ಏಕಕಾಲದ ಚುನಾವಣೆಯ ಅಂತಿಮ ನಿರ್ಧಾರ ಶಾಸಕಾಂಗಕ್ಕೆ ಬಿಟ್ಟದ್ದು: ಕೇಂದ್ರ ಚುನಾವಣಾ ಆಯೋಗ

| Updated By: Rakesh Nayak Manchi

Updated on: Nov 10, 2022 | 9:22 AM

ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಬಗ್ಗೆ ನಮ್ಮ ನಿಲುವನ್ನು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

ಏಕಕಾಲದ ಚುನಾವಣೆಯ ಅಂತಿಮ ನಿರ್ಧಾರ ಶಾಸಕಾಂಗಕ್ಕೆ ಬಿಟ್ಟದ್ದು: ಕೇಂದ್ರ ಚುನಾವಣಾ ಆಯೋಗ
ಏಕಕಾಲದ ಚುನಾವಣೆಯ ಅಂತಿಮ ನಿರ್ಧಾರ ಶಾಸಕಾಂಗದ್ದು: ಕೇಂದ್ರ ಚುನಾವಣಾ ಆಯೋಗ
Follow us on

ಪುಣೆ: ಚುನಾವಣಾ ಆಯೋಗವು (Election Commission) ಏಕಕಾಲದಲ್ಲಿ ಲೋಕಸಭೆ (Lok Sabha election) ಮತ್ತು ರಾಜ್ಯ ವಿಧಾನಸಭೆ ಚುನಾವಣೆ (Rajya Sabha elections)ಗಳನ್ನು ನಿಭಾಯಿಸಬಹುದು, ಆದರೆ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಶಾಸಕಾಂಗಕ್ಕೆ ಬಿಟ್ಟದ್ದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ (Rajiv Kumar) ಹೇಳಿದ್ದಾರೆ. ಪುಣೆಯಲ್ಲಿ ನಡೆದ ‘ವಿಶೇಷ ಸಾರಾಂಶ ಪರಿಷ್ಕರಣೆ 2023’ ಉಪಕ್ರಮ (ಮತದಾರರ ಪಟ್ಟಿಯನ್ನು ನವೀಕರಿಸುವುದಕ್ಕೆ ಸಂಬಂಧಿಸಿದ)ವನ್ನು ರಾಷ್ಟ್ರೀಯವಾಗಿ ಪ್ರಾರಂಭಿಸಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡುತ್ತಿದರು.

ಒಂದು ದೇಶ ಒಂದು ಚುನಾವಣೆ ಎಂಬ ಬಹು ಚರ್ಚಿತ ಕಲ್ಪನೆಯ ಬಗ್ಗೆ ಆಯೋದ ನಿಲುವು ಏನು ಎಂಬುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಕುಮಾರ್, ಸಂಸದೀಯ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ವಿಷಯವು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಬೃಹತ್ ಸಂಪನ್ಮೂಲ ಬೇಕಾಗುತ್ತದೆ. ಹಲವು ಚಟುವಟಿಕೆಗಳು ಏರುಪೇರಾಗಬಹುದು. ಆದರೆ ಈ ಬಗ್ಗೆ ಶಾಸಕರು ನಿರ್ಧರಿಸಬೇಕಾದ ವಿಷಯವಾಗಿದೆ. ಆದರೆ ಖಂಡಿತವಾಗಿಯೂ ಅದನ್ನು ಜಾರಿ ಮಾಡಿದರೆ ಆಡಳಿತಾತ್ಮಕವಾಗಿ ಆಯೋಗವು ಅದನ್ನು ನಿಭಾಯಿಸಬಹುದು ಎಂದು ನಾವು ನಮ್ಮ ನಿಲುವನ್ನು (ಸರ್ಕಾರಕ್ಕೆ) ತಿಳಿಸಿದ್ದೇವೆ” ಎಂದು ಹೇಳಿದರು.

ಏನಿದು ಒಂದು ದೇಶ ಒಂದು ಚುನಾವಣೆ?

ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ‘ಒಂದು ದೇಶ, ಒಂದೇ ಚುನಾವಣೆ’ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾಪ ಮುಂದಿಟ್ಟಿದೆ. ದೇಶದಲ್ಲಿ 1952, 1957 ಮತ್ತು 1962ರಲ್ಲಿ ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಮತದಾನ ನಡೆದಿದ್ದವು. 1968 ಮತ್ತು 1969ರಲ್ಲಿ ಹಲವು ವಿಧಾನಸಭೆಗಳ ಅವಧಿಪೂರ್ವ ವಿಸರ್ಜನೆ ಹಾಗೂ 1970ರಲ್ಲಿ 4ನೇ ಲೋಕಸಭೆಯ ಅವಧಿಪೂರ್ವ ವಿಸರ್ಜನೆಯಿಂದಾಗಿ ಏಕಕಾಲದ ಚುನಾವಣೆಗೆ ತೆರೆಬಿದ್ದಿತ್ತು. 2014ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಈ ಪ್ರಸ್ತಾಪವನ್ನು ಮುಂದಿರಿಸಿದ್ದಲ್ಲದೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಇದರ ಬಗ್ಗೆ ಉಲ್ಲೇಖಿಸಿತ್ತು. ಬಳಿಕ ಈ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬರಲು ಆರಂಭವಾಯಿತು.

ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ಪದೇಪದೆ ಚುನಾವಣೆಗಳಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ರಾಜಕೀಯ ಪಕ್ಷಗಳೂ ಪ್ರಚಾರಕ್ಕೆ ಕೋಟಿಗಟ್ಟಲೆ ಹಣ ಸುರಿಯುತ್ತವೆ. ಆದರೆ ದೇಶದಲ್ಲಿ ಎರಡೂ ಚುನಾವಣೆಗಳನ್ನು ಏಕಕಾಲದಲ್ಲಿ ಮಾಡುವುದರಿಂದ ಮಾನವ ಶ್ರಮ, ಸಮಯ ಮತ್ತು ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ. ಮೂಲಸೌಕರ್ಯ, ಸಿಬ್ಬಂದಿ, ರಕ್ಷಣಾ ವೆಚ್ಚ, ಮತ ಎಣಿಕೆ ಎಲ್ಲದರಲ್ಲೂ ದೇಶದ ಆರ್ಥಿಕತೆಗೆ ಹೆಚ್ಚಿನ ಕಡಿಮೆಯಾಗುತ್ತದೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