ಮಾಡಲಾಗಿಲ್ಲ. ವಿಚಾರಣೆಯ ವರದಿಯ ಆಧಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಐಎಎಫ್ ಮುಖ್ಯಸ್ಥರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಆರೋಪಿ 29 ವರ್ಷದ ಫ್ಲೈಟ್ ಲೆಫ್ಟಿನೆಂಟ್ ಅವರನ್ನು ಕೋರ್ಟ್ ಮಾರ್ಷಲ್ ಆಕ್ಟ್ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು. ತಮಿಳುನಾಡಿನ ಕೊಯಮತ್ತೂರಿನ ನ್ಯಾಯಾಲಯವು ಗುರುವಾರ ಈ ಪ್ರಕರಣವನ್ನು ಭಾರತೀಯ ವಾಯುಪಡೆಗೆ (IAF) ಹಸ್ತಾಂತರಿಸಿದೆ.
ಏನಿದು ಪ್ರಕರಣ?
ಸೆಪ್ಟೆಂಬರ್ 20 ರಂದು ತಮಿಳುನಾಡು ಪೊಲೀಸರು ಸಲ್ಲಿಸಿದ ಪ್ರಾಥಮಿಕ ಮಾಹಿತಿ ವರದಿ (FIR) ಪ್ರಕಾರ ಭಾರತೀಯ ವಾಯುಪಡೆಯ (IAF) ಮಹಿಳಾ ಅಧಿಕಾರಿಯು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಾಯುಪಡೆಯ ಆಡಳಿತ ಕಾಲೇಜಿ ಕ್ಯಾಂಪಸ್‌ನಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆಕೆಯ ಪಾದದ ಗಾಯದ ನೋವನ್ನು ಸಹಿಸಬಹುದಾದರೆ (ಆಪಾದಿತ ಅಪರಾಧಕ್ಕೆ ಕೆಲವು ಗಂಟೆಗಳ ಮೊದಲು ಈ ಗಾಯವಾಗಿತ್ತು), ತನ್ನ ಅತ್ಯಾಚಾರಿಯನ್ನು ಕ್ಯಾಂಪಸ್‌ನಲ್ಲಿ ನೋಡುವ ನೋವನ್ನು ಸಹ ನಿಭಾಯಿಸಬಹುದೆಂದು ಕಾಲೇಜು ಅಧಿಕಾರಿಗಳು ಹೇಳಿರುವುದಾಗಿ ಸಂತ್ರಸ್ತೆ ದೂರಿದ್ದಾಳೆ.
ಎಫ್ಐಆರ್ ಪ್ರಕಾರ ಸಂತ್ರಸ್ತೆ ಸೆಪ್ಟೆಂಬರ್ 9 ರಂದು ತರಬೇತಿ ಸಮಯದಲ್ಲಿ ಬ್ಯಾಸ್ಕೆಟ್ ಬಾಲ್ ಆಡುವಾಗ ಆಕೆಯ ಬಲಗಾಲಿಗೆ ಗಾಯವಾಗಿತ್ತು. ಆಕೆ ನೋವು ನಿವಾರಕ ಸೇವಿಸಿ ಆ ಸಂಜೆ ತನ್ನ ಸಹೋದ್ಯೋಗಿಗಳೊಂದಿಗೆ ಅಧಿಕಾರಿಗಳ ಮೆಸ್ ಬಾರ್ನಲ್ಲಿ ಭೇಟಿಯಾದಳು. ಅಲ್ಲಿ ಆರೋಪಿ ತನ್ನ ಎರಡನೇ ಡ್ರಿಂಕ್ಸ್ ಗೆ ಪಾವತಿ ಮಾಡಿದ್ದ. ಸಂತ್ರಸ್ತೆ ವಾಂತಿ ಮಾಡಿ ಮಲಗಲು ಹೋದಳು ಮತ್ತು ಇಬ್ಬರು ಸ್ನೇಹಿತರು (ಒಬ್ಬ ಪುರುಷ ಮತ್ತು ಇನ್ನೊಬ್ಬ ಮಹಿಳೆ) ಅವಳನ್ನು ನೋಡಿಕೊಂಡರು ಮತ್ತು ಹೊರಡುವ ಮೊದಲು ಕೊಠಡಿಯನ್ನು ಹೊರಗಿನಿಂದ ಮುಚ್ಚಿದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅವಳು ಮಲಗಿದ್ದಾಗ, ಆರೋಪಿ ಒಳಗೆ ಬಂದು ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾನೆ. ಆತ ಅವಳನ್ನು ಚುಂಬಿಸಲು ಪ್ರಯತ್ನಿಸುತ್ತಿರುವಾಗ ಆಕೆ ತಳ್ಳಲು ಯತ್ನಿಸಿದಳು. ಆದರೆ ಅವಳ ಪಾದದ ಗಾಯದಿಂದಾಗಿ ಈ ಪ್ರಯತ್ನ ವ್ಯರ್ಥವಾಯಿತು. ಆಕೆಯ ಒಪ್ಪಿಗೆಯೊಂದಿಗೆ ಆ ವ್ಯಕ್ತಿ ಕೋಣೆಯಲ್ಲಿ ಇದ್ದನೇ ಎಂದು ಮಹಿಳಾ ಸ್ನೇಹಿತೆ ಕೇಳಿರುವುದಾಗಿ ಎಫ್ಐಆರ್ನಲ್ಲಿದೆ.
