ಬೆಂಗಳೂರಲ್ಲಿ ಲಾರಿ ಮುಷ್ಕರದ ಬಿಸಿ; ಪ್ರತಿಭಟನೆ ಕೈಬಿಡಲು ಸಚಿವ ಈಶ್ವರಪ್ಪ ಮನವಿ

ಬೆಂಗಳೂರಲ್ಲಿ ಲಾರಿ ಮುಷ್ಕರದ ಬಿಸಿ; ಪ್ರತಿಭಟನೆ ಕೈಬಿಡಲು ಸಚಿವ ಈಶ್ವರಪ್ಪ ಮನವಿ
ಲಾರಿ ಮಾಲೀಕರ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆ

Lorry Strike: ಇಂದು 6 ಲಕ್ಷ ಲಾರಿಗಳು ಪ್ರತಿಭಟನಾ ನಿಮಿತ್ತ ಸ್ಥಗಿತಗೊಳ್ಳಲಿದ್ದು, ಅಗತ್ಯವಸ್ತುಗಳ ಲಾರಿಗಳನ್ನು ತಡೆಯುವುದಿಲ್ಲ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ವಿವರಿಸಿದರು.

guruganesh bhat

|

Feb 26, 2021 | 12:46 PM

ಬೆಂಗಳೂರು: “ಡೀಸೆಲ್ ಬೆಲೆ ಇಳಿಕೆಗೆ 6 ತಿಂಗಳಿಂದ ಮನವಿ ಮಾಡುತ್ತಿದ್ದೇವೆ. ಆದರೂ ಸಿಎಂ ಬಿ.ಎಸ್.ಯಡಿಯೂರಪ್ಪ ಡೀಸೆಲ್ ಬೆಲೆಯನ್ನು ಏಕೆ ಇಳಿಸುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಇಂದು ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ,” ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಲಾರಿ ಮಾಲೀಕರ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದೆ. ಈ ಮುನ್ನ ಹೇಳಿಕೆ ನೀಡಿದ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ‘ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಅವರು ಪ್ರತಿಭಟನೆಯ ಮುಂದಿನ ವಿವರಗಳನ್ನು ತಿಳಿಸಿದರು. ಇಂದು 6 ಲಕ್ಷ ಲಾರಿಗಳು ಪ್ರತಿಭಟನಾ ನಿಮಿತ್ತ ಸ್ಥಗಿತಗೊಳ್ಳಲಿದ್ದು, ಅಗತ್ಯ ವಸ್ತುಗಳ ಲಾರಿಗಳನ್ನು ತಡೆಯುವುದಿಲ್ಲ ಎಂದು ಅವರು ಇಂದಿನ ದೇಶಾದ್ಯಂತ ಲಾರೀ ಮಾಲೀಕರ ಸಂಘ ಕರೆ ಕೊಟ್ಟ ಪ್ರತಿಭಟನೆಯ ಕುರಿತು ವಿವರಿಸಿದರು.

ಸರ್ಕಾರ ಪರಿಸರ ಮಾಲಿನ್ಯವಾಗುತ್ತದೆ ಎಂದು ಹಳೆ ಗಾಡಿಗಳನ್ನು ಸ್ಕ್ರಾಪ್ ಮಾಡಲು ಹೊರಟ್ಟಿದ್ದಾರೆ. ಇತರ ದೇಶಗಳ ಜತೆ ಸೇರಿ ಹಳೆ ಗಾಡಿಗಳನ್ನು ಸ್ಕ್ರ್ಯಾಪ್ ಮಾಡುವ ಲಾರಿ ಮಾಲೀಕರಿಗೆ ಹೊಡೆತ ನೀಡುವ ಸ್ಕ್ರ್ಯಾಪಿಂಗ್ ನೀತಿ ನಿಲ್ಲಿಸಬೇಕು. ಈ ನೀತಿಯಿಂದ 1.65 ಲಕ್ಷ ಲಾರಿ ಮಾಲೀಕರು ಬೀದಿಗೆ ಬರಲಿದ್ದಾರೆ. ಅವರ ಕುಟುಂಬಗಳು ಪರದಾಡಬೇಕಾಗುತ್ತದೆ.

