ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ

Mukesh Ambani: ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳ ಜತೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರಿಗೆ ಬೆದರಿಕೆಯೊಡ್ಡಿರುವ ಪತ್ರವೊಂದು ಲಭಿಸಿದೆ.

ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ
ಸ್ಫೋಟಕ ಪತ್ತೆಯಾದ ಕಾರು
Follow us
|

Updated on:Feb 26, 2021 | 12:11 PM

ಮುಂಬೈ: ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ. ಇಲ್ಲಿನ ಕಾರ್ಮೈಕಲ್ ರಸ್ತೆ ಬಳಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳ ಜತೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರಿಗೆ ಬೆದರಿಕೆಯೊಡ್ಡಿರುವ ಪತ್ರವೊಂದು ಲಭಿಸಿದೆ. ಈ ಕಾರಿನಲ್ಲಿ ಸ್ಫೋಟಕವನ್ನು ಅಸೆಂಬಲ್ ಮಾಡಿಲ್ಲ, ಮುಂದಿನ ಬಾರಿ ಇದೇ ರೀತಿಯಲ್ಲಿರುವುದಿಲ್ಲ ಎಂದು ಪತ್ರದಲ್ಲಿ ಬರೆದಿತ್ತು.

ಈ ಪತ್ರ ಹಿಂದಿಯಿಂದ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಬರೆದದ್ದಾಗಿದ್ದು, ಹಲವಾರು ಕಾಗುಣಿತ ದೋಷಗಳಿವೆ. ಪತ್ರವನ್ನು ನೋಡಿದರೆ ಪತ್ರ ಬರೆದ ವ್ಯಕ್ತಿಗೆ ಸರಿಯಾಗಿ ಬರೆಯಲು ಬರುವುದಿಲ್ಲ ಅಥವಾ ಬರೆಯಲು ಗೊತ್ತಿಲ್ಲ ಎಂಬಂತೆ ನಟಿಸಿದ್ದಾಗಿರಬಹುದು ಎಂದು ಮುಂಬೈ ಪೊಲೀಸರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗಾಂದೇವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಾಹನ ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮತ್ತು ಇತರ ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದವು. ಕಾರನ್ನು ತಪಾಸಣೆಗೊಳಪಡಿಸಿದಾಗ ಅದರೊಳಗೆ ಜಿಲೆಟಿನ್ ಪತ್ತೆಯಾಗಿದೆ. ಅದು ಬಿಡಿ ಬಿಡಿಯಾಗಿಯೇ ಇದ್ದುಸ್ಫೋಟಕವನ್ನು ಸಿದ್ಧಪಡಿಸಿರಲಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸ್ ವಕ್ತಾರ, ಉಪ ಪೊಲೀಸ್ ಆಯುಕ್ತ ಚೈತನ್ಯ. ಎಸ್ ಹೇಳಿದ್ದಾರೆ.

ಆ ಕಾರನ್ನು ನಾವು ಅಲ್ಲಿಂದ ತೆರವುಗೊಳಿಸಿ ತನಿಖೆ ನಡೆಸುತ್ತಿದ್ದೇನೆ. ಕಾರಿನಲ್ಲಿ ಒಂದಕ್ಕಿಂತ ಹೆಚ್ಚು ನಂಬರ್ ಪ್ಲೇಟ್ ಪತ್ತೆಯಾಗಿದ್ದು , ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ದೃಶ್ಯಗಳನ್ನು ನೋಡಿದರೆ ಗುರುವಾರ ಬೆಳಗ್ಗೆ ಈ ವಾಹನವನ್ನು ಅಲ್ಲಿ ನಿಲ್ಲಿಸಿರುವುದು ಕಾಣುತ್ತದೆ. ವಿಜಯ್ ಸ್ಟೋರ್ಸ್ ಮುಂಭಾಗದಲ್ಲಿ ಈ ಕಾರು ನಿಲ್ಲಿಸಲಾಗಿತ್ತು. ಗುರುವಾರ ತಡರಾತ್ರಿ 1 ಗಂಟೆಗೆ ಈ ಕಾರು ಅಲ್ಲಿ ತಂದು ನಿಲ್ಲಿಸಲಾಗಿತ್ತು ಎಂಬುದು ತನ್ನ ಅಂಗಡಿಯ ಮುಂದೆ ಅಳವಡಿಸಿರುವ ಸಿಸಿಟಿವಿ ದೃಶ್ಯದಲ್ಲಿ ಕಂಡಿದೆ ಎಂದು ವಿಜಯ್ ಸ್ಟೋರ್ಸ್ ಅಂಗಡಿ ಮಾಲೀಕ ರಾಜೇಶ್ ಸಿಂಗ್ ಹೇಳಿದ್ದಾರೆ.

ಗುರುವಾರ ಮುಂಜಾನೆ 3 ಗಂಟೆಯವರೆಗೆ ಚಾಲಕ ಕಾರಿನಿಂದ ಹೊರಬರಲಿಲ್ಲ ಎಂದು ರಾಜೇಶ್ ಸಿಂಗ್ ಹೇಳಿದ್ದಾರೆ. ಕಾರನ್ನು ಅಲ್ಲಿ ಬಿಟ್ಟು ಹೋದ ಚಾಲಕ ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದು ತಮಾಷೆಗಾಗಿ ಮಾಡಿದ ಕೃತ್ಯ ಆಗಿರಬಹುದು. ಆದರೆ ನಾವು ಆ ವ್ಯಕ್ತಿಯನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಕಾರಿನ ಬಾಗಿಲು ತೆರೆದಾಗ ಅದರೊಳಗೆ ಹಲವಾರು ನಂಬರ್ ಪ್ಲೇಟ್ ಪತ್ತೆಯಾಗಿತ್ತು ಎಂದು ರಾಜೇಶ್ ಸಿಂಗ್ ಹೇಳಿದ್ದಾರೆ. ಗುರುವಾರ ಸಂಜೆ ಅಂಬಾನಿಯವರ ಮನೆ ಅಂಟಿಲ್ಲಾ ಹೊರಗೆ ಹಲವಾರು ಪೊಲೀಸ್ ವ್ಯಾನ್, ಕಮಾಂಡೊ ಮತ್ತು ಶ್ವಾನದಳ ನಿಯೋಜಿಸಲಾಗಿತ್ತು. ಜಿಲೆಟಿನ್ ಕಡ್ಡಿಗಳನ್ನು ಇಟ್ಟಿರುವ ಕಾರೊಂದು ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾಗಿದೆ. ಮುಂಬೈ ಪೊಲೀಸರ ಅಪರಾಧ ದಳ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್​ಮುಖ್ ಹೇಳಿದ್ದಾರೆ.

 ಇದನ್ನೂ ಓದಿ: Mukesh Ambani | ಮುಕೇಶ್ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು​ ಪತ್ತೆ

Published On - 12:06 pm, Fri, 26 February 21