ಎಫ್ಐಆರ್ ಪ್ರಕಾರ ಮರುದಿನ ಆಕೆಯ ಖಾಸಗಿತನಕ್ಕೆ ಧಕ್ಕೆ ತಂದಿದ್ದಕ್ಕೆ ಆರೋಪಿ ವಿಷಾದ ವ್ಯಕ್ತಪಡಿಸಿದ್ದನು. ಆದರೆ ಆಕೆಯ ಮಹಿಳಾ ಸ್ನೇಹಿತೆ ಹಾಸಿಗೆಯ ಮೇಲೆ ವೀರ್ಯದ ಕಲೆಗಳನ್ನು ತೋರಿಸಿದಳು.
ಸೆಪ್ಟೆಂಬರ್ 11 ರಂದು ಅವಳಿಗೆ ಎರಡು ಆಯ್ಕೆಗಳನ್ನು ನೀಡಿದ ಇಬ್ಬರು ಅಧಿಕಾರಿಗಳನ್ನು ಭೇಟಿಯಾಗಲು ಹೇಳಲಾಯಿತು.ಒಂದೋ ದೂರು ದಾಖಲಿಸಿ, ಅಥವಾ ಎಲ್ಲವೂ ಒಪ್ಪಿಗೆಯಿಂದ ನಡೆದದ್ದು ಎಂದು ಲಿಖಿತ ಹೇಳಿಕೆ ನೀಡಿ ಎಂಬ ಎರಡು ಆಯ್ಕೆ ನೀಡಿ ವಾಯುಪಡೆ ಆಸ್ಪತ್ರೆಗೆ ಹೋಗುವಂತೆ ಸಂತ್ರಸ್ತೆಗೆ ನಿರ್ದೇಶಿಸಲಾಯಿತು.
ಆಕೆಯ ಸ್ನೇಹಿತರು ಅವಳ ಜೊತೆಗಿದ್ದರು, ಮತ್ತು ವೈದ್ಯರು ತಪ್ಪೊಪ್ಪಿಗೆ ವಿಡಿಯೊವನ್ನು ನೋಡಲು ಬಯಸಿದ್ದರು. ಅವರು ಸಂತ್ರಸ್ತೆಗೆ ಆಕೆಯ ಲೈಂಗಿಕ ಇತಿಹಾಸದ ಬಗ್ಗೆ ಕೇಳಿದರು ಮತ್ತು ಆಕೆಯ ಖಾಸಗಿ ಭಾಗಗಳನ್ನು ದೈಹಿಕವಾಗಿ ಪರೀಕ್ಷಿಸಿದರು.
“ಅತ್ಯಾಚಾರವಾಗಿದೆಯೇ ಎಂದು ಸಾಬೀತು ಪಡಿಸಲು ಎರಡು ಬೆರಳಿನ ಪರೀಕ್ಷೆಯನ್ನು ಮಾಡಲಾಗುವುದಿಲ್ಲ ಎಂದು ನಂತರವೇ ನನಗೆ ತಿಳಿಯಿತು. ಈ ಕ್ರಮವು ಅತ್ಯಾಚಾರಕ್ಕೊಳಗಾದ ಆಘಾತದೊಂದಿಗೆ ಮತ್ತಷ್ಟು ನನ್ನನ್ನು ಘಾಸಿಗೊಳಿಸಿತು ”ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಅತ್ಯಾಚಾರದ ನಂತರ ಎರಡು ಬೆರಳು ಪರೀಕ್ಷೆಯಿಂದ ಆಘಾತಕ್ಕೊಳಗಾದೆ: ಐಎಎಫ್ ಅಧಿಕಾರಿ