
ಪಹಲ್ಗಾಮ್, ಏಪ್ರಿಲ್ 21: ಪಹಲ್ಗಾಮ್(Pahalgam)ನ ಆ ರಕ್ತಸಿಕ್ತ ಏಪ್ರಿಲ್ 22ರ ಕರಾಳ ನೆನಪುಗಳು ಇನ್ನೂ ಮಾಸಿಲ್ಲ. ಅಮಾಯಕ ಪ್ರವಾಸಿಗರ ಹತ್ಯೆ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ಆದರೆ, ಆ ನೋವಿನ ಹಿಂದೆಯೇ ಭಾರತೀಯ ಸೇನೆಯು ಎಪ್ಪತ್ತೇಳು ಚದರ ಕಿಲೋಮೀಟರ್‌ಗಳ ದಟ್ಟ ಅರಣ್ಯದಲ್ಲಿ ಬರೆದ ಶೌರ್ಯದ ಗಾಥೆಯ ಹೆಸರೇ ‘ಆಪರೇಷನ್ ಮಹಾದೇವ್’. ಇದು ಕೇವಲ ಒಂದು ಕಾರ್ಯಾಚರಣೆಯಲ್ಲ, ಅನ್ಯಾಯದ ವಿರುದ್ಧ ಭಾರತೀಯ ಪಡೆಗಳು ನಡೆಸಿದ 93 ದಿನಗಳ ಮಹಾಬೇಟೆ. ಈ ರೋಚಕ ಕಥೆ ಇಲ್ಲಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ಸುಂದರ ಪ್ರವಾಸಿ ತಾಣವಾಗಿ ಉಳಿದಿರಲಿಲ್ಲ. ಲಷ್ಕರ್-ಎ-ತೈಬಾದ ಸುಲೈಮಾನ್ ಶಾ, ಹಮ್ಜಾ ಅಫ್ಘಾನಿ ಮತ್ತು ಜಿಬ್ರಾನ್ ಭಾಯ್ ಎಂಬ ಮೂವರು ಪಾಕಿಸ್ತಾನಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಗುರುತಿನ ಆಧಾರದ ಮೇಲೆ ಹತ್ಯೆ ಮಾಡಿದ್ದರು. ಈ ಕ್ರೂರ ಹತ್ಯಾಕಾಂಡ ದೇಶದ ಆತ್ಮಸಾಕ್ಷಿಯನ್ನೇ ನಡುಗಿಸಿತ್ತು. ಆದರೆ, ಈ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ತನ್ನ ‘ಸೇಡಿನ ಯೋಜನೆ’ಗೆ ನಾಂದಿ ಹಾಡಿತ್ತು.
ಪರಾರಿಯಾಗಲು ಬಿಡದ ಭದ್ರಕೋಟೆ
ಭಯೋತ್ಪಾದಕರು ಹಪತ್ನರ್ ಮತ್ತು ಬಗ್ಮಾರ್ ಮಾರ್ಗವಾಗಿ ಡಚ್ಚಿಗಮ್‌ನ ದಟ್ಟ ಕಾಡುಗಳಿಗೆ ಓಡಿಹೋದ ಮಾಹಿತಿ ಲಭಿಸಿತು. ಆರಂಭಿಕ ಹಂತದಲ್ಲಿ ಸೇನೆಯ ಗುರಿ ಸ್ಪಷ್ಟವಾಗಿತ್ತು, “ಉಗ್ರರನ್ನು ಕಣಿವೆಯಿಂದ ಹೊರಹೋಗಲು ಬಿಡಬಾರದು.” ಹ್ಯೂಮನ್ ಇಂಟೆಲಿಜೆನ್ಸ್ (HUMINT) ಮತ್ತು ಹೈಟೆಕ್ ತಾಂತ್ರಿಕ ಮಾಹಿತಿ (TECHINT) ಬಳಸಿ ಸೇನೆಯು ಉಗ್ರರ ಚಲನವಲನದ ಪ್ರತಿಯೊಂದು ಹೆಜ್ಜೆಯನ್ನೂ ಪತ್ತೆಹಚ್ಚಿತು.
ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ, 26/11 ಮುಂಬೈ ದಾಳಿಯಂತೆಯೇ ಎಲ್ಇಟಿ-ಐಎಸ್ಐ ಜಂಟಿ ಯೋಜನೆಯಾಗಿತ್ತು
ಮಹಾದೇವ್ ರಿಡ್ಜ್ ಮೇಲೆ ಹದ್ದಿನ ಕಣ್ಣು
ಮೇ ತಿಂಗಳು ಬಂದಾಗ ಕಾರ್ಯಾಚರಣೆಗೆ ಹೊಸ ಆಯಾಮ ದೊರೆಯಿತು. ಸೇನೆಯ ಗಣ್ಯ PARA (ವಿಶೇಷ ಪಡೆಗಳು) ಘಟಕ ರಂಗಕ್ಕಿಳಿಯಿತು. 300 ಚದರ ಕಿಲೋಮೀಟರ್‌ಗಳ ವಿಶಾಲ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದವು. ಆಧುನಿಕ ಡ್ರೋನ್‌ಗಳು, ಎಲೆಕ್ಟ್ರೋ-ಆಪ್ಟಿಕಲ್ ಸೆನ್ಸರ್‌ಗಳು ಮತ್ತು ರಿಮೋಟ್ ಪೈಲಟ್ ವಿಮಾನಗಳು ಕಾಡಿನ ಪ್ರತಿ ಮರದ ನಡುವೆ ಉಗ್ರರಿಗಾಗಿ ಹುಡುಕಾಟ ನಡೆಸಿದವು. ಸೇನೆಯ ಈ ನಿರಂತರ ಒತ್ತಡ ಉಗ್ರರನ್ನು ಇಲಿಗಳಂತೆ ಬಿಲ ಸೇರುವಂತೆ ಮಾಡಿತು.
