
ನೊಯ್ಡಾ, ಅಕ್ಟೋಬರ್ 3: ನೊಯ್ಡಾದ ಸೆಕ್ಟರ್ 94ರಲ್ಲಿರುವ ಪ್ರತಿಷ್ಠಿತ ‘ಸೂಪರ್‌ನೋವಾ’ ಬಹುಮಹಡಿ ಕಟ್ಟಡದ 43ನೇ ಮಹಡಿಯಿಂದ ಜಿಗಿದು 25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ನಡೆದಿದೆ. ಕಳೆದ ಎರಡು ವರ್ಷಗಳಲ್ಲಿ ಅದೇ 43ನೇ ಮಹಡಿಯಿಂದ ಜಿಗಿದು ಸಂಭವಿಸಿದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಮೃತನನ್ನು ಮಾನೇಸರ್ ಮೂಲದ 25 ವರ್ಷದ ಸಂಭವ್ ಜೈನ್ ಎಂದು ಗುರುತಿಸಲಾಗಿದೆ. ಶುಕ್ರವಾರ ಸೂಪರ್‌ನೋವಾ ಅಪಾರ್ಟ್‌ಮೆಂಟ್‌ನ ಏರ್‌ಬಿಎನ್‌ಬಿಯಲ್ಲಿ ಕೊಠಡಿ ಬುಕ್ ಮಾಡಿ ತಂಗಿದ್ದ ಈತ, ಇಂದು ಚೆಕ್‌ಔಟ್ ಮಾಡುವ ಮುನ್ನ ಕಟ್ಟಡದ ಮೇಲಿನ ಮಹಡಿಗೆ ತೆರಳಿ ಕೆಳಗೆ ಜಿಗಿದಿದ್ದಾನೆ.
ವಿಪರ್ಯಾಸವೆಂದರೆ, ಈ ಭೀಕರ ದುರಂತ ಸಂಭವಿಸುವ ಕೇವಲ ಒಂದು ದಿನದ ಮುಂಚೆಯಷ್ಟೇ (ಅಕ್ಟೋಬರ್ 2) ಸೂಪರ್‌ನೋವಾ ಅಪಾರ್ಟ್‌ಮೆಂಟ್ ಮಾಲೀಕರ ಸಂಘವು ಫ್ಲ್ಯಾಟ್ ಮಾಲೀಕರು ಮತ್ತು ಬಾಡಿಗೆದಾರರಿಗೆ ಸೂಚನೆಯೊಂದನ್ನು ರವಾನಿಸಿತ್ತು. ‘ಏರ್‌ಬಿಎನ್‌ಬಿ’ಯಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ದಿನದ ಲೆಕ್ಕದಲ್ಲಿ ಕೊಠಡಿಗಳನ್ನು ಬಾಡಿಗೆಗೆ ನೀಡುವುದನ್ನು ನಿಷೇಧಿಸಲಾಗಿತ್ತು. ನಿಯಮ ಮೀರಿ ಅಲ್ಪಾವಧಿಗೆ ಕೊಠಡಿ ಬಾಡಿಗೆಗೆ ನೀಡುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿತ್ತು.
ಈ ಘಟನೆಯ ವೇಳೆ ಪಕ್ಕದ ಫ್ಲ್ಯಾಟ್‌ನಲ್ಲಿ ಎಸಿ ರಿಪೇರಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಂಭವ್ ಜೈನ್ ಕಟ್ಟಡದ ಬಾಲ್ಕನಿಯಿಂದ ಕೆಳಗೆ ಜಿಗಿಯಲು ನಿಂತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆತನ ಬಳಿ ತೆರಳಿ ಆತನನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ತಾನು ತೀವ್ರ ಖಿನ್ನತೆಯಿಂದ ಬಳಲುತ್ತಿರುವುದಾಗಿ ಸಿಬ್ಬಂದಿಗೆ ತಿಳಿಸಿದ ಸಂಭವ್, ಅವರ ಕಣ್ಣೆದುರೇ ಕೆಳಗೆ ಜಿಗಿದಿದ್ದಾನೆ.
ಇದನ್ನೂ ಓದಿ: ಪ್ರೀತಿ, ಕಿರುಕುಳ, ಕೊಲೆ! ಮಾಜಿ ಪ್ರಿಯಕರನ ಜೊತೆ ಸೇರಿ ಹಾಲಿ ಪ್ರಿಯಕರನನ್ನೇ ಮುಗಿಸಿದ ಮಹಿಳೆ
ಇದೇ ಸೂಪರ್‌ನೋವಾ ಕಟ್ಟಡದಲ್ಲಿ 2023ರ ಜನವರಿಯಲ್ಲೂ ಇಂಥದೇ ಪ್ರಕರಣ ನಡೆದಿತ್ತು. ದೆಹಲಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಇದೇ 43ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೆ ಅದೇ 43ನೇ ಮಹಡಿಯಿಂದ ಮತ್ತೊಂದು ದುರಂತ ಸಂಭವಿಸಿರುವುದು ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಘಟನೆ ಕುರಿತು ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದು, ಮೃತನ ಗುರುತು ಮತ್ತು ಆತ ಕೊಠಡಿಯಲ್ಲಿ ತಂಗಿದ್ದ ಸಂದರ್ಭದ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ಈ ಘಟನೆಯ ದೃಶ್ಯಾವಳಿಗಳನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಕೆಳಗಿದ್ದ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನನ್ನು ಉಳಿಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ನೋಯ್ಡಾ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ರಾಯಗಢದಲ್ಲಿ ದುರಂತ; ಕೋಚಿಂಗ್ ಕ್ಲಾಸ್ ಪಿಕ್ನಿಕ್ ವೇಳೆ ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಸಾವು
ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಸಂಭವ್ ಜೈನ್ ತೀವ್ರ ಸಾಲದ ಸುಳಿಗೆ ಸಿಲುಕಿದ್ದ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೂ ಮುನ್ನ ಆತ ತನ್ನ ತಂದೆಗೆ ವಾಟ್ಸಾಪ್ ಸಂದೇಶವೊಂದನ್ನು ಕಳುಹಿಸಿದ್ದು, “ನನಗೆ ಜೀವಿಸಲು ಇಷ್ಟವಿಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಈ ನನ್ನ ನಿರ್ಧಾರಕ್ಕೆ ನಾನೇ ಹೊಣೆ” ಎಂದು ಬರೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತನ ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಜನವರಿ 2023ರಲ್ಲೂ ಇದೇ ‘ಸೂಪರ್‌ನೋವಾ’ ಕಟ್ಟಡದ 43ನೇ ಮಹಡಿಯಿಂದ ಜಿಗಿದು ದೆಹಲಿ ಮೂಲದ 43 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾಪರ್ಟಿ ವೀಕ್ಷಣೆಗೆ ಬಂದಿದ್ದ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದರು. 2 ವರ್ಷಗಳ ಅಂತರದಲ್ಲಿ ಒಂದೇ ಕಟ್ಟಡದ 43ನೇ ಮಹಡಿಯಿಂದ ಮತ್ತೆ ಆತ್ಮಹತ್ಯೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