ನಾಳೆ ಕರ್ನಾಟಕದಲ್ಲೂ ರಸ್ತೆಗಿಳಿಯಲ್ಲ ಲಾರಿಗಳು; ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಣೆ

ನಾಳೆ ಕರ್ನಾಟಕದಲ್ಲೂ ರಸ್ತೆಗಿಳಿಯಲ್ಲ ಲಾರಿಗಳು; ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಣೆ
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ

Chakka Jam: ಡೀಸೆಲ್ ಬೆಲೆ 4 ರೂಪಾಯಿ ಇಳಿಸಬೇಕೆಂದು ಒತ್ತಾಯಿಸಿರುವ ಅವರು, ಈ ಬೇಡಿಕೆಯನ್ನು ಈಡೇರಿಸದಿದ್ದರೆ ಮಾರ್ಚ್ 15 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದರು.

guruganesh bhat

|

Feb 25, 2021 | 1:10 PM


ಬೆಂಗಳೂರು: ರಾಜ್ಯಾದ್ಯಂತ ನಾಳೆ ಲಾರಿ ಮುಷ್ಕರ ನಡೆಯಲಿದ್ದು, ನಾಳೆ ಬೆಳಗ್ಗೆಯಿಂದ ಸಂಜೆವರೆಗೂ ಲಾರಿಗಳು ರಸ್ತೆಗಿಳಿಯುವುದಿಲ್ಲ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಘೋಷಿಸಿದ್ದಾರೆ. ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಅವರು ನಾಳೆ (ಫೆಬ್ರವರಿ 26) ರಂದು ರಾಷ್ಟ್ರೀಯ ಟ್ರೇಡರ್ಸ್ ಯೂನಿಯನ್ ವತಿಯಿಂದ ದೇಶಾದ್ಯಂತ ಆಯೋಜಿಸಿರುವ ಲಾರಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯದಲ್ಲೂ ಲಾರಿಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿಸಿದರು.

ಡೀಸೆಲ್ ಬೆಲೆ 4 ರೂಪಾಯಿ ಇಳಿಸಬೇಕೆಂದು ಒತ್ತಾಯಿಸಿರುವ ಅವರು, ಈ ಬೇಡಿಕೆಯನ್ನು ಈಡೇರಿಸದಿದ್ದರೆ ಮಾರ್ಚ್ 15 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ತಿಳಿಸಿದರು.

ಲಾರಿ ಮಾಲೀಕರ ಸಂಘದ ಬೇಡಿಕೆಗಳು

1). ರಾಜ್ಯ ಸರ್ಕಾರ ವ್ಯಾಟ್ ಕಡಿಮೆ ಮಾಡಬೇಕು.
2). ನೈಸ್ ರೋಡಲ್ಲಿ ಫಾಸ್ಟ್ ಟ್ಯಾಗ್ ಗೆ ಅನುಮತಿ ನೀಡಬೇಕು.
3). ಇನ್ಸುರೆನ್ಸ್ ಹೊರೆ ಇಳಿಸಬೇಕು.
4). ಇ-ವೇ ಬಿಲ್ ಹಿಂಪಡಿಯಬೇಕು.
5). ಮರಳು ನೀತಿ ಜಾರಿ ಮಾಡಬೇಕು.

ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ಒಂದು ಕಿಲೋಮೀಟರ್​ಗೆ ಲಾರಿ ಓಡಿಸಲು ಮಾಲೀಕರಿಗೆ ₹ 36  ವೆಚ್ಚವಾಗುತ್ತಿದೆ. ರಾಜ್ಯದಿಂದ 40 ಸಾವಿರ ಲಾರಿಗಳು ಬೇರೆ ರಾಜ್ಯಗಳಿಗೆ  ಹೋಗುತ್ತಿವೆ. ಹೊರ ರಾಜ್ಯದಲ್ಲಿ ಡೀಸೆಲ್ ದರ ಕಡಿಮೆ ಇದೆ. ಇಂತಹ ಡೀಸೆಲ್ ದರ ಕಡಿಮೆ ಇರುವ ರಾಜ್ಯಗಳಿಂದ ಮಾಲೀಕರು ಡೀಸೆಲ್ ಹಾಕಿಸಿಕೊಂಡು ಬರುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಪ್ರತಿ ಲೀಟರ್ ಡೀಸೆಲ್​ಗೆ ₹ 3 ಸೆಸ್ ಕಡಿಮೆ ಮಾಡುವಂತೆ ರಾಜ್ಯಕ್ಕೆ ಆಗ್ರಹಿಸಲಾಗುವುದು ಎಂದು ಅವರು ವಿವರಿಸಿದರು.

ನೈಸ್ ರಸ್ತೆಯಲ್ಲಿ ಒಟ್ಟು 11 ಟೋಲ್​ಗಳಿದ್ದು, ಫಾಸ್ಟ್ ಟ್ಯಾಗ್ ಮಾಡಿಲ್ಲ. ವಾಹನಗಳು ಕಿಲೋಮೀಟರ್​ಗಟ್ಟಲೇ ಸಾಲು ನಿಲ್ಲುವಂತಾಗಿದೆ. ಕೂಡಲೇ ರಾಜ್ಯ ನೈಸ್ ರಸ್ತೆಯ ಟೋಲ್​ಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸುವಂತೆ ಸೂಚಿಸಲು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕರೋನಾ ಸಮಯದಲ್ಲಿ ಲಾರೀ ಮಾಲೀಕರಿಗೆ ಕಷ್ಟವಾಗುತ್ತಿದೆ. ಕೂಡಲೇ ಇನ್ಸುರೆನ್ಸ್ ಕಡಿಮೆ ಮಾಡಬೇಕು. ಮರಳು ನೀತಿ ಜಾರಿ ಮಾಡಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಲ್ಲಿ ರಾಜ್ಯದ ಹಲವು ಕಡೆ 18 ಕಡೆಗಳಲ್ಲಿ ಟೋಲ್ ಅಳವಡಿಕೆ ಮಾಡಲಾಗಿತ್ತು. ಕೂಡಲೇ ಹೊಸ ಟೋಲ್​ಗಳನ್ನ ಮರಳಿ ಪಡೆಯಬೇಕು ಅಂತ ಆಗ್ರಹ ವ್ಯಕ್ತಪಡಿಸಿದರು.

ನಾಳೆಯದ್ದು ಸಾಂಕೇತಿಕ ಮುಷ್ಕರ ಮಾತ್ರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ‌ ನಾಳೆ ಒಂದು ದಿನ ಸಾಂಕೇತಿಕ ಮುಷ್ಕರ ನಡೆಸಲು ತೀರ್ಮಾನಿಸಲಾಗಿದ್ದು, ಕೂಡಲೇ ಸರ್ಕಾರ ಮಾತುಕತೆಗೆ ಕರೆಯಬೇಕು ಎಂದು ಅವರು ಸಂಘದ ಪರವಾಗಿ ಆಗ್ರಹ ವ್ಯಕ್ತಪಡಿಸಿದರು. ಸರ್ಕಾರ ಮಾತುಕತೆ ನಡೆಸದಿದ್ದರೆ, ಮಾರ್ಚ್ 15 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವದಿ ಮುಷ್ಕರ ನಡೆಸಲಾಗುವುದು. ಮಾರ್ಚ್ 15 ರಿಂದ ರಾಜ್ಯಾದ್ಯಂತ ಲಾರಿಗಳ ಓಡಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.
 
ಕೇಂದ್ರ ಸರ್ಕಾರದ ಜಿಎಸ್​ಟಿ ವೇ ಬಿಲ್, ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕರ ಸಂಘ ಮುಷ್ಕರ ಆಯೋಜಿಸಿದ್ದು, ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಿಂತನೆಯನ್ನು ಸಹ ಲಾರಿ ಮಾಲೀಕರು ಚಿಂತಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್​ ದರ ಏರಿಕೆ ಖಂಡಿಸಿ ಫೆಬ್ರವರಿ 26ರಂದು ದೇಶಾದ್ಯಂತ ಧರಣಿ; ಲಾರಿ ಮಾಲೀಕರ ಬೆಂಬಲ


Follow us on

Most Read Stories

Click on your DTH Provider to Add TV9 Kannada