ನಿರ್ಣಾಯಕ ಹಂತ: 25 ಚದರ ಕಿಲೋಮೀಟರ್‌ನ ಮೃತ್ಯುಕೂಪ
ಜುಲೈ 10, 2025 ರಂದು ಆಪರೇಷನ್ ಮಹಾದೇವ್ ತನ್ನ ಅಂತಿಮ ಘಟ್ಟಕ್ಕೆ ತಲುಪಿತು. ಲಿಡ್ವಾಸ್ ಮತ್ತು ಹರ್ವಾನ್ ಪ್ರದೇಶಗಳಲ್ಲಿ ಉಗ್ರರು ಸಿಕ್ಕಿಬಿದ್ದರು. 93 ದಿನಗಳ ಸುದೀರ್ಘ ಕಾಯುವಿಕೆಯ ನಂತರ, ಸೇನೆಯು ಉಗ್ರರ ಅಡಗುದಾಣವನ್ನು ಕೇವಲ 25 ಚದರ ಕಿಲೋಮೀಟರ್ ಪ್ರದೇಶಕ್ಕೆ ಸೀಮಿತಗೊಳಿಸಿತ್ತು.
ಅಂತಿಮ ಪ್ರಹಾರ: PARA ಪಡೆಯ ಸಾಹಸ
ಆ ಕಡಿದಾದ ಪರ್ವತ ಹಾದಿಯಲ್ಲಿ PARA ತಂಡವು ಕೇವಲ 10 ಗಂಟೆಗಳಲ್ಲಿ 3 ಕಿಲೋಮೀಟರ್‌ಗಳ ಅತ್ಯಂತ ಕಠಿಣ ಹಾದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿತು. ಉಗ್ರರಿಗೆ ಸುಳಿವು ಸಿಗುವ ಮೊದಲೇ ಭಾರತೀಯ ಸೈನಿಕರು ಸಾವುವಾಗಿ ಎದುರು ನಿಂತಿದ್ದರು. ತೀವ್ರ ಗುಂಡಿನ ಚಕಮಕಿಯ ನಂತರ, ಪಹಲ್ಗಾಮ್‌ನಲ್ಲಿ ರಕ್ತ ಚೆಲ್ಲಿದ್ದ ಆ ಮೂವರು ಪಾಕಿಸ್ತಾನಿ ಭಯೋತ್ಪಾದಕರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದರು.
ನ್ಯಾಯ ಸಿಕ್ಕಿತು, ನಂಬಿಕೆ ಉಳಿಯಿತು
ಆಪರೇಷನ್ ಮಹಾದೇವ್ ಕೇವಲ ಉಗ್ರರನ್ನು ಕೊಂದ ಕಾರ್ಯಾಚರಣೆಯಲ್ಲ, ಇದು ಭಾರತದ ತಾಂತ್ರಿಕ ಶಕ್ತಿ, ಯುದ್ಧತಂತ್ರದ ತಾಳ್ಮೆ ಮತ್ತು ಸೈನಿಕರ ಅಪ್ರತಿಮ ಶೌರ್ಯಕ್ಕೆ ಸಾಕ್ಷಿ. ಬೈಸರನ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರಿಗೆ ಸೇನೆಯು ಗನ್ ಮುಖಾಂತರವೇ ನ್ಯಾಯ ಒದಗಿಸಿತ್ತು. ಭಾರತದ ಮಣ್ಣಿನಲ್ಲಿ ರಕ್ತ ಚೆಲ್ಲುವ ಪ್ರತಿಯೊಬ್ಬರಿಗೂ ‘ಮಹಾದೇವ್’ ರೂಪದ ಸಂಹಾರ ಕಾದಿದೆ.
ಏಪ್ರಿಲ್ 22, 2025 ರಂದು ಪಹಲ್ಗಾಮ್ ಭಯಾನಕ ಸ್ಥಳವಾಗಿ ಮಾರ್ಪಟ್ಟಿತು. ಸಶಸ್ತ್ರ ಉಗ್ರಗಾಮಿಗಳು ಈ ಪ್ರದೇಶಕ್ಕೆ ನುಗ್ಗಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು, 26 ಜನರು ಸಾವನ್ನಪ್ಪಿದ್ದರು. ಏಪ್ರಿಲ್ 22, 2025 ರಂದು, ಮಧ್ಯಾಹ್ನ 1 ರಿಂದ 2.45 ರ ನಡುವೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಿಂದ ಸುಮಾರು 7 ಕಿಮೀ (4.3 ಮೈಲುಗಳು) ದೂರದಲ್ಲಿರುವ ಬೈಸರನ್ ಕಣಿವೆಯನ್ನು ಪ್ರವೇಶಿಸಿದರು. ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಈ ಕಣಿವೆಯು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಬಹುದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