ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಪತ್ತೆ ಪ್ರಕರಣ ; ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್
ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಸಚಿನ್ ವಾಜೆ, ಅಂಬಾನಿ ಮನೆ ಬಳಿ ಪತ್ತೆಯಾದ ವಾಹನದಲ್ಲಿ ಸ್ಫೋಟಕ ಇರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಹೊತ್ತಿದ್ದ ಕಾರು ಸಿಕ್ಕ ಪ್ರಕರಣದಲ್ಲಿ ಎನ್ಐಎ ದಳದಿಂದ ಬಂಧಿಸಲ್ಪಟ್ಟಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಮುಂಬೈ ಸ್ಪೆಷಲ್ ಬ್ರ್ಯಾಂಚ್ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸಚಿನ್ ವಾಜೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸ್ಫೋಟಕ ಇಟ್ಟಿದ್ದ ತಂಡದಲ್ಲಿ ಸಚಿನ್ ವಾಜೆ ಕೂಡ ಭಾಗಿಯಾಗಿದ್ದು ಈ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.
ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಸಚಿನ್ ವಾಜೆ, ಅಂಬಾನಿ ಮನೆ ಬಳಿ ಪತ್ತೆಯಾದ ವಾಹನದಲ್ಲಿ ಸ್ಫೋಟಕ ಇರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಫೆಬ್ರವರಿ 25ರಂದು ದಕ್ಷಿಣ ಮುಂಬೈನ ಕಾರ್ಮಿಚೇಲ್ ರಸ್ತೆಯಲ್ಲಿರುವ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿರುವ ಕಾರೊಂದು ಪತ್ತೆಯಾಗಿತ್ತು. ಈ ಕಾರಿನೊಳಗೆ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಡಲಾಗಿತ್ತು. ಅದೃಷ್ಟವಶಾತ್ ಜಿಲೆಟಿನ್ ಸ್ಫೋಟಗೊಳ್ಳದ ಕಾರಣ ಭಾರಿ ಅನಾಹುತ ತಪ್ಪಿತ್ತು.
ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಮಹೇಂದ್ರಾ ಸ್ಕಾರ್ಪಿಯೋ ಕಾರನ್ನು ನಿರ್ವಹಿಸುತ್ತಿದ್ದ ಮನ್ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಹಿಂದೆ ಸಚಿನ್ ವಾಜೆ ಅವರ ಕೈವಾಡ ಇದೆ ಎಂದು ಮನ್ಸುಖ್ ಪತ್ನಿ ಆರೋಪಿಸಿದ್ದರು. ಈ ಆರೋಪ ಕೇಳಿ ಬಂದ ಮೇಲೆ ಘಟನೆಯ ತನಿಖೆಯ ಹೊಣೆ ಹೊತ್ತಿದ್ದ ವಾಜೆ ಅವರನ್ನು ತನಿಖಾ ತಂಡದಿಂದ ಕೈಬಿಡಲಾಗಿತ್ತು. ಶನಿವಾರ ವಜೆ ಅವರನ್ನು ಎನ್ಐಎ ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ರಾತ್ರಿ 11.50ಕ್ಕೆ ಅರೆಸ್ಟ್ ಮಾಡಿದೆ. ಭಾನುವಾರ ಅವರನ್ನು ಕೋರ್ಟ್ಗೆ ಹಾಜರು ಪಡಿಸಲಾಗುವುದು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದರು.
ತಿಹಾರ್ ಜೈಲಿನವರೆಗೂ ವಿಸ್ತರಿಸಿದ ಪ್ರಕರಣ
ಮುಕೇಶ್ ಅಂಬಾನಿ ನಿವಾಸದ ಎದುರು ಅಪರಿಚಿತ ಕಾರಿನಲ್ಲಿ ಪತ್ತೆಯಾಗಿದ್ದ ಸ್ಫೋಟಕಗಳು ತಿಹಾರ್ ಜೈಲಿನವರೆಗೂ ಸಂಪರ್ಕ ಹೊಂದಿವೆ ಎಂಬ ವಿವರಗಳು ತಿಹಾರ್ ಜೈಲು ಅಧಿಕಾರಿಗಳು (ಮಾರ್ಚ್ 11) ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿತ್ತು. ಜೈಷ್-ಉಲ್-ಹಿಂದ್ ಸಂಘಟನೆ ಪ್ರಕರಣದ ಹೊಣೆ ಹೊತ್ತುಕೊಂಡಿತ್ತು. ಇದೀಗ, ಜೈಷ್-ಉಲ್-ಹಿಂದ್ ಸಂಘಟನೆಯ ಟೆಲಿಗ್ರಾಂ ಚಾನೆಲ್ ಸೃಷ್ಟಿಯಾಗಿದ್ದ ಮೊಬೈಲ್ ಮತ್ತು ಸಿಮ್ ಕಾರ್ಡ್ ತಿಹಾರ್ ಜೈಲಿನಲ್ಲಿರುವುದು ಪತ್ತೆಯಾಗಿದೆ.
ತಿಹಾರದ ಉಪ ಕಾರಾಗೃಹ ಸಂಖ್ಯೆ 8ರಲ್ಲಿ ದೊರೆತ ಮೊಬೈಲ್ನಿಂದ ಮುಕೇಶ್ ಅಂಬಾನಿ ಮನೆ ಎದುರು ಸ್ಪೋಟಕ ಇರಿಸಲು ಸಂಚು ರೂಪಿಸಿರುವುದು ತಿಳಿದುಬಂದಿದೆ. ತೆಹ್ಸಿನ್ ಅಖ್ತರ್ ಬರ್ರಾಕ್ ಎಂಬ ಇಂಡಿಯನ್ ಮುಜಾಹುದ್ದೀನ್ ಸಂಘಟನೆಗೆ ಸೇರಿದ ಬಂಧಿತ ಉಗ್ರಗಾಮಿಯ ಬಳಿ 9311**0819 ಸಂಖ್ಯೆಯ ಸಿಮ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಇದೇ ಮೊಬೈಲ್ ನಂಬರ್ನಿಂದ ರಚಿಸಿದ ಟೆಲಿಗ್ರಾಂ ಚಾನೆಲ್ ಮೂಲಕ ಸಂಚಿಗೆ ಯೋಜನೆ ರೂಪಿಸಲಾಗಿತ್ತು.
ಈ ಮೊಬೈಲ್ ನಂಬರ್ನ ಮೂಲವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಪೂರ್ವ ದೆಹಲಿಯ ರಘುಬರ್ ಪುರದ ಜಯದೀಪ್ ಲೂಧಿಯಾ ಎಂಬುವವರ ಹೆಸರಲ್ಲಿ ಈ ಸಂಖ್ಯೆ ನೋಂದಣಿಯಾಗಿದ್ದು, ಕಳೆದ ಜುಲೈನಲ್ಲಿ ಮೊದಲ ಬಾರಿಗೆ ಸಕ್ರಿಯವಾಗಿತ್ತು. ಆದರೆ ಕೆಲ ಸಮಯದ ನಂತರ ತಿಹಾರ್ ಜೈಲಿಗೆ ಕಳ್ಳ ಸಾಗಾಣಿಕೆಯಾಗಿತ್ತು ಎಂದು ಪೊಲೀಸರು ತನಿಖೆ ತಿಳಿಸಿದೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇರಿಸಿದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ
ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ
Published On - 1:51 pm, Mon, 15 March 21