ಇ-ವೇ ಬಿಲ್​ನ ಅಗತ್ಯ ಏಕಿದೆ? ಎಂದು ಪ್ರಶ್ನಿಸಿದ ಅವರು, ಇ-ಬಿಲ್​ನಿಂದ ಲೋಡಿಂಗ್, ಅನ್‌ಲೋಡಿಂಗ್ ವೇಳೆ ಸಮಸ್ಯೆ ಸೃಷ್ಟಿಯಾಗಲಿದೆ. ನಮ್ಮ ಬೇಡಿಕೆಗಳ ಸಂಬಂಧ ಮಾರ್ಚ್ 5ರಂದು ಸಭೆ ಸೇರಲಿದ್ದೇವೆ. ನಂತರ ಮಾ. 15ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ಅವರು ತಿಳಿಸಿದರು.

ಮುಷ್ಕರ ಕೈಬಿಡಿ; ಸಚಿವ ಕೆ.ಎಸ್.ಈಶ್ವರಪ್ಪ ಮನವಿ

ಲಾರಿ ಮಾಲೀಕರ ಮುಷ್ಕರವನ್ನು ಕೈಬಿಡುವಂತೆ ಕೋರಿ ಸಚಿವ ಕೆ.ಎಸ್. ಈಶ್ವರಪ್ಪ ಲಾರಿ ಮಾಲೀಕರಿಗೆ ಮನವಿ ಸಲ್ಲಿಸಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿದ್ದು, ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಗಮನಿಸುತ್ತಿದೆ. ಆದರೆ ಪೆಟ್ರೋಲ್-ಡಿಸೇಲ್ ದರವನ್ನು ಕಡಿಮೆ ಮಾಡುವುದು ನಮ್ಮ ಕೈಯಲ್ಲಿಲ್ಲ. ಕೇಂದ್ರ ಸರಕಾರ ಎಷ್ಟು ಕಡಿಮೆ ಮಾಡಲು ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತದೆ. ಮುಷ್ಕರ ಮಾಡುವುದರಿಂದ ಲಾರಿ ಮಾಲೀಕರಿಗೆ ಅಷ್ಟೇ ಅಲ್ಲ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ, ಕೈಗಾರಿಕೋದ್ಯಮಿಗಳಿಗೆ ತೊಂದರೆ ಆಗಲಿದೆ. ಲಾರಿ ಮಾಲೀಕರಿಗೆ ಅಗತ್ಯವಿರುವ ಅನುಕೂಲವನ್ನು ಕೇಂದ್ರ ಸರ್ಕಾರ ಮಾಡಿಕೊಡಲಿದೆ ಎಂದು ಮನವಿ ಮಾಡಿರುವ ಅವರು, ಮುಷ್ಕರವೇ ಎಲ್ಲದಕ್ಕೂ ಪರಿಹಾರ ಅಲ್ಲ. ಹೀಗಾಗಿ, ಲಾರಿ ಮಾಲೀಕರು ತಮ್ಮ ಮುಷ್ಕರವನ್ನು ಕೈಬಿಡಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೈ ಕಟ್ಟಿ ಕುಳಿತ ಸರ್ಕಾರಗಳಿಗೆ ಎಚ್ಚರಿಕೆ.. ಇಂದು ಲಾರಿ ಮಾಲೀಕರಿಂದ ಒಂದು ದಿನ ಸಾಂಕೇತಿಕ ಧರಣಿ

ನಾಳೆ ಕರ್ನಾಟಕದಲ್ಲೂ ರಸ್ತೆಗಿಳಿಯಲ್ಲ ಲಾರಿಗಳು; ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಣೆ

Follow us on

Most Read Stories

Click on your DTH Provider to Add TV9 Kannada