ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಪತ್ರ ಬರೆದಿದ್ದಾಗಿ ಪರಮ್ವೀರ್ ಸಿಂಗ್ ಖಚಿತಪಡಿಸಿದ್ದಾರೆ. ಅನಿಲ್ ದೇಶ್ಮುಖ್ ಮುಂಬೈನ ಬಾರ್ ಮತ್ತು ರೆಸ್ಟೊರೆಂಟ್ಗಳಿಂದ 100 ಕೋಟಿ ಹಣವನ್ನು ವಸೂಲು ಮಾಡಬೇಕೆಂದು ಸಸ್ಪೆಂಡ್ ಆಗಿರುವ ಪೊಲಿಸ್ ಅಧಿಕಾರಿ ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು ಎಂದು ಪರಮ್ವೀರ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದರು. ನಂತರ ತಡರಾತ್ರಿ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ‘ಅದು ಪರಮ್ವೀರ್ ಸಿಂಗ್ ಬರೆದ ಪತ್ರವಲ್ಲ. ಪತ್ರದ ಮೂಲದ ಕುರಿತು ಅಧಿಕೃತತೆಯಿಲ್ಲ’ ಎಂದು ಹೇಳಿತ್ತು. ಆದರೆ ಇಂದು (ಮಾರ್ಚ್ 21) ಬೆಳಗ್ಗೆ ಪರಮ್ವೀರ್ ಸಿಂಗ್ ಸ್ವತಃ ತಾವೇ ಪತ್ರ ಬರೆದಿದ್ದಾಗಿ ಖಚಿತಪಡಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಚೇರಿಗೆ ಸಹಿ ಮಾಡಿದ ಪತ್ರವನ್ನು ಕಳಿಸಿದ್ದಾಗಿ ಅವರು ತಿಳಿಸಿದ್ದಾರೆ.
ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ಮೈತ್ರಿಕೂಟದ ಎನ್ಸಿಪಿ ಪಕ್ಷದ ಅನಿಲ್ ದೇಶ್ಮುಖ್ ಗೃಹ ಸಚಿವರಾಗಿದ್ದಾರೆ. ಸರ್ಕಾರದ ಚುಕ್ಕಾಣಿಯಲ್ಲಿ ಕುಳಿತಿರುವ ಇಬ್ಬರ ನಡುವೆ ಅಭಿಪ್ರಾಯ ಬೇಧ, ಸಣ್ಣಪುಟ್ಟ ವೈಮನಸ್ಸು ಉದ್ಭವಿಸಿದ ಉದಾಹರಣೆಗಳಿವೆ. ಗೃಹ ಸಚಿವ ಅನಿಲ್ ದೇಶ್ಮುಖ್ ಮೇಲೆ ಪರಮ್ವೀರ್ ಸಿಂಗ್ ಮಾಡಿರುವ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸುವ ಆರೋಪ ಮಹಾರಾಷ್ಟ್ರ ಸರ್ಕಾರಕ್ಕೆ ಕುತ್ತು ತರುವ ಶಕ್ತಿ ಹೊಂದಿದೆ. ಪರಮ್ವೀರ್ ಸಿಂಗ್ ಗೃಹ ಸಚಿವರ ಮೇಲೇ ಆರೋಪ ಮಾಡಿರುವುದು ಶಿವಸೇನೆ-ಎನ್ಸಿಪಿಯ ದೋಸ್ತಿ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ಪತ್ರದ ಸಂಪೂರ್ಣ ವಿವರ ಓದಲು ಇಲ್ಲಿ ಕ್ಲಿಕ್ ಮಾಡಿ: ಪರಮ್ವೀರ್ ಸಿಂಗ್ ಉದ್ಧವ್ ಠಾಕ್ರೆಗೆ ಬರೆದ ಪತ್ರ
ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಮೇಲೆ ಇನ್ನೂ ಗಂಭೀರ ಆರೋಪ ಮಾಡಿದ್ದಾರೆ. ಮುಂಬೈನ ಖಾಸಗಿ ಹೊಟೇಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸದ ಮೋಹನ್ ದೇಲ್ಕರ್ ಸಾವಿಗೂ ಅನಿಲ್ ದೇಶ್ಮುಖ್ ಹೆಸರು ಥಳುಕುಹಾಕಿಕೊಂಡಿದೆ. ‘ಹಿರಿಯ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಆತ್ಮಹತ್ಯಾ ಪತ್ರ ಬರೆದಿದ್ದ ಸಂಸದ ಮೋಹನ್ ದೇಲ್ಕರ್ ಬರೆದುಕೊಂಡಿದ್ದರಂತೆ. ಆದರೆ ಮೋಹನ್ ದೇಲ್ಕರ್ ಅವರ ಸಾವನ್ನು ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸುವಂತೆ ಗೃಹ ಸಚಿವ ಅನಿಲ್ ದೇಶ್ಮುಖ್ ಒತ್ತಡ ಹೇರಿದ್ದರು ಎಂದು ಪರಮ್ವೀರ್ ಸಿಂಗ್ ಆರೋಪಿಸಿದ್ದಾರೆ.
