AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ, ಗಾಯಗೊಂಡಿದ್ದ ಸ್ವರ್ಗಕ್ಕೆ ಮರಳಿದ ಚೈತನ್ಯ, ಚೇತರಿಕೆಯ ಹಾದಿ ಹೇಗಿದೆ?

ಒಂದು ವರ್ಷದ ಹಿಂದೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತುತ್ತಾಗಿತ್ತು. ಆದರೆ, ಅಂದಿನಿಂದ ಈ ಪ್ರದೇಶ ಅದ್ಭುತವಾಗಿ ಚೇತರಿಸಿಕೊಂಡಿದೆ. ಸುಧಾರಿತ ಭದ್ರತಾ ವ್ಯವಸ್ಥೆಗಳು, ಸ್ಥಳೀಯರ ಸಹಕಾರ ಮತ್ತು ಹೊಸ ಪ್ರವಾಸೋದ್ಯಮ ನೀತಿಗಳಿಂದ ಪಹಲ್ಗಾಮ್ ಮತ್ತೆ ಜೀವಂತವಾಗಿದೆ. ಈಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಹೋಟೆಲ್ ಬುಕಿಂಗ್‌ಗಳು 80% ದಾಟಿವೆ. ಕಾಶ್ಮೀರದ ಜನತೆಯ ಅದಮ್ಯ ಶಕ್ತಿಗೆ ಇದು ಒಂದು ಉದಾಹರಣೆ.

Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ, ಗಾಯಗೊಂಡಿದ್ದ ಸ್ವರ್ಗಕ್ಕೆ ಮರಳಿದ ಚೈತನ್ಯ, ಚೇತರಿಕೆಯ ಹಾದಿ ಹೇಗಿದೆ?
ಪಹಲ್ಗಾಮ್ Image Credit source: PTI
ನಯನಾ ರಾಜೀವ್
|

Updated on: Apr 21, 2026 | 9:28 AM

Share

ಪಹಲ್ಗಾಮ್, ಏಪ್ರಿಲ್ 21: ಒಂದು ವರ್ಷದ ಹಿಂದೆ, ಪಹಲ್ಗಾಮ್‌(Pahalgam)ನ ಬೀದಿಗಳು ಸ್ತಬ್ಧವಾಗಿದ್ದವು. ಪ್ರವಾಸಿಗರ ಗದ್ದಲದ ಬದಲು ಸೈರನ್ ಸದ್ದು ಮತ್ತು ಆತಂಕ ಮನೆಮಾಡಿತ್ತು. ದಾಳಿಯ ನಂತರದ ತಿಂಗಳುಗಳಲ್ಲಿ ಹೋಟೆಲ್‌ಗಳು ಖಾಲಿ ಬಿದ್ದಿದ್ದವು, ಕುದುರೆ ಸವಾರರು ಕೆಲಸವಿಲ್ಲದೆ ಕಂಗಾಲಾಗಿದ್ದರು. ಆದರೆ, ಕಾಶ್ಮೀರದ ಜನರ ಅದಮ್ಯ ಚೇತರಿಕೆ ಶಕ್ತಿ ಮತ್ತು ಬದಲಾದ ಭದ್ರತಾ ವ್ಯವಸ್ಥೆ ಇಂದು ಪಹಲ್ಗಾಮ್ ಅನ್ನು ಮತ್ತೆ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಮಾಡಿದೆ.

ಭದ್ರತೆಯೇ ಪ್ರವಾಸಿಗರ ಭರವಸೆ ದಾಳಿಯ ನಂತರ, ಪ್ರವಾಸಿಗರ ವಿಶ್ವಾಸವನ್ನು ಮರಳಿ ಗಳಿಸುವುದು ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಸರ್ಕಾರ ಮತ್ತು ಭದ್ರತಾ ಪಡೆಗಳು ‘ಮಲ್ಟಿ-ಲೇಯರ್’ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿವೆ.ಬೆಟ್ಟದ ತಪ್ಪಲುಗಳಲ್ಲಿ ಹಗಲಿರುಳು ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ. ಪ್ರವಾಸಿಗರಿಗೆ ನೆರವಾಗಲೆಂದೇ ವಿಶೇಷ ತಂಡಗಳನ್ನು ನಿಯೋಜಿಸಲಾಗಿದ್ದು, ಇದು ಅತಿಥಿಗಳಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸಿದೆ.

ಸ್ಥಳೀಯರ ಒಗ್ಗಟ್ಟು ಮತ್ತು ಆತಿಥ್ಯ “ನಮಗೆ ವ್ಯಾಪಾರಕ್ಕಿಂತ ಹೆಚ್ಚಾಗಿ, ನಮ್ಮ ಊರಿಗೆ ಬರುವ ಅತಿಥಿಗಳ ಸುರಕ್ಷತೆ ಮುಖ್ಯ” ಎನ್ನುತ್ತಾರೆ ಇಲ್ಲಿನ ಸ್ಥಳೀಯ ವ್ಯಾಪಾರಿಗಳು. ದಾಳಿಯ ನಂತರ ಸ್ಥಳೀಯ ಸಮುದಾಯವು ಪ್ರವಾಸಿಗರನ್ನು ಸ್ವಾಗತಿಸಲು ಹೆಚ್ಚಿನ ಉತ್ಸಾಹ ತೋರುತ್ತಿದೆ. ಹೋಂ ಸ್ಟೇಗಳು ಮತ್ತು ಸಣ್ಣ ಕೆಫೆಗಳು ಪ್ರವಾಸಿಗರಿಗೆ ಕಾಶ್ಮೀರದ ನೈಜ ಸಂಸ್ಕೃತಿಯನ್ನು ಪರಿಚಯಿಸುವ ಮೂಲಕ ಭಯವನ್ನು ಹೋಗಲಾಡಿಸುತ್ತಿವೆ.

ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ ಹಿಂದೆ ಮೂವರು ಪಾಕಿಸ್ತಾನಿ ಉಗ್ರರ ಕೈವಾಡ; ಎನ್​ಐಎ ತನಿಖೆಯಲ್ಲಿ ಬಹಿರಂಗ

ಬದಲಾದ ಪ್ರವಾಸೋದ್ಯಮ ನೀತಿ ಕೇವಲ ಸೌಂದರ್ಯವನ್ನಷ್ಟೇ ನಂಬಿ ಕೂರದೇ, ಸಾಹಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯುವ ಪ್ರವಾಸಿಗರನ್ನು ಆಕರ್ಷಿಸಲು ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಕಣಿವೆಯ ಆಯಕಟ್ಟಿನ ಜಾಗಗಳಲ್ಲಿ ಸುಧಾರಿತ ಇಂಟರ್ನೆಟ್ ಸೌಲಭ್ಯವು ‘ವರ್ಕ್ ಫ್ರಮ್ ಎನಿವೇರ್’ ಎನ್ನುವ ಐಟಿ ಉದ್ಯೋಗಿಗಳನ್ನು ಪಹಲ್ಗಾಮ್‌ಗೆ ಸೆಳೆಯುತ್ತಿದೆ.

ಅಂಕಿ-ಅಂಶಗಳು ಹೇಳುವ ಸತ್ಯ ಕಳೆದ ಆರು ತಿಂಗಳಲ್ಲಿ ಪಹಲ್ಗಾಮ್‌ಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹೋಟೆಲ್ ಬುಕ್ಕಿಂಗ್‌ಗಳು ಈಗ 80% ದಾಟಿದ್ದು, ಇದು ಈ ಭಾಗದ ಆರ್ಥಿಕತೆಗೆ ಮರುಜೀವ ನೀಡಿದೆ.

ಪಹಲ್ಗಾಮ್ ಕೇವಲ ಒಂದು ಪ್ರವಾಸಿ ತಾಣವಲ್ಲ, ಅದು ಸಂಘರ್ಷದ ಮೇಲಿನ ಶಾಂತಿಯ ಗೆಲುವು. ಭಯೋತ್ಪಾದನೆಯ ಕಪ್ಪು ಚುಕ್ಕೆಯನ್ನು ಮರೆಸಿ, ಪ್ರಕೃತಿಯ ಹಸಿರು ಮತ್ತು ಜನರ ಪ್ರೀತಿ ಇಲ್ಲಿ ಮತ್ತೆ ಗೆದ್ದಿದೆ. ಇಂದು ಪಹಲ್ಗಾಮ್‌ಗೆ ಹೋದರೆ ನಿಮಗೆ ಕಾಣುವುದು ಭಯವಲ್ಲ, ಬದಲಾಗಿ ಕಾಶ್ಮೀರದ ಬೆಚ್ಚಗಿನ ಆತಿಥ್ಯ.

2025ರ ಏಪ್ರಿಲ್ 22 ರಂದು ಏನಾಗಿತ್ತು? ಏಪ್ರಿಲ್ 22, 2025 ರಂದು ಭಯಾನಕ ಸ್ಥಳವಾಗಿ ಮಾರ್ಪಟ್ಟಿತು. ಸಶಸ್ತ್ರ ಉಗ್ರಗಾಮಿಗಳು ಈ ಪ್ರದೇಶಕ್ಕೆ ನುಗ್ಗಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು, 26 ಜನರು ಸಾವನ್ನಪ್ಪಿದ್ದರು. ಏಪ್ರಿಲ್ 22, 2025 ರಂದು, ಮಧ್ಯಾಹ್ನ 1 ರಿಂದ 2.45 ರ ನಡುವೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಿಂದ ಸುಮಾರು 7 ಕಿಮೀ (4.3 ಮೈಲುಗಳು) ದೂರದಲ್ಲಿರುವ ಬೈಸರನ್ ಕಣಿವೆಯನ್ನು ಪ್ರವೇಶಿಸಿದರು. ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಈ ಕಣಿವೆಯು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಬಹುದು.

ಸರಿಸುಮಾರು 200 ಮೀಟರ್ ಅಗಲ ಮತ್ತು 800 ಮೀಟರ್ ಉದ್ದವನ್ನು ಹೊಂದಿರುವ ಈ ಸ್ಥಳದಲ್ಲಿ ಯಾವುದೇ ಸಶಸ್ತ್ರ ಭದ್ರತಾ ಉಪಸ್ಥಿತಿ ಇರಲಿಲ್ಲ. ಆಗ ಜನರ ಬಳಿ ಯಾವ ಧರ್ಮ ಎಂದು ಕೇಳಿ ಗಂಡು ಹಾರಿಸಿದ್ದರು. ಆ ಸಮಯದಲ್ಲಿ ಝಿಪ್ ಲೈನ್‌ನಲ್ಲಿದ್ದ ಅಹಮದಾಬಾದ್‌ನ ಪ್ರವಾಸಿಗರೊಬ್ಬರು ಆಕಸ್ಮಿಕವಾಗಿ ಈ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us