ವಿಜಯ್ ಜತೆ ‘ಜನ ನಾಯಗನ್’ ಚಿತ್ರದಲ್ಲಿ ನಟಿಸಿದ ಖುಷಿಯಲ್ಲಿ ಕನ್ನಡಿಗ ವಜ್ರಾಂಗ್ ಶೆಟ್ಟಿ
ಕನ್ನಡದ ಸಿನಿಮಾಗಳಲ್ಲಿ ನಾಯಕನಾಗಿ ಹಾಗೂ ಖಳನಾಯಕನಾಗಿ ಅಭಿನಯಿಸಿರುವ ವಜ್ರಾಂಗ್ ಶೆಟ್ಟಿ ಅವರು ಪರಭಾಷೆಯಲ್ಲಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಕಳೆದ ವಾರ ಅವರ ಪಾಲಿಗೆ ಸ್ಪೆಷಲ್ ಆಗಿತ್ತು. ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿದ್ದು, ಅದರಲ್ಲಿ ವಜ್ರಾಂಗ್ ಶೆಟ್ಟಿ ನಟಿಸಿದ್ದಾರೆ.
Updated on: Jul 30, 2026 | 5:35 PM

ಜುಲೈ 23ರಂದು ಬಿಡುಗಡೆ ಆದ ತಮಿಳಿನ ‘ಜನ ನಾಯಗನ್’ ಸಿನಿಮಾದಲ್ಲಿ ಕನ್ನಡದ ಕೆಲವು ಕಲಾವಿದರು ಕೂಡ ನಟಿಸಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಬಳಿಕ ಪ್ರಮುಖ ಖಳನ ಪಾತ್ರದಲ್ಲಿ ಕನ್ನಡದ ವಜ್ರಾಂಗ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ.

ದಳಪತಿ ವಿಜಯ್ ಅವರ ಕೊನೆಯ ಸಿನಿಮಾದಲ್ಲಿ ತಾವೂ ಕೂಡ ನಟಿಸಿರುವುದಕ್ಕೆ ವಜ್ರಾಂಗ್ ಶೆಟ್ಟಿ ಅವರಿಗೆ ಖುಷಿ ಇದೆ. ಮೂಲತಃ ಕುಂದಾಪುರದ ಮಣಿ ಶೆಟ್ಟಿ, ಕನ್ನಡ ಸಿನಿಮಾರಂಗದಲ್ಲಿ ವಜ್ರಾಂಗ್ ಶೆಟ್ಟಿ ಎಂದೇ ಗುರುತಿಸಿಕೊಂಡಿದ್ದಾರೆ. ಪರಭಾಷೆಯ ಚಿತ್ರರಂಗದಲ್ಲೂ ಆ್ಯಕ್ಟೀವ್ ಆಗಿದ್ದಾರೆ.

2014ರಲ್ಲಿ ಮಿಸ್ಟರ್ ಕುಂದಾಪುರ ಬಿರುದು ಪಡೆದ ವಜ್ರಾಂಗ್ ಶೆಟ್ಟಿ ಅವರು 6.3 ಅಡಿ ಎತ್ತರವಾದ ನಿಲುವು ಮತ್ತು ಆಕರ್ಷಕ ಮೈಕಟ್ಟು ಹೊಂದಿದ್ದಾರೆ. ಆದ್ದರಿಂದ ನಾಯಕನಾಗಿ ಮತ್ತು ಖಳನಾಯಕನಾಗಿ ಕೂಡ ಅವರು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣದ ‘ಸಿದ್ದಾರ್ಥ’ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುವ ಮೂಲಕ ವಜ್ರಾಂಗ್ ಶೆಟ್ಟಿ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ದೊಡ್ಮನೆ ನಿರ್ಮಾಣ ಮಾಡಿದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದಿದ್ದು ಅವರ ಪಾಲಿನ ಖುಷಿ.

‘ಮಂತ್ರಂ’, ‘ಬಬ್ಲುಷಾ’, ‘ಮಾದ ಮತ್ತು ಮಾನಸಿ’, ‘ಜೇಮ್ಸ್’ ಮುಂತಾದ ಸಿನಿಮಾಗಳಲ್ಲಿ ವಜ್ರಾಂಗ್ ಶೆಟ್ಟಿ ಅಭಿನಯಿಸಿ ಮನರಂಜನೆ ನೀಡಿದ್ದಾರೆ. ‘ಸಲಾರ್’ ಮೂಲಕ ತೆಲುಗು ಚಿತ್ರಕ್ಕೂ ಅವರು ಕಾಲಿಟ್ಟರು. ‘ಜನ ನಾಯಗನ್’ ಮೂಲಕ ಈಗ ತಮಿಳಿಗೆ ಎಂಟ್ರಿ ನೀಡಿದ್ದಾರೆ.