ಅನಿಲ ದೇಶ್ಮುಖ್ಗೆ ನನ್ನ ಮೇಲೆ ಅತ್ಯಂತ ಸಿಟ್ಟಿತ್ತು. ಮೋಹನ್ ದೇಲ್ಕರ್ ಸಾವನ್ನು SIT ಗೆ ನಿಡುವುದಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೇಶ್ಮುಖ್ ತಿಳಿಸಿದ್ದರು ಎಂದು ಪರಮ್ವೀರ್ ಸಿಂಗ್ ಪತ್ರದಲ್ಲಿ ದೂರಿದ್ದಾರೆ.
ಗೃಹ ಸಚಿವರ ರಾಜೀನಾಮೆಗೆ ಆಗ್ರಹ
ಈ ಸಂಬಂಧ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರೂ ಆಗಿರುವ ದೇವೇಂದ್ರ ಫಡ್ನವಿಸ್, ಗೃಹ ಸಚಿವರು ರಾಜೀನಾಮೆ ನೀಡಬೇಕು. ಒಂದುವೇಳೆ ಅನಿಲ್ ದೇಶ್ಮುಖ್ ರಾಜೀನಾಮೆ ನೀಡದಿದ್ದರೆ ಖುದ್ದು ಮುಖ್ಯಮಂತ್ರಿ ಅವರು ಗೃಹ ಸಚಿವರನ್ನು ತೆಗೆದುಹಾಕಬೇಕು. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಈ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಮುಖ್ಯಮಂತ್ರಿಗೆ ಅರಿವಿತ್ತು ಎಂದೂ ಪತ್ರದಲ್ಲಿ ಹೇಳಲಾಗಿದೆ. ಹಾಗಾಗ್ಯೂ ಯಾಕೆ ಅವರು ಏನೂ ಕ್ರಮ ಕೈಗೊಂಡಿಲ್ಲ ಎಂದು ಕೇಳಿದ್ದಾರೆ.
ತನ್ನ ಮೇಲಿನ ಆರೋಪ ಸುಳ್ಳು ಎಂದ ಅನಿಲ್ ದೇಶ್ಮುಖ್
ಆದರೆ, ಪರಮ್ವೀರ್ ಸಿಂಗ್ ಮಾಡಿರುವ ಆರೋಪಗಳನ್ನು ಗೃಹ ಸಚಿವ ಅನಿಲ್ ದೇಶ್ಮುಖ್ ತಳ್ಳಿ ಹಾಕಿದ್ದಾರೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅವರು ಹೇಳಿದ್ದಾರೆ.
ಪರಮ್ವೀರ್ ಸಿಂಗ್ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು. ಹಾಗೂ ನಾನು ಮಾನಹಾನಿ ಪ್ರಕರಣ ದಾಖಲಿಸುತ್ತಿರುವ ಕಾರಣ ಅವರು ಮಾಡಿರುವ ಆರೋಪಗಳನ್ನು ಸಾಕ್ಷೀಕರಿಸಬೇಕು ಎಂದು ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.
ಪತ್ರದ ಸಂಪೂರ್ಣ ವಿವರ ಓದಲು ಇಲ್ಲಿ ಕ್ಲಿಕ್ ಮಾಡಿ: ಪರಮ್ವೀರ್ ಸಿಂಗ್ ಉದ್ಧವ್ ಠಾಕ್ರೆಗೆ ಬರೆದ ಪತ್ರ
ಇದನ್ನೂ ಓದಿ: Mukesh Ambani | ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ
ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಪತ್ತೆ ಪ್ರಕರಣ ; ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್
ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್ವೀರ್ ಸಿಂಗ್ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..
Published On - 11:01 am, Sun, 21 March 21